ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಮಧ್ಯರಾತ್ರಿ 'ಸ್ಟೋನ್ ಟು ಲೈಫ್' ಎಂಬ 3D ಪ್ರೊಜೆಕ್ಷನ್ ಕಲಾ ಪ್ರದರ್ಶನ ನಡೆಯಿತು. ಈ ಮೂಲಕ ನಿಲ್ದಾಣದ ಗೋಡೆಗಳ ಮೇಲೆ ಕರ್ನಾಟಕದ ಭವ್ಯ ಪರಂಪರೆ ಮತ್ತು ಪೌರಾಣಿಕ ಚಿಹ್ನೆಗಳನ್ನು ಅದ್ಭುತವಾಗಿ ಮೂಡಿಸಲಾಯಿತು. ಭವಿಷ್ಯದಲ್ಲಿ ಇದೇ ತಂತ್ರಜ್ಞಾನವನ್ನು ಬಳಸಿ ಡಿಜಿಟಲ್ ಜಾಹೀರಾತುಗಳನ್ನು ಪ್ರದರ್ಶಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಬೆಂಗಳೂರಿನ ಅತ್ಯಂತ ಜನನಿಬಿಡ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣವು ಶುಕ್ರವಾರ ತಡರಾತ್ರಿ ಅಭೂತಪೂರ್ವ ಸಾಂಸ್ಕೃತಿಕ ಅನುಭವಕ್ಕೆ ಸಾಕ್ಷಿಯಾಯಿತು. ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡ ನಂತರ, ನಿಲ್ದಾಣದ ಬೃಹತ್ ಪ್ಲಾಟ್‌ಫಾರ್ಮ್ ಗೋಡೆಗಳು ಕರ್ನಾಟಕದ ಭವ್ಯ ಪರಂಪರೆ, ಶಾಸನ ಕಲೆ ಹಾಗೂ ಪೌರಾಣಿಕ ಚಿಹ್ನೆಗಳನ್ನು ಜೀವಂತವಾಗಿ ಬಿಂಬಿಸುವ ವಿಶಾಲ ಕ್ಯಾನ್ವಾಸ್ ಆಗಿ ಬದಲಾದವು.

ಔಟ್-ಆಫ್-ಹೋಮ್ ಡಿಜಿಟಲ್ ಜಾಹೀರಾತು ಸಂಸ್ಥೆಯು ಆಯೋಜಿಸಿದ್ದ ಈ 'ಸ್ಟೋನ್ ಟು ಲೈಫ್' ಎಂಬ ಮಧ್ಯರಾತ್ರಿಯ ಕಲಾ ಪ್ರದರ್ಶನವು, ಸುಮಾರು 16,000 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಹರಡಿಕೊಂಡಿದ್ದು, ಪ್ರಯಾಣಿಕರ ವಿಶ್ರಾಂತಿ ಸ್ಥಳವನ್ನು ತಲ್ಲೀನಗೊಳಿಸುವ ದೃಶ್ಯ ವೈಭವದ ತಾಣವಾಗಿ ಪರಿವರ್ತಿಸಿತು.

3D ಪ್ರೊಜೆಕ್ಷನ್ ತಂತ್ರಜ್ಞಾನದ ದೃಶ್ಯ ಕಾವ್ಯ

ಈ ಪ್ರದರ್ಶನಕ್ಕಾಗಿ ಜಪಾನ್ ಮೂಲದ ಅತ್ಯಾಧುನಿಕ 'ಎಪ್ಸನ್ EB-L20000U' ಪ್ರೊಜೆಕ್ಟರ್‌ಗಳನ್ನು ಬಳಸಲಾಗಿತ್ತು. 20,000 ಲುಮೆನ್‌ಗಳ ಭರ್ಜರಿ ಹೊಳಪು ಮತ್ತು HD ರೆಸಲ್ಯೂಶನ್ ಹೊಂದಿರುವ ಈ ಪ್ರೊಜೆಕ್ಟರ್‌ಗಳು, 'ಪ್ರೊಜೆಕ್ಷನ್ ಮ್ಯಾಪಿಂಗ್' ತಂತ್ರಜ್ಞಾನದ ಮೂಲಕ ನಿಲ್ದಾಣದ 3ನೇ ಮತ್ತು 4ನೇ ಪ್ಲಾಟ್‌ಫಾರ್ಮ್‌ಗಳ ಕೆಳಗಿನ ಗೋಡೆಗಳ ಮೇಲೆ ಬೆಳಕಿನ ವಿನ್ಯಾಸಗಳನ್ನು ಮೂಡಿಸಿದವು. ಕಲ್ಲಿನಲ್ಲಿ ಕೆತ್ತಲಾದ ಪ್ರಾಚೀನ ಶಿಲ್ಪಗಳು ನೈಜವಾಗಿ ಚಲಿಸುತ್ತಿರುವಂತೆ ದೃಶ್ಯಾವಳಿಗಳನ್ನು ವಿನ್ಯಾಸಗೊಳಿಸಲಾಗಿತ್ತು.

ಕರ್ನಾಟಕದ 5 ಪೌರಾಣಿಕ ರೂಪಗಳ ಪ್ರದರ್ಶನ

ಮುಂಬೈ ಮೂಲದ ಜನರಲ್ ಒ. ಎಜೆನ್ಸಿ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ, ಕರ್ನಾಟಕದ ಸಾಂಪ್ರದಾಯಿಕ ದೇವಾಲಯ ವಾಸ್ತುಶಿಲ್ಪದಲ್ಲಿ ವಿಶೇಷ ಸ್ಥಾನ ಪಡೆದಿರುವ ಐದು ಪೌರಾಣಿಕ ರೂಪಗಳನ್ನು ಪ್ರದರ್ಶಿಸಲಾಯಿತು. ಸಿಂಹ ಮತ್ತು ಆನೆಯ ಸಂಯೋಜನೆಯ ರಕ್ಷಣಾತ್ಮಕ ಪೌರಾಣಿಕ ಜೀವಿ. ಎತ್ತು ಮತ್ತು ಆನೆಯ ವಿಶಿಷ್ಟ ದ್ವಂದ್ವ ಶಿಲ್ಪಕಲೆ. ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವಾದ ದ್ವಿಶಿರ ಪಕ್ಷಿ. ಜಲಚರ ಮತ್ತು ಪೌರಾಣಿಕ ಮೃಗದ ಸಮ್ಮಿಶ್ರ ರೂಪ. ದೇವಾಲಯಗಳ ಗೋಪುರ ಹಾಗೂ ಬಾಗಿಲುಗಳಲ್ಲಿ ಕಂಡುಬರುವ ಮಂಗಳಕರ ಪ್ರಭಾವಳಿ.

ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದ ಲಲಿತಕಲೆಗಳ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಇತಿಹಾಸಕಾರರಾದ ಶ್ರೀನಿವಾಸ್ ಸಿಸ್ತ್ಲಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪ್ರದರ್ಶಿಸಲಾದ ಶಿಲ್ಪಗಳ ಕಲಾತ್ಮಕ ಹಾಗೂ ಐತಿಹಾಸಿಕ ಮಹತ್ವವನ್ನು ಕಲಾಪ್ರೇಮಿಗಳಿಗೆ ವಿವರಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಡಿಜಿಟಲ್ ಜಾಹೀರಾತಿನ ನವಯುಗ

ಈ ಕಲಾ ಪ್ರದರ್ಶನವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿರದೆ, ನಗರದ ಮೂಲಸೌಕರ್ಯಗಳನ್ನು ವಾಣಿಜ್ಯಿಕವಾಗಿ ಹೇಗೆ ಸೃಜನಶೀಲವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ನಿದರ್ಶನವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಈ OOH ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದೇ 3D ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಬಳಸಿ ಪ್ಲಾಟ್‌ಫಾರ್ಮ್‌ಗಳಲ್ಲಿ ನವೀನ ರೀತಿಯ ಡಿಜಿಟಲ್ ಜಾಹೀರಾತುಗಳನ್ನು ಪ್ರದರ್ಶಿಸಲು ಮುಂದಾಗಿದೆ.

ಸೈನ್‌ಪೋಷ್ಟ್‌ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀಪಾದ್ ಅಶ್ತೇಕರ್ ಮಾತನಾಡಿ, ನಗರವಾಸಿಗಳ ದೈನಂದಿನ ಜೀವನದಲ್ಲಿ ಸಾರ್ವಜನಿಕ ಸ್ಥಳಗಳು ವಹಿಸುವ ಪಾತ್ರವನ್ನು ಪುನರ್ವಿಮರ್ಶಿಸುವುದೇ ಆಧುನಿಕ ಡಿಜಿಟಲ್ ಜಾಹೀರಾತು ತಂತ್ರಜ್ಞಾನದ ಮುಖ್ಯ ಗುರಿಯಾಗಿದೆ. ಮೆಟ್ರೋ ನಿಲ್ದಾಣಗಳಂತಹ ಜಾಗಗಳನ್ನು ಕಲೆ ಮತ್ತು ಜಾಹೀರಾತಿನ ಸಮ್ಮಿಲನವಾಗಿ ಬಳಸುವುದು ಭವಿಷ್ಯದ ಹೊಸ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.