ಜಯನಗರ ಕಾಂಗ್ರೆಸ್ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಇದೀಗ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದೂವರೆ ತಿಂಗಳ ಹಿಂದೆಯೇ ರಾಜೀನಾಮೆ ನೀಡಿದ್ದು, ಇದೀಗ ಅಧಿಕೃತ ಘೋಷಣೆ ಹೊರಬಿದ್ದಿದೆ.

ಬೆಂಗಳೂರು (ಅ.17) ಡಿಕೆ ಶಿವಕುಮಾರ್ ಸಚಿವ ಸಂಪುಟ ರಚನೆ ವೇಳೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅಸಮಾಧಾನಗೊಂಡು ಬಳಿಕ ತಣ್ಣಗಾಗಿದ್ದರು. ಇದೀಗ ಎಲ್ಲವೂ ಸೂಸೂತ್ರವಾಗಿ ನಡೆಯುತ್ತಿರುವಾಗ ರಾಮಲಿಂಗಾ ರೆಡ್ಡಿ ಪುತ್ರಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ ಇದೀಗ ಮಹಿಳಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ರಾಜೀನಾಮೆ ನೀಡಿದ್ದ ಸೌಮ್ಯ ರೆಡ್ಡಿ ಇದೀಗ ಅಧಿಕೃತವಾದಿ ರಾಜೀನಾಮೆ ಪತ್ರ ಬಹಿರಂಗಪಡಿಸಿದ್ದಾರೆ.

ಕೇವಲ ಎರಡು ವರ್ಷಗಳಿಗೆ ಮಾತ್ರ ಒಪ್ಪಿಕೊಂಡಿದ್ದೆ

ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಎರಡು ವರ್ಷಗಳ ಕಾಲಕ್ಕೆ ಮಾತ್ರ ಒಪ್ಪಿಕೊಂಡಿದ್ದೆ. ಮತ್ತೆ ಮುಂದುವರಿಸಲು ಬಯಸುತ್ತಿಲ್ಲ. ಹೊಸ ಅಧ್ಯಕ್ಷರು ಸಿಗುವವರೆಗೆ ತಾವು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಹೊಸಬರಿಗೆ ಅವಕಾಶ ಮಾಡಿಕೊಡಲು ಬಯಸುತ್ತಿದ್ದೇನೆ ಎಂದಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಮಹಿಳೆಯರ ಆರೋಗ್ಯ, ಶಿಕ್ಷಣ, ಆರ್ಥಿಕ ಸಬಲೀಕರಣದ ಬಗ್ಗೆ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದ 5 ಉಚಿತ ಗ್ಯಾರೆಂಟಿ ಯೋಜನೆಗಳು ಹೊಸ ಕ್ರಾಂತಿ ಸೃಷ್ಟಿಸಿದೆ. ಈ ಬದಲಾವಣೆಯನ್ನು ರಾಜ್ಯಾದ್ಯಂತ ಸಂಚರಿಸಿದಾಗ ಹತ್ತಿರದಿಂದ ನೋಡಿದ್ದೇನೆ ಎಂದು ಸೌಮ್ಯ ರೆಡ್ಡಿ ಹೇಳಿದ್ದಾರೆ.

ಮಹಿಳಾ ಸಚಿವರಿಲ್ಲ, ಅಸಮಾಧಾನ ವ್ಯಕ್ತಪಡಿಸಿದ ಸೌಮ್ಯ ರೆಡ್ಡಿ

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಒಬ್ಬರೇ ಒಬ್ಬರು ಮಹಿಳಾ ಸಚಿವರೇ ಇಲ್ಲ. ಈ ವಿಚಾರವನ್ನು ನಾಯಕರ ಗಮನಕ್ಕೆ ತರುತ್ತಿದ್ದೇನೆ ಎಂದು ಸೌಮ್ಯ ರೆಡ್ಡಿ ಹೇಳಿದ್ದಾರೆ. ಕರ್ನಾಟಕದಲ್ಲಿ ಸಚಿವ ಸ್ಥಾನ ನಿರ್ವಹಿಸಬಲ್ಲ ಸಮರ್ಥ ನಾಯಕಿಯರು ಇದ್ದಾರೆ ಅನ್ನೋ ಪರೋಕ್ಷ ಸೂಚನೆಯನ್ನು ಸೌಮ್ಯ ರೆಡ್ಡಿ ನೀಡಿದ್ದಾರೆ.

ರಾಜೀನಾಮೆ ಬಳಿಕ ಸೌಮ್ಯ ರೆಡ್ಡಿ ಮುಂದಿನ ನಡೆ

ಕಳೆದರೆಡು ವರ್ಷ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುವ , ಮಹಿಳೆಯರ ಸಬಲೀಕರಣಕ್ಕೆ ಕೆಲಸ ಮಾಡಿದ್ದೇನೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಮುಂದುವರಿಯುತ್ತೇನೆ, 2028ರಲ್ಲಿ ರಾಜ್ಯದಲ್ಲಿ ಮತ್ತು 2029ರಲ್ಲಿ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.

ಸೌಮ್ಯ ರೆಡ್ಡಿ ರಾಜೀನಾಮೆಯಿಂದ ಇದೀಗ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕಕ್ಕೆ ಹೊಸ ಅಧ್ಯರಕ್ಷ ಹುಡುಕಾಟದಲ್ಲಿದೆ. ಮುಂಬರುವ ಚುನಾವಣೆ, ಪಕ್ಷ ಸಂಘಟನೆ, ಪಂಚ ಗ್ಯಾರೆಂಟಿ ಸೇರಿದಂತೆ ಹಲವು ವಿಚಾರ ಮುಂದಿಟ್ಟುಕೊಂಡು ಮಹಿಳಾ ಕಾಂಗ್ರೆಸ್ ಘಟಕದ ಮಹಿಳಾ ಅದ್ಯಕ್ಷರ ನೇಮಕ ನಡೆಯಲಿದೆ.