ಬೆಂಗಳೂರು [ಅ.09]: ಮಳೆಯಿಂದ ನೆನೆದಿದ್ದ ವಾಯು ಸೇನೆಯ ಅಧಿಕಾರಿಗಳ ವಸತಿ ಗೃಹದ ಕಾಂಪೌಂಡ್‌ ಕುಸಿದು ಪುತ್ರನ ಎದುರಿನಲ್ಲೇ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಜಾಲಹಳ್ಳಿ ಸಮೀಪದ ಸಿದ್ಧಾಥ್‌ರ್‍ ನಗರದ ಎಸ್‌.ಎನ್‌.ರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಕೆ.ಆರ್‌.ಪುರದ ನಿವಾಸಿ ಪರಮೇಶ್ವರನ್‌ (69) ಮೃತ ದುರ್ದೈವಿ. ತಮ್ಮ ಕುಟುಂಬದ ಜತೆ ವಿಜಯದಶಮಿ ಹಬ್ಬದ ಪ್ರಯುಕ್ತ ಅಯ್ಯಪ್ಪ ದೇವಾಲಯಕ್ಕೆ ಪರಮೇಶ್ವರನ್‌ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ವಾಯು ಸೇನೆಯ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯತನ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತ ಪರಮೇಶ್ವರನ್‌ ಅವರು, ಹಬ್ಬದ ದಿನ ಮೊಮ್ಮಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಸಲುವಾಗಿ ದೇವಾಲಯಕ್ಕೆ ಬಂದಿದ್ದರು. ಪೂಜೆ ಮುಗಿಸಿದ ಬಳಿಕ ಅವರು, ಮನೆಗೆ ಹೊರಟ್ಟಿದ್ದರು. ಆ ವೇಳೆ ವಾಹನ ನಿಲುಗಡೆ ಪ್ರದೇಶದಲ್ಲಿ ಕಾರು ತರಲು ಅವರ ಪುತ್ರ ತೆರಳಿದ್ದಾರೆ. ಆಗ ಪರಮೇಶ್ವರನ್‌ ಅವರು ವಾಯು ಸೇನೆಯ ಅಧಿಕಾರಿಗಳ ವಸತಿ ಗೃಹದ ಕಾಂಪೌಂಡ್‌ ಬಳಿ ನಿಂತಿದ್ದರು. ಆ ವೇಳೆ ಮಳೆಯಿಂದ ನೆನೆದಿದ್ದ ಗೋಡೆ ಅವರ ಮೇಲೆ ಕುಸಿದಿದೆ. ತಕ್ಷಣವೇ ಮೃತರ ಕುಟುಂಬ ಸದಸ್ಯರು, ಪರಮೇಶ್ವರನ್‌ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ಉಸಿರುಗಟ್ಟಿಸಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಯು ಸೇನೆಯ ಅಧಿಕಾರಿಗಳ ವಸತಿ ಗೃಹದ ಕಾಂಪೌಂಡ್‌ 40 ವರ್ಷಗಳ ಹಳೆಯದ್ದಾಗಿದ್ದು, ಇತ್ತೀಚಿಗೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೆನೆದು ಘಟನೆ ಸಂಭವಿಸಿದೆ. ಈ ಬಗ್ಗೆ ಮೃತರ ಕುಟುಂಬದವರು ನೀಡಿದ ದೂರಿನ ಮೇರೆಗೆ ವಾಯು ಸೇನೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಂಗಮ್ಮನಗುಡಿ ಪೊಲೀಸರು ತಿಳಿಸಿದ್ದಾರೆ.