ಬೆಂಗಳೂರು [ಅ.11]:  ಪವಿತ್ರ ಆರ್ಥಿಕತೆ, ಕಾರ್ಮಿಕ ಸ್ನೇಹಿ ನೀತಿ ಜಾರಿ, ಶೂನ್ಯ ತೆರಿಗೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಬೆಂಗಳೂರಿನಲ್ಲಿ ಆರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಸೇರಿದಂತೆ 15 ಮಂದಿ ಸಾಮಾಜಿಕ ಕಾರ್ಯಕರ್ತರು, ಲೇಖಕರು, ಕವಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಪವಿತ್ರ ಆರ್ಥಿಕತೆ ಪ್ರಕಾರ ಉತ್ಪಾದನೆಯಲ್ಲಿ ಕನಿಷ್ಠ ಶೇ.60ರಷ್ಟುಕಾರ್ಮಿಕರು ಹಾಗೂ ಶೇ.60ರಷ್ಟುಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಕೆ ಮಾಡಬೇಕು. ಶೇ.40ಕ್ಕಿಂತ ಹೆಚ್ಚು ಯಾಂತ್ರಿಕರಣ ಮಾಡಬಾರದು. ಶೇ.40ಕ್ಕಿಂತ ಹೆಚ್ಚು ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು. ಇಂದಿನ ದೈತ್ಯಾಕಾರದ ಆರ್ಥಿಕತೆ ಇದಕ್ಕೆ ತದ್ವಿರುದ್ಧವಾಗಿದೆ. ಪವಿತ್ರ ಆರ್ಥಿಕತೆ ಅನ್ವಯ ಉತ್ಪಾದನಾ ಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯ ಒಳಗೆ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು. ಅಂದರೆ ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಕರ ವಸ್ತುಗಳನ್ನು ತಯಾರಿಸುವುದಾಗಿದೆ. ಈ ದೈತ್ಯ ಆರ್ಥಿಕತೆಯಲ್ಲಿ ಪೂರ್ಣ ಯಾಂತ್ರಿಕರಣ ಹಾಗೂ ಕಚ್ಚಾ ವಸ್ತುಗಳ ಅಮದು ಮಾಡಿಕೊಳ್ಳುವುದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರಾಮಸೇವಾ ಸಂಘವು ರಾಜ್ಯದಲ್ಲಿ ಪವಿತ್ರ ಅರ್ಥಿಕತೆಯ ಅನುಷ್ಠಾನಕ್ಕೆ ಸಹಕಾರ ನೀಡುತ್ತಿದೆ. ಹಾಗಾಗಿ ನಾವು ಈ ಹೋರಾಟವನ್ನು ಬೆಂಬಲಿಸುತ್ತಿದ್ದೇವೆ. ಪವಿತ್ರ ಅರ್ಥಿಕತೆಯು ಸಮಾಜ ಸ್ನೇಹಿ, ಜನ ಸ್ನೇಹಿ ಹಾಗೂ ಪರಿಸರ ಸ್ನೇಹಿಯಾಗಿದೆ. ಹಾಗಾಗಿ ಇದನ್ನು ತಮಗೆ ನೆನಪಿಸುತ್ತಿದ್ದೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಪತ್ರಕ್ಕೆ ವಂದನಾ ಶಿವ, ಸದಾನಂದ ಮೆನನ್‌, ಸುಮಂತ್‌ ಬ್ಯಾನರ್ಜಿ, ಕೆ.ಎನ್‌. ಶಾಜಿ, ಎಂ.ಪಿ. ಪರಮೇಶ್ವರ್‌, ಚಂದನಗೌಡ, ಶಾಮಸುಂದರಿ, ಉಜ್ರಮ್ಮ, ಅಶೋಕ್‌ ವಾಜಪೇಯಿ, ಪ್ರಸಾದ್‌ ಬಿಡ್ಡಪ್ಪ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ.