ಹೆಣ್ಣೂರು-ಬಾಗಲೂರು ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ವಿಳಂಬದಿಂದಾಗಿ ಸರ್ಕಾರ ಸಾರ್ವಜನಿಕರಿಂದ ಬೈಗುಳ ತಿನ್ನುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ಕಾಮಗಾರಿಗಳ ಅನುಷ್ಠಾನ ವಿಚಾರದಲ್ಲಿ ಗುತ್ತಿಗೆದಾರರು ಮತ್ತು ಎಂಜಿನಿಯರ್ಗಳ ನಡುವೆ ಏನೇನಿದೆಯೋ ಗೊತ್ತಿಲ್ಲ. ಆದರೆ, ನೀವು ಮಾಡುವ ತಪ್ಪುಗಳಿಂದ ನಾವು, ಸರ್ಕಾರ ತಲೆ ತಗ್ಗಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯ ಜಂಕ್ಷನ್ನಿಂದ ಗೆದ್ದಲಹಳ್ಳಿವರೆಗಿನ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಚಿವರು, ಕಾಮಗಾರಿ ವಿಳಂಬದ ಕುರಿತು ಅಧಿಕಾರಿಗಳು, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ವಾಹನ ಸಂಚಾರ ಮತ್ತು ಜನ ಸಂಚಾರ ಹೇಗೆ ಸಾಧ್ಯ?
ನಿಮ್ಮಿಂದ ನಾವು ತಲೆ ತಗ್ಗಿಸಬೇಕು. ಸರ್ಕಾರ ತಲೆ ತಗ್ಗಿಸಬೇಕು. ಅಧಿಕಾರಿಗಳು ನಿಮ್ಮನ್ನು ಡಿಫೆಂಡ್ ಮಾಡಿಕೊಳ್ಳುತ್ತಾರೆ. ಏಕೆಂದರೆ, ನಿಮ್ಮ ಮತ್ತು ಅವರ ನಡುವೆ ಏನೇನಿದೆಯೋ ಗೊತ್ತಿಲ್ಲ. ಆದರೆ ಜನರ ಎಲ್ಲಾ ಬೈಗುಳ ನಮ್ಮ ಮೇಲೆಯೇ ಬರುತ್ತವೆ. ಇಲ್ಲಿ 40 ರಿಂದ 50 ಮಹಡಿಗಳ ಕಟ್ಟಡಗಳು ಬರುತ್ತಿವೆ. ಇನ್ನೂ ಇಂತಹ ಎಷ್ಟು ಯೋಜನೆ ಇವೆಯೋ ಗೊತ್ತಿಲ್ಲ. ಆ ಮನೆಗಳಿಂದ ಎಲ್ಲರೂ ರಸ್ತೆಗೆ ಬಂದರೆ ವಾಹನ ಸಂಚಾರ ಮತ್ತು ಜನ ಸಂಚಾರ ಹೇಗೆ ಸಾಧ್ಯ? ಟ್ರಾಫಿಕ್ ಜಾಮ್ನಿಂದ ನಮಗೇ ಬೈಯ್ಯುತ್ತಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಬೈರತಿ ಬಸವರಾಜ್, ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







