Nelamangala Tumkur Highway: ನೆಲಮಂಗಲ ಮತ್ತು ತುಮಕೂರು ನಡುವಿನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿದೆ. ಇದರಿಂದ ಪ್ರಯಾಣದ ಅವಧಿ ಇಳಿಕೆಯಾಗಲಿದೆ

ಬೆಂಗಳೂರು: ನೆಲಮಂಗಲ-ತುಮಕೂರು ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಈ ಸಂತಸ ಸಾಕಾರಗೊಳ್ಳಲು ಕನಿಷ್ಠ ಒಂದು ವರ್ಷ ಕಾಯಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India) ಮಾಹಿತಿ ನೀಡಿದೆ. ಜೂನ್ 2026ರೊಳಗೆ ನೆಲಮಂಗಲ ಮತ್ತು ತುಮಕೂರು ನಡುವಿನ ಸರ್ವಿಸ್ ರೋಡ್ ತೆರೆಯಲು NHAI ಪ್ಲಾನ್ ಮಾಡಿಕೊಂಡಿದೆ. ಸಂಪೂರ್ಣ ಹೆದ್ದಾರಿ ಅಗಲೀಕರಣ ಕಾಮಗಾರಿ ಮಾರ್ಚ್ 2027ರೊಳಗೆ ಪೂರ್ಣಗೊಳಿಸುವ ಗುರಿಯನ್ನು NHAI ಹೊಂದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಟೋಲ್‌ ಗೇಟ್‌ನಿಂದ ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿ-48 ರ ಅಂತರ 44.04 ಕಿ.ಮೀ. ಆಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ಭೂಸ್ವಾಧೀನ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು. ಈ ಮೊದಲು ಆಗಸ್ಟ್ 2025ರೊಳಗೆ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು NHAI ಭರವಸೆ ನೀಡಿತ್ತು. ಆದ್ರೆ ಈ ಭರವಸೆಯನ್ನು ಈಡೇರಿಸಲು NHAI ವಿಫಲವಾಗಿದ್ದರಿಂದ ಪ್ರಯಾಣಿಕರು ನಿರಾಸೆಗೊಂಡಿದ್ದಾರೆ. ಆರು ತಿಂಗಳು ಸ್ಥಗಿತಗೊಂಡಿದ್ದ ಈ ಕೆಲಸ ಏಪ್ರಿಲ್‌ನಿಂದ ಮತ್ತೆ ಆರಂಭಗೊಂಡಿದೆ.

ಬೆಂಗಳೂರು-ತುಮಕೂರು ಏನಿದು ಯೋಜನೆ?

ನೆಲಮಂಗಲ ಮತ್ತು ತುಮಕೂರು ನಡುವಿನ ನಾಲ್ಕು ಪಥದ ಹೆದ್ದಾರಿಯನ್ನು ಆರು ಪಥಕ್ಕೆ ಏರಿಸುವ ಯೋಜನೆ ಆಗಸ್ಟ್ 2022ರಲ್ಲಿ ಆರಂಭಗೊಂಡಿತ್ತು. ಎರಡು ಬದಿಗಳಲ್ಲಿ ಸೇವಾ ರಸ್ತೆ ನಿರ್ಮಿಸಿ, ಹೆದ್ದಾರಿ ಭಾಗಕ್ಕೆ ತಂತಿ ಬೇಲಿ ಅಳವಡಿಸುವ ಯೋಜನೆ ಇದಾಗಿದೆ. ಮೊದಲು ಸೇವಾ ರಸ್ತೆ ನಿರ್ಮಾಣ ಮಾಡಿ, ಸಂಚಾರವನ್ನು ತಿರುಗಿಸಿ ಕ್ಯಾರೇಜ್‌ವಯಲ್ಲಿ ಸುಗಮವಾಗಿ ಮಾಡೋದು ಈ ಯೋಜನೆಯ ಉದ್ದೇಶವಾಗಿತ್ತು. ಆದರೆ ಈ ಯೋಜನೆ ಆರಂಭದಿಂದಲೂ ಭೂಸ್ವಾಧೀನ ಪಡೆದುಕೊಳ್ಳುವುದು ಸವಾಲಿನ ಕೆಲಸವಾಗಿತ್ತು. ಜೂನ್ 2026ರೊಳಗೆ ಹೆದ್ದಾರಿ ಅಗಲೀಕರಣ ಮತ್ತು ಸೇವಾ ರಸ್ತೆ ನಿರ್ಮಾಣದ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಇದೀಗ ಮಾರ್ಚ್-2027ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.

ಯೋಜನೆ ವಿಳಂಬಕ್ಕೆ ಕಾರಣಗಳೇನು?

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಈ ಯೋಜನೆ ಆರಂಭವಾದ ಮೊದಲ ದಿನದಿಂದಲೂ 35 ಸಮಸ್ಯೆಗಳನ್ನು ಎದುರಿಸುತ್ತಾ ಬಂದಿತ್ತು. ಈ ಅಡೆತಡೆಗಳಿಂದಾಗಿ ಯೋಜನೆ ವೇಗ ಕುಸಿಯಲಾರಂಭಿಸಿತು. ರೈತರಿಂದ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವುದು, ರೈತರ ಮನವೊಲಿಸಿ ಪರಿಹಾರ ವಿತರಣೆ, ಗುತ್ತಿಗೆದಾರರ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಕೆಲಸ ವಿಳಂಬಕ್ಕೆ ಕಾರಣಗಳಾದವು ಎಂದು ಹೇಳುತ್ತಾರೆ.

ಇದೀಗ ಬಹುತೇಕ ಸಮಸ್ಯೆಗಳು ಪರಿಹಾರ ಸಿಕ್ಕಿದೆ. ಭೂಸ್ವಾಧೀನ ಪ್ರಕ್ರಿಯೆಯೇ ಅತಿದೊಡ್ಡ ಸಮಸ್ಯೆಯಾಗಿತ್ತು. ಇದೀಗ ಆ ಸಮಸ್ಯೆಯೇ ಬಗೆಹರಿದಿದೆ. ಸಮಸ್ಯೆಗಳ ನಿವಾರಣೆ ಬಳಿಕ ಗುತ್ತಿಗೆದಾರರು ಮತ್ತೆ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಪರಿಷ್ಕೃತ ಕಾಲಮಿತಿಯೊಂದಿಗೆ ಕೆಲಸ ಆರಂಭಿಸಲಾಗಿದೆ. 2026ರ ಮಧ್ಯದ ವೇಳೆಗೆ ಸರ್ವಿಸ್ ರೋಡ್ ಪೂರ್ಣಗೊಳಿಸಲು ಯೋಜಿಸಲಾಗಿದೆ. ಮಾರ್ಚ್ 2027ರ ವೇಳೆಗೆ ಹೆದ್ದಾರಿ ಅಗಲೀಕರಣ ಪೂರ್ಣಗೊಳಿಸಲಾಗುವುದು ಎಂದು NHAI ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಯಾಣದ ಅವಧಿಯಲ್ಲಿ ಹೆಚ್ಚಳ

ತುಮಕೂರು ರಸ್ತೆ ಬೆಂಗಳೂರು ನಗರಕ್ಕೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಂಪರ್ಕಿಸುವ ಹೆದ್ದಾರಿಯಾಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಸಹಜವಾಗಿಯೇ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ ಮತ್ತು ಪ್ರಯಾಣದ ಅವಧಿಯೂ ಏರಿಕೆಯಾಗಲಿದೆ. ಕಳೆದ ಮೂರು ವರ್ಷಗಳಿಂದ ಕಾಮಗಾರಿಯಿಂದ ಪ್ರತಿನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ತುಮಕೂರು ನಗರದಿಂದ ಪ್ರತಿನಿತ್ಯ ಬೆಂಗಳೂರಿಗೆ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಕಾಮಗಾರಿ ಅಡಚಣೆಯಿಂದಾಗಿ ಪ್ರಯಾಣಿಕರು ರೈಲು ಮಾರ್ಗ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪೀಕ್ ಅವರ್‌ನಲ್ಲಿ ಯಶವಂತಪುರದಿಂದ ನೆಲಮಂಗಲ ಟೋಲ್ ಗೇಟ್‌ ತಲುಪಲು ಕನಿಷ್ಠ 1 ಗಂಟೆ ಬೇಕಾಗುತ್ತದೆ.

ಸಾರ್ವಜನಿಕರ ಗೋಳು ಏನು?

ಹೆದ್ದಾರಿ ಅಗಲೀಕರಣದ ಕಾಮಗಾರಿ ತೀವ್ರ ಅನಾನುಕೂಲತೆಯನ್ನುಂಟು ಮಾಡಿದೆ. ಅಧಿಕಾರಿಗಳು ಸಮರ್ಪಕವಾಗಿ ಟ್ರಾಫಿಕ್ ನಿರ್ವಹಣೆ ಮಾಡುವಲ್ಲಿ ವಿಫಲವಾಗುತ್ತಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಯೋಜನೆ ಉತ್ತಮವಾಗಿದ್ದು, ಪೂರ್ಣಗೊಳ್ಳಲು 2 ವರ್ಷಕ್ಕಿಂತ ಅಧಿಕ ಸಮಯ ತೆಗೆದುಕೊಂಡಿರೋದು ಬೇಸರದ ಸಂಗತಿಯಾಗಿದೆ. ಯೋಜನೆ ಆರಂಭವಾದಾಗಿನಿಂದ ಅರ್ಧ ಅಗೆದ ಹೆದ್ದಾರಿಯಲ್ಲಿ ಓಡಾಡುತ್ತಿದ್ದೇವೆ. ಅಧಿಕಾರಿಗಳು ಶೀಘ್ರದಲ್ಲಿ ಕಾಮಗಾರಿ ಮುಗಿಸಬೇಕು ಎಂದು ತುಮಕೂರು ಮೂಲದ ಉದ್ಯಮಿ ಮುನಿಯಪ್ಪ ಎಸ್. ಒತ್ತಾಯಿಸಿದ್ದಾರೆ.