ಬೆಂಗಳೂರು [ಅ.12]:  ಮೆಟ್ರೋ ಕಾಮಗಾರಿ ನಡೆಯುತ್ತಿರುವ ಬನ್ನೇರುಘಟ್ಟಮುಖ್ಯರಸ್ತೆ ದುರಸ್ತಿಗಾಗಿ ನಮ್ಮ ಮೆಟ್ರೋ ನಿಗಮ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ನಡೆಸುವಂತೆ ಪಾಲಿಕೆ ಅಧಿಕಾರಿಗಳಿಗೆ ಮೇಯರ್‌ ಗೌತಮ್‌ ಕುಮಾರ್‌ ಸೂಚನೆ ನೀಡಿದ್ದಾರೆ.

ಶುಕ್ರವಾರ ದ್ವಿಚಕ್ರ ವಾಹನದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆ ಗುಂಡಿ ಪರಿಶೀಲಿಸಿದರು. ಬನ್ನೇರುಘಟ್ಟಮುಖ್ಯರಸ್ತೆಯ ಜೇಡಿಮರ ಜಂಕ್ಷನ್‌ನಿಂದ ತಪಾಸಣೆ ಆರಂಭಿಸಿದ ಮೇಯರ್‌ ಗೌತಮ್‌ ಕುಮಾರ್‌, ರಸ್ತೆಯಲ್ಲಿ ಗುಂಡಿಗಳನ್ನು ಕಂಡು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಗ ಪಾಲಿಕೆ ಅಧಿಕಾರಿಗಳು ರಸ್ತೆ ಆಗಲೀಕರಣ ಮತ್ತು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಸಮಜಾಯಿಷಿ ನೀಡಿದರು. ಅದನ್ನು ಒಪ್ಪದ ಮೇಯರ್‌ ಗೌತಮ್‌ ಕುಮಾರ್‌, ಬನ್ನೇರುಘಟ್ಟಮುಖ್ಯರಸ್ತೆ ಸೇರಿದಂತೆ ಮೆಟ್ರೋ ಕಾಮಗಾರಿ ನಡೆಯುತ್ತಿರುವ ನಗರದ ಎಲ್ಲ ರಸ್ತೆಗಳನ್ನು ದುರಸ್ತಿಗೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ಬಳಿಕ ಸಣ್ಣ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗುವ ಬಿಳೇಕಹಳ್ಳಿ ವಾರ್ಡ್‌ನ ಅನುಗ್ರಹ ಲೇಔಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಬೊಮ್ಮನಹಳ್ಳಿ ವಲಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೇಯರ್‌ ಗೌತಮ್‌ ಕುಮಾರ್‌, ಮಳೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ನಗರದೆಲ್ಲೆಡೆ ಒಳಚರಂಡಿ ನೀರು ರಾಜಕಾಲುವೆ ಮೂಲಕ ಕೆರೆಗೆ ಸೇರುತ್ತಿದೆ. ಈ ಕುರಿತು ಜಲಮಂಡಳಿ ಅಧಿಕಾರಿಗಳೊಂದಿಗೆ ಪರಿಶೀಲನಾ ವರದಿ ಸಿದ್ಧಪಡಿಸಲು ತಿಳಿಸಿದರು.

ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಮಾತನಾಡಿ, ರಾಜಕಾಲುವೆ ಒತ್ತುವರಿದಾರರ ಪಟ್ಟಿಸಿದ್ಧಪಡಿಸಿ ಕೂಡಲೆ ತೆರವಿಗೆ ಕ್ರಮವಹಿಸಿ, ವಲಯದಲ್ಲಿ ಒಟ್ಟು 88.6 ಕಿ.ಮೀ. ಮುಖ್ಯರಸ್ತೆಯಿದ್ದು, ಎಲ್ಲಾ ರಸ್ತೆಗಳ ಇಕ್ಕೆಲಗಳಲ್ಲಿರುವ ಪಾದಚಾರಿ ಮಾರ್ಗ, ಕಾಲುವೆ ಹಾಗೂ ರಸ್ತೆ ಗುಂಡಿಗಳನ್ನು ಕೂಡಲೆ ದುರಸ್ತಿಪಡಿಸಿ ಎಂದು ಸೂಚಿಸಿದರು.

ಈ ವೇಳೆ ಉಪ ಮೇಯರ್‌ ರಾಮ್‌ ಮೋಹನ್‌ ರಾಜು, ಪಾಲಿಕೆ ಸದಸ್ಯರಾದ ಭಾಗ್ಯಲಕ್ಷ್ಮೇ ಮುರಳಿ, ಬಿ.ಎಂ.ಶೋಭಾ, ಭಾರತಿ ರಾಮಚಂದ್ರ, ವಲಯ ಜಂಟಿ ಆಯುಕ್ತ ಸೌಜನ್ಯಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

 ರಾಜಕಾಲುವೆ ಹೂಳು ತೆಗೆದಿಲ್ಲ: ಸದಸ್ಯರ ಆರೋಪ

ಅಧಿಕಾರಿಗಳ ಸಭೆಯಲ್ಲಿ ಬೊಮ್ಮನಹಳ್ಳಿ ವಲಯದ ವಿವಿಧ ವಾರ್ಡ್‌ನ ಸದಸ್ಯರು, ‘ರಾಜಕಾಲುವೆಯ ಹೂಳು ತೆಗೆದಿಲ್ಲ. ಹಾಗಾಗಿ, ಮಳೆ ಬಂದರೆ ನಗರಕ್ಕೆ ನೀರು ನುಗ್ಗುತ್ತಿದೆ. ಕೂಡಲೇ ರಾಜಕಾಲುವೆ ಹೂಳು ತೆಗೆಯುವ ಕಾರ್ಯ ಆಗಬೇಕಾಗಿದೆ’ ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದಕ್ಕೆ ಉತ್ತರಿಸಿದ ಪಾಲಿಕೆಯ ಬೃಹತ್‌ ನೀರುಗಾಲುವೆ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌, ಬೊಮ್ಮನಹಳ್ಳಿ ವಲಯದ ವ್ಯಾಪ್ತಿಯಲ್ಲಿ ಒಟ್ಟು 9 ಕೆರೆಗಳಿದ್ದು, ವಲಯದ ರಾಜಕಾಲುವೆಗಳ ಅಭಿವೃದ್ಧಿಗಾಗಿಯೇ .150 ಕೋಟಿ ಮೀಸಲಿಡಲಾಗಿದೆ. ಈಗಾಗಲೇ ಕೆರೆಗಳ ಹಾಗೂ ರಾಜಕಾಲುವೆ ಅಭಿವೃದ್ಧಿ, ದುರಸ್ತಿ ಕಾರ್ಯ ಚಾಲ್ತಿಯಲ್ಲಿದೆ. ಡಿಸೆಂಬರ್‌ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇನ್ನು ರಾಜಕಾಲುವೆ ಒತ್ತುವರಿ ತೆರವಿಗೆ ಸರ್ವೇ ಕಾರ್ಯ ನಡೆಯುತ್ತಿದೆ. ಪಟ್ಟಿಸಿದ್ಧವಾಗುತ್ತಿದ್ದಂತೆ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ವಿವರಿಸಿದರು.