ಬೆಂಗಳೂರಿನಲ್ಲಿ ೧೩೨ ಮಿ.ಮೀ. ಭಾರೀ ಮಳೆಯಿಂದಾಗಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಕಾರ, ಕೆಲವೇ ಗಂಟೆಗಳಲ್ಲಿ ೯೦ ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ಪ್ರವಾಹ ಸಹಜ. ಕೆರೆಗಳನ್ನು ಮುಚ್ಚಿರುವುದೂ ಒಂದು ಕಾರಣ. ಕಾಂಗ್ರೆಸ್ ಸರ್ಕಾರ ವಿಶ್ವಬ್ಯಾಂಕ್ ನೆರವಿನಿಂದ ನಿರ್ವಹಣಾ ಕಾರ್ಯ ಕೈಗೊಂಡಿದೆ. ಕಾರ್ಪೊರೇಟರ್‌ಗಳ ಅನುಪಸ್ಥಿತಿಯೂ ಸಮಸ್ಯೆ ಹೆಚ್ಚಿಸಿದೆ.
ಬೆಂಗಳೂರು (ಮೇ 19): ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯ ಪರಿಣಾಮವಾಗಿ ಹಲವೆಡೆ ಜಲಾವೃತಗೊಂಡ ಸ್ಥಿತಿ ಕಂಡುಬಂದಿದೆ. ಆದರೆ, ಬೆಂಗಳೂರಿನಲ್ಲಿ ಸಾಮಾನ್ಯ ಮಳೆಯಾದರೆ ಪ್ರವಾಹ ಸೃಷ್ಟಿಯಾಗುವುದಿಲ್ಲ. ಕೆಲವೇ ಗಂಟೆಗಳಲ್ಲಿ ನಿರಂತರವಾಗಿ 90 ಮಿ.ಮೀ.ಗಿಂತ ಹೆಚ್ಚು ಮಳೆಯಾದಲ್ಲಿ ಮಾತ್ರ ಪ್ರವಾಹ ಸೃಷ್ಟಿ ಆಗುತ್ತದೆ. ಇದು ಮನುಷ್ಯ ನಿರ್ಮಿತವಲ್ಲ, ಪ್ರಕೃತಿ ವಿಕೋಪದಿಂದ ಹೀಗಾದರೆ ಯಾರೇನು ಮಾಡೋದಕ್ಕಾಗುತ್ತದೆ? ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ 100ಕ್ಕೂ ಅಧಿಕ ಕಡೆ ಮನೆಗಳಿಗೆ ನೀರು ನುಗ್ಗಿದೆ ಎಂದು ಮಾಹಿತಿ ನಿಡಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರು ನಗರದಲ್ಲಿ ನಿನ್ನೆ 132 ಮಿಲಿಮೀಟರ್ ಮಳೆಯಾಗಿದೆ. ಒಂದೇ ಸ್ಥಳದಲ್ಲಿ ನಿರಂತರವಾಗಿ ಕೆಲವೇ ಗಂಟೆಗಳ ಅವಧಿಯಲ್ಲಿ 90 ಮಿ.ಮೀ. ಮಳೆಯಾದರೆ ಪ್ರವಾಹ ಸೃಷ್ಟಿ ಆಗುತ್ತದೆ. ಇಲ್ಲಿ 130 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದ್ದರಿಂದ 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಇದೆಲ್ಲವೂ ಭಾರೀ ಮಳೆಯ ಪರಿಣಾಮವಾಗಿದೆ. ಮನುಷ್ಯ ತಪ್ಪು ಮಾಡಿದರೆ ಸರಿ ಮಾಡಬಹುದು, ಪ್ರಕೃತಿ ವಿಕೋಪ ಹೆಚ್ಚಾದಾಗ ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿದರು.
ಈ ಹಿಂದೆ ಸಿದ್ದರಾಮಯ್ಯನವರ ಆಡಳಿತಕಾಲದಲ್ಲಿ ಕೆಲ ರಾಜಕಾಲುವೆಗಳ ಶುದ್ದೀಕರಣ ಮಾಡಲಾಗಿತ್ತು. ಆದರೆ ನಂತರ ಬಂದ ಸರ್ಕಾರಗಳು ಈತ್ತ ಗಮನ ಹರಿಸಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ, ವಿಶ್ವ ಬ್ಯಾಂಕ್ ನಿಂದ ಹಣ ಪಡೆದು ನಿರ್ವಹಣಾ ಕೆಲಸಗಳನ್ನು ಮಾಡುತ್ತಿದೆ. ಇನ್ನು ಬ್ರ್ಯಾಂಡ್ ಬೆಂಗಳೂರು ಹಾಳಾಗಿದೆ ಎಂದು ಟೀಕೆ ಮಾಡುವವರು ‘ಕ್ವಾರ್ಟರ್ ಬೆಂಗಳೂರು’ ಅಂತ ಹೇಳುತ್ತಿದ್ದಾರೆ. ಆದರೆ ಅವರು ಆಡಳಿತದಲ್ಲಿದ್ದಾಗ ಏನು ಮಾಡಿದರು ಎಂಬುದನ್ನೂ ನೋಡಬೇಕು. ಮಧ್ಯದಲ್ಲಿ ಅವರಿಗೆ ಅಧಿಕಾರ ಬಂದಾಗಲೂ ಸಮಸ್ಯೆಗಳು ಕಡಿಮೆಯಾಗಲಿಲ್ಲ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಪ್ರವಾಹ ಉಂಟಾಗಲು ಕೆರೆಗಳನ್ನು ಮುಚ್ಚಿದ್ದೂ ಒಂದು ಕಾರಣವಿದೆ. ಇದೀಗ ನಾನು ಕೆರೆಗಳನ್ನೆಲ್ಲಾ ಯಾರಾರು ಮುಚ್ಚಿದ್ದಾರೆ ಎಂದು ಹೇಳಲು ಹೋಗಲ್ಲ. ಆದರೆ ಈಗಂತೂ ಬೆಂಗಳೂರು ಅಭಿವೃದ್ಧಿ ಸಚಿವರು ಕೈಗೆ ಚಾಟಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರೂ ಬೆಂಗಳೂರಿನವರೇ, ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅಧಿಕಾರಿಗಳಿಂದ ಎಲ್ಲ ಕಡೆಗಳಲ್ಲಿಯೂ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಪೋರೇಟರ್‌ಗಳ ಕೊರತೆ, ನಿರೀಕ್ಷಿತ ಮಳೆ
ಈ ಬಾರಿ ಮಳೆ ನಿರೀಕ್ಷೆಯಲ್ಲೇ ಬಂದಿತು. ಹಲವಾರು ಕಾರ್ಪೋರೇಟರ್‌ಗಳು ಸಮಾವೇಶಕ್ಕೆ ಹೋಗಿರುವ ಕಾರಣವೂ ಸಮಸ್ಯೆ ಹೆಚ್ಚಾಗಿದೆ. ಆದರೆ ಎಲ್ಲರಿಗೂ ಬೆಂಗಳೂರಿನ ಬಗ್ಗೆ ಕಾಳಜಿಯಿದೆ," ಎಂದೂ ಅವರು ಅಭಿಪ್ರಾಯಪಟ್ಟರು. ರಾಜ್ಯದ ಬಹುತೇಕ ನಾಯಕರು ಸಮಾವೇಶಕ್ಕೆ ಹೋಗಿದ್ದಾರೆ. ಅಂಥದ್ದರಲ್ಲಿ ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಭಾರೀ ಮಳೆ ಸುರಿದಿದೆ. ನಮಗೆಲ್ಲರಿಗೂ ಬೆಂಗಳೂರು ನರದ ಬಗ್ಗೆ ಕಾಳಜಿಯಿದೆ. ಬಿಜೆಪಿ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಪಹಲ್ಗಾಮ್ ಘಟನೆ ಕೂಡ ಅನಿರೀಕ್ಷಿತವಾಗಿ ನಡೆಯಿತು. ಆಗ ದೊಡ್ಡವರಾದಾದರೂ ಅಲ್ಲಿಗೆ ಹೋಗಿದ್ದರಾ? ಎಂದು ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದರು.
ಬೆಂಗಳೂರು ಮಹಾಮಳೆಗೆ ಮಹಿಳೆ ಬಲಿ:
ಮಹಾ ಮಳೆಗೆ ಬೆಂಗಳೂರಿನಲ್ಲಿ ಮೊದಲ ಬಲಿಯಾಗಿದೆ. ಶಶಿಕಲಾ (35) ಮಳೆಗೆ ಬಲಿಯಾದ ಮಹಿಳೆ ಆಗಿದ್ದಾರೆ. ಮಹದೇವಪುರದ ಚನ್ನಸಂದ್ರದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಮಹಿಳೆ ಹೌಸ್ ಕೀಪಿಂಗ್ ಕೆಲಸಕ್ಕೆ ಹೋದಾಗ, ಕೆಲಸದ ಸ್ಥಳದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ರಾತ್ರಿ ಮಳೆಗೆ ಗೋಡೆ ನೆನೆದಿದ್ದರಿಂದ ಗೋಡೆ ಕುಸಿದು ಬಿದ್ದು ಶಶಿಕಲಾ ಮೃತಪಟ್ಟಿದ್ದಾರೆ. ಮೃತ ಮಹಿಳೆಗೆ ಇಬ್ಬರು ಸಣ್ಣ ಮಕ್ಕಳಿದ್ದು, ಗಂಡ ಕೂಲಿ ಕೆಲಸಕ್ಕೆ ಹೋಗುತ್ತಾನೆ. ಕಲಬುರಗಿ ಜಿಲ್ಲೆ ಶಹಾಪುರ ಮೂಲದ ಶಶಿಕಲಾ ದಂಪತಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಇದೀಗ ಮಹಿಳೆ ಸಾವಿನಿಂದ ಕುಟುಂಬ ಭಾರೀ ನಷ್ಟ ಅನುಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಮೃತ ಮಹಿಳೆ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿದೆ.


