ಭಾರೀ ಮಳೆಯಿಂದ ಬೆಂಗಳೂರು ಜಲಾವೃತ, ಜನಜೀವನ ಅಸ್ತವ್ಯಸ್ತ. ಕೆಂಗೇರಿಯಲ್ಲಿ 123 ಮಿ.ಮೀ. ಗರಿಷ್ಠ ಮಳೆ ದಾಖಲು. ರಸ್ತೆಗಳು ಮುಳುಗಿ, ಮನೆಗಳಿಗೆ ನೀರು ನುಗ್ಗಿ ಜನ ಪರದಾಟ. ಡಿ.ಕೆ. ಶಿವಕುಮಾರ್‌ರನ್ನು ಟೀಕಿಸಿ ಬಿಜೆಪಿ ವ್ಯಂಗ್ಯಚಿತ್ರ ಹಂಚಿಕೊಂಡಿದೆ. ಇಂದು ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಬೆಂಗಳೂರು (ಮೇ 19): ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇಂತಹ ಮಳೆ ಪ್ರವಾಹದ ನೀರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸರ್ಫಿಂಗ್ ಆಡುತ್ತಿರುವಂತೆ ಬಿಜೆಪಿ ನಾಯಕರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ಅಕ್ಷರಶಃ ಮುಳುಗಿದಂತಾಗಿದೆ. ಯಾವುದಾದರೂ ಸಮಜುದ್ರ ತೀರದಲ್ಲಿ ಮನೆ ಮಾಡಿಕೊಂಡಿದ್ದೇವೆ ಎಂಬಂತೆ ಜನರಿಗೆ ಭಾಸವಾಗುತ್ತಿದೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ರಸ್ತೆಗಳು ಮುಳುಗಿ ನದಿಯಂತಾಗಿವೆ. ಇದನ್ನು ಟೀಕೆ ಮಾಡಿರುವ ಬಿಜೆಪಿ ಬೆಂಗಳೂರಿನ ನೀರಿನ ಮೇಲೆ ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಫಲಕ ಹಿಡಿದು ಸರ್ಫಿಂಗ್ ಆಡುತ್ತಿರುವಂತೆ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ (ಇಲ್ಲಿ ಕ್ಲಿಕ್ ಮಾಡಿ)ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು ನಗರ ಜಲಾವೃತದಿಂದ ಜನಜೀವನ ಅಸ್ತವ್ಯಸ್ತ!
ಭಾನುವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯು ಬೆಂಗಳೂರನ್ನು ತೀವ್ರವಾಗಿ ಕಂಗಾಲು ಮಾಡಿದೆ. ಹಲವು ಪ್ರದೇಶಗಳಲ್ಲಿ ಜಲಾವೃತ ಉಂಟಾಗಿ ಸಂಚಾರ ಹಾಗೂ ಜನವಸತಿಯೇ ಅಸ್ತವ್ಯಸ್ತವಾಗಿದೆ. ಇದು ಬೆಂಗಳೂರಿನಲ್ಲಿ 2025ನೇ ಸಾಲಿನಲ್ಲಿ ಸುರಿದ ಅತ್ಯಂತ ಭೀಕರ ಮಳೆಯಾಗಿದೆ. ನಿನ್ನೆ ರಾತ್ರಿವರೆಗೆ ಬೆಂಗಳೂರು ಶಾಂತವಾಗಿತ್ತು. ಆದರೆ, ಮಧ್ಯರಾತ್ರಿ 1.30 ಗಂಟೆ ನಂತರ ಆರಂಭವಾದ ಧಾರಾಕಾರ ಮಳೆ ಸುಮಾರು 8-9 ಗಂಟೆಗಳ ಕಾಲ ಸುರಿದಿದೆ. ಬೆಂಗಳೂರಿನಲ್ಲಿ ಕೆಲವು ಗಂಟೆಗಳಲ್ಲಿ ಸತತವಾಗಿ 60-70 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿದರೆ ಬೆಂಗಳೂರಿನಲ್ಲಿ ಪ್ರವಾಹ ಸೃಷ್ಟಿ ಆಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ನಿನ್ನೆ ಸರಾಸರಿ 104 ಮಿ.ಮೀ. ಮಳೆಯಾಗಿದೆ. ಹೀಗಾಗಿ ಬೆಂಗಳೂರಿನ ನೂರಾರು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗಿ ಮನೆಗಳಿಗೆ ನೀರು ನುಗ್ಗಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿ ಕೆಂಗೇರಿಯಲ್ಲಿ 123 ಮಿಮೀ ಮಳೆಯಾಗಿದೆ. ಇದು ನಗರದ ಇತರೆ ಎಲ್ಲ ಭಾಗಗಳಿಗಿಂತ ಅತಿಹೆಚ್ಚು ಎಂದು ವರದಿಯಾಗಿದೆ. ಜಯನಗರ, ಬಿಟಿಎಂ ಲೇಔಟ್, ಯಶವಂತಪುರ ಹಾಗೂ ಇತರ ಪ್ರದೇಶಗಳೂ ತೀವ್ರ ಮಳೆಯಿಂದ ಭಾರೀ ಹಾನಿಗೊಳಗಾಗಿವೆ.
ಭಾರತ ಹವಾಮಾನ ಇಲಾಖೆ ಮತ್ತು ಖಾಸಗಿ ಹವಾಮಾನ ತಜ್ಞರ ಪ್ರಕಾರ, ಇಂದು ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಬಂಗಾಳಕೊಲ್ಲಿಯ ಮೇಲೆ ಚಂಡಮಾರುತದ ಚಲನೆಯು ಹಾಗೂ ಮಹಾರಾಷ್ಟ್ರದಿಂದ ಕೇರಳದವರೆಗೆ ಹರಡಿಕೊಂಡಿದೆ. ಇದರ ಪರಿಣಾಮ ಕರ್ನಾಟ ರಾಜ್ಯದ ಮೇಲೂ ಆವರಿಸಿದ್ದುಮ ಭಾರೀ ಮಳೆಯಾಗಲಿದೆ. ಒಟ್ಟು 14 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೂ ಅಲರ್ಟ್ ಘೋಷಣೆ ಮಾಡಿದೆ. ಇನ್ನು ಈ ಬಾರಿತ ಪೂರ್ವ-ಮಾನ್ಸೂನ್ ಮಳೆಯು ಹೆಚ್ಚು ಹಾನಿಯನ್ನುಂಟು ಮಾಡಬಹುದು ಎಂದು ಹೇಳಲಾಗುತ್ತಿದೆ.
ಸಾರಿಗೆ ಸಂಚಾರ ವ್ಯತ್ಯಯ: ಮಳೆಯ ಪರಿಣಾಮವಾಗಿ ಬೆಂಗಳೂರು ನಗರದ ಕೇಂದ್ರ ವ್ಯಾಪಾರ ವಲಯ (Central Business District) ಸೇರಿದಂತೆ ದಕ್ಷಿಣ ಹಾಗೂ ನೈಋತ್ಯ ಭಾಗಗಳು ಅತ್ಯಂತ ಹೆಚ್ಚು ಹಾನಿಗೊಳಗಾದವು. ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡ ಘಟನೆಗಳು ನಡೆದಿವೆ. ಸಾಯಿ ಲೇಔಟ್‌ನಂತಹ ತಗ್ಗು ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಆಗಾಗ್ಗೆ ತಡರಾತ್ರಿ ಸುರಿದ ಮಳೆ ಮಾದರಿಗಳು ಬೆಂಗಳೂರು ನಿವಾಸಿಗಳನ್ನು ಕಂಗೊಳಿಸಿವೆ. ಪೂರ್ವ-ಮಾನ್ಸೂನ್ ಮಳೆಯನ್ನು ನಿರೀಕ್ಷೆ ಮಾಡದೇ ಬೆಂಗಳೂರಿನಲ್ಲಿ ಕೆಲವೊಂದು ಕಾಮಾರಿಗಳನ್ನು ಕೈಗೊಂಡಿದ್ದು, ಮೂಲ ಸೌಕರ್ಯ ಅಭಿವೃದ್ಧಿ ಕಾ್ಯಗಳಿಗೂ ಭಾರೀ ಸಮಸ್ಯೆ ಎದುರಾಗಿದೆ. ಇನ್ನು ಕೆಲವೆಡೆ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಮಾಡುತ್ತಿರುವುದೇ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.


