Namma Metro ಪಿಲ್ಲರ್ ದುರಂತದ ಕಾರಣ ಇನ್ನೂ ನಿಗೂಢ!
-ತಾಯಿ-ಮಗು ಮೇಲೆ ಮೆಟ್ರೋ ಪಿಲ್ಲರ್ ಬಿದ್ದು ಸಾವು ಕೇಸ್. ಐಐಎಸ್ಸಿ, ರೈಟ್ಸ್, ಮೆಟ್ರೋ, ಹೈದರಾಬಾದ್ ಐಐಟಿ ಪ್ರೊಫೆಸರ್‌ಗಳಿಂದ ತನಿಖೆ. ಘಟನೆ ನಡೆದು ವಾರ ಕಳೆದರೂ ನಿಖರ ಕಾರಣ ತಿಳಿಸದ ಮೆಟ್ರೋ. ತ್ತಿಗೆ ಸಂಸ್ಥೆ ವಿರುದ್ಧವೂ ಸೂಕ್ತ ಕ್ರಮಕೈಗೊಳ್ಳಲು ನಿಗಮದ ಮೀನಮೇಷ
ಬೆಂಗಳೂರು: ಮೆಟ್ರೋ ನಿರ್ಮಾಣ ಹಂತದ ಪಿಲ್ಲರ್ ಕುಸಿದು ತಾಯಿ ಮಗು ಸಾವಿಗೀಡಾದ ದುರ್ಘಟನೆ ನಡೆದು ವಾರ ಕಳೆದರೂ ನಿಖರ ಕಾರಣವನ್ನು ಬಿಎಂಆರ್‌ಸಿಎಲ್ ಬಹಿರಂಗಪಡಿಸಿಲ್ಲ. ಸಂಸ್ಥೆಯ ಆಂತರಿಕ ಸಮಿತಿ ಸೇರಿ ಮೂರು ಸಂಸ್ಥೆಗಳು ತನಿಖೆ ನಡೆಸಿದ್ದರೂ ಈವರೆಗೆ ವರದಿ ಬಗ್ಗೆ ತುಟಿ ಬಿಚ್ಚದಿರುವುದು ಹಲವು ಅನುಮಾನಗಳಿಗೆ ಪುಷ್ಟಿನೀಡುತ್ತಿದೆ.
ಪಿಲ್ಲರ್ ಕುಸಿತಕ್ಕೆ ತಾಂತ್ರಿಕ ಕಾರಣ ತಿಳಿಯಲು ಭಾರತೀಯ ವಿಜ್ಞಾನ ಸಂಸ್ಥೆ, ರೈಟ್ಸ್, ಬಿಎಂಆರ್‌ಸಿಎಲ್ ಆಂತರಿಕ ತನಿಖಾ ತಂಡ ತನಿಖೆ ಕೈಗೊಂಡಿತ್ತು. ಅಲ್ಲದೆ ಹೈದ್ರಾಬಾದ್ ಐಐಟಿ ತಂಡ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ. ಇನ್ನು ಮೂರು ದಿನಗಳಲ್ಲಿ ವರದಿ ಪಡೆದು ತಪ್ಪಿತಸ್ಥರ ಮೇಲೆ ಕ್ರಮ ವಹಿಸುವುದಾಗಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕರು ದುರ್ಘಟನೆ ದಿನ ತಿಳಿಸಿದ್ದರು.
ಮೆಟ್ರೋ ಪಿಲ್ಲರ್, ರಸ್ತೆ ಗುಂಡಿಯಿಂದ ಜನರ ಸಾವಿಗೆ ಸರ್ಕಾರ ಹೊಣೆ: ರಾಮಲಿಂಗಾರೆಡ್ಡಿ
ಆದರೆ, ಪ್ರಕರಣಕ್ಕೆ ಸಂಬಂಧಿಸಿ ಮರುದಿನ ಗುತ್ತಿಗೆ ಆಧಾರದ ಮೂವರು ಎಂಜಿನಿಯರ್‌ಗಳನ್ನು ಅಮಾನತ್ತು ಮಾಡಿದ್ದು, ಗುತ್ತಿಗೆ ಸಂಸ್ಥೆ ನಾಗಾರ್ಜುನ ಕನ್‌ಸ್ೊ್ರಕ್ಷನ್ ಕಂಪನಿಗೆ ಎರಡು ನೋಟಿಸ್ ಕಳುಹಿಸಿದ್ದು ಬಿಟ್ಟರೆ ಯಾವುದೇ ಕ್ರಮವಾಗಿಲ್ಲ. ಪಿಲ್ಲರ್ ಉರುಳಲು ತಾಂತ್ರಿಕ ಕಾರಣ ಹಾಗೂ ಗುತ್ತಿಗೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವ ವಿಚಾರ ಎಲ್ಲಿಗೆ ಬಂತು ಎಂಬುದರ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ‘ಗೌಪ್ಯ’ ಕಾಪಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೆಳ ಹಂತದ ಅಧಿಕಾರಿಗಳಿಗೆ ಶಿಕ್ಷೆ ಉನ್ನತ ಅಧಿಕಾರಿಗಳ ರಕ್ಷಣೆ
ಪ್ರಕರಣದಲ್ಲಿ ಮೇಲ್ನೋಟಕ್ಕೆ ತಪ್ಪಿತಸ್ಥರೆಂದು ಕಂಡುಬಂದ ಗುತ್ತಿಗೆ ಆಧಾರದ ನೌಕರ ಪ್ರಭಾರಿ ಉಪ ಮುಖ್ಯ ಎಂಜಿನಿಯರ್ ವೆಂಕಟೇಶ ಶೆಟ್ಟಿ, ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ ಬೆಂಡಿಗೇರಿ, ಸೈಟ್ ಎಂಜಿನಿಯರ್ ಜಾಫರ್ ಸಾಧಿಕ್ ಎಂಬುವವರನ್ನು ಅಮಾನತು ಮಾಡಲಾಗಿದೆ. ಆದರೆ, ಜವಾಬ್ದಾರಿ ಇರುವ ಬಿಎಂಆರ್‌ಸಿಎಲ್ ಮೇಲಿನ ಹಂತದ ಕಾಯಂ ಅಧಿಕಾರಿಗಳ ಮೇಲೆ ಯಾವುದೇ ಕ್ರಮವಾಗಿಲ್ಲ. ಇದು ಪ್ರಕರಣದಲ್ಲಿ ಮೇಲಿನ ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನ ನಡೆದಿದೆಯೆ? ಕೇವಲ ತೋರಿಕೆಗೆ ಮೂವರನ್ನು ಅಮಾನತ್ತು ಮಾಡಲಾಯಿತೆ? ಎಂಬ ಶಂಕೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಟ್ರೋ ಎಂಪ್ಲಾಯಿಸ್ ಅಸೋಸಿಯೇಶನ್ ‘ತನಿಖೆ ಎಂಬುದು ಕೇವಲ ನಾಮ್ ಕೇ ವಾಸ್ತೆಗೆ ಸೀಮಿತವಾಗಿದ್ದು, ಪ್ರಕರಣದ ದಿಕ್ಕು ತಪ್ಪಿಸಲಾಗುತ್ತಿದೆ. ಅಧಿಕಾರಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ದೂರಿದೆ. ದುರ್ಘಟನೆಗೆ ಗುತ್ತಿಗೆದಾರರ ಜತೆಗೆ ಸಂಸ್ಥೆಯ ಮುಖ್ಯ ಅಧಿಕಾರಿಯಾದ ವ್ಯವಸ್ಥಾಪಕ ನಿರ್ದೇಶಕರು ಸೇರಿ ಕಾರ್ಯ ನಿರ್ವಾಹಕ ಎಂಜಿನಿಯರ್ ಕೂಡ ಕೂಡ ಜವಾಬ್ದಾರಿ ಆಗುತ್ತಾರೆ. ತಾಂತ್ರಿಕ ಮಾಹಿತಿ ಇಲ್ಲದ ಅಧಿಕಾರಿಗಳು ಸಂಸ್ಥೆಯಲ್ಲಿ ಇರುವುದೇ ಅನಾಹುತಕ್ಕೆ ಕಾರಣವಾಗಿದೆ ಎಂದು ಅಸೋಸಿಯೇಶನ್ ಉಪಾಧ್ಯಕ್ಷ ಸತ್ಯನಾರಾಯಣ ಮೂರ್ತಿ ಆರೋಪಿಸಿದ್ದಾರೆ.
ದುರ್ಘಟನೆ ತನಿಖಾ ವರದಿ ಕುರಿತು ವ್ಯವಸ್ಥಾಪಕ ನಿರ್ದೇಶಕರು ಪ್ರತಿಕ್ರಿಯೆ ನೀಡಿಲ್ಲ.
ದಾವಣಗೆರೆ: ಮೆಟ್ರೋ ಪಿಲ್ಲರ್ ದುರಂತ, ಸಾವಿನಲ್ಲಿ ಒಂದಾದ ತಾಯಿ-ಮಗು ಬೇರೆ ಬೇರೆಯಾಗಿ ಅಂತ್ಯಕ್ರಿಯೆ
ಹೊಣೆ ಯಾರು?
ಘಟನೆಯ ದಿನ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಸ್ಟೇಜಿಂಗ್ ಮಾಡಿರಲಿಲ್ಲ, ಬಲವರ್ದನೆಗೆ ಅಳವಡಿಸಿದ್ದ ಗೈರ್ ವೈರ್ ತುಂಡಾದ ಪರಿಣಾಮ ಪಿಲ್ಲರ್ ಕುಸಿದಿದೆ ಎಂದು ತಿಳಿಸಿದ್ದರು. ಪಿಲ್ಲರ್‌ಗೆ ನಾಲ್ಕು ಕಡೆಯಿಂದ ಗೈರ್ ವೈರ್ ಹಾಕದೆ ಕೇವಲ ಎರಡು ಬದಿಯಿಂದ ಮಾತ್ರ ಅಳವಡಿಸಲಾಗಿತ್ತು. ಇದರಿಂದಲೇ ಒಂದೆಡೆ ಭಾರದ ಒತ್ತಡ ಉಂಟಾಗಿ ಪಿಲ್ಲರ್ ಕುಸಿದಿದೆ. ಗುತ್ತಿಗೆ ಸಂಸ್ಥೆ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ. ಆದರೆ, ನಿಖರ ಕಾರಣವೇನು? ದುರಂತಕ್ಕೆ ಯಾರು ಹೊಣೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ತಾಯಿ-ಮಗು ಜೀವ ಹರಣ
ಕಳೆದ ಡಿ.10ರಂದು ನಾಗವಾರ ರಿಂಗ್ ರಸ್ತೆಯ ಎಚ್‌ಬಿಆರ್ ಲೇಔಟ್ ಹೆಣ್ಣೂರು ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ತೇಜಸ್ವಿನಿ, ಮಗ ವಿಹಾನ್ ಧಾರುಣವಾಗಿ ಮೃತಪಟ್ಟಿದ್ದರು. ಘಟನೆಗೆ ತೀವ್ರ ಜನಾಕ್ರೋಶ ವ್ಯಕ್ತವಾಗಿತ್ತು.