ಬೆಂಗಳೂರು [ಅ.11]:  ಕುಡಿದ ಅಮಲಿನಲ್ಲಿ ರಸ್ತೆ ಮಧ್ಯೆ ಸರ್ಕಾರಿ ಆಸ್ಪತ್ರೆಯ ಶುಶ್ರೂಷಕಿಯೊಬ್ಬರನ್ನು ಅಡ್ಡಗಟ್ಟಿಅಸಭ್ಯವಾಗಿ ವರ್ತಿಸಿದ ತಪ್ಪಿಗೆ ಗಾರೆ ಕೆಲಸಗಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಚಿಕ್ಕಬಾಣವಾರ ಸಮೀಪದ ಗಣಪತಿನಗರದ ನಿವಾಸಿ ಗಂಗಾಧರ ಬಂಧಿತ. ಕೆಲವು ದಿನಗಳ ಹಿಂದೆ ಹೆಸರುಘಟ್ಟರಸ್ತೆಯಲ್ಲಿ ಆರೋಪಿ ಈ ಕುಚೇಷ್ಟೆಮಾಡಿದ್ದ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಸೋಲದೇವನಹಳ್ಳಿ ಠಾಣೆ ಪೊಲೀಸರು ಹೇಳಿದ್ದಾರೆ.

ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿರುವ ಸಂತ್ರಸ್ತೆ, ತಮ್ಮ ಕುಟುಂಬದ ಜತೆ ಚಿಕ್ಕಬಾಣವಾರ ಸಮೀಪ ನೆಲೆಸಿದ್ದಾರೆ. ಅ.4ರಂದು ಕೆಲಸ ಮುಗಿಸಿ ಸಂಜೆ ತುಮಕೂರಿನಿಂದ ರೈಲಿನಲ್ಲಿ ಬಂದು ಅವರು ಮನೆಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.