ಬೇರೊಬ್ಬರಿಗೆ ಹಾನಿ ಮಾಡುವ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಹಚ್ಚುವುದು ಬೇಡ. ಬದಲಿಗೆ ದೀಪಗಳನ್ನು ಹಚ್ಚುವ ಮೂಲಕ ನಮ್ಮ ಹಿಂದೂ ಸಂಪ್ರದಾಯದಂತೆ ದೀಪಾವಳಿ ಆಚರಿಸೋಣ 

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು [ಅ.26]: ‘ಮಾಡದ ತಪ್ಪಿಗೆ ಕಣ್ಣು ಕಳೆದುಕೊಂಡು ಮನೆಯಲ್ಲಿ ಕೂತಿದ್ದೇನೆ. ಪಟಾಕಿ ಸಿಡಿತದಿಂದ ನನಗೆ ಬಂದಿರುವ ನೋವು ಮತ್ತ್ಯಾರಿಗೂ ಬೇಡ. ಇನ್ನಾದರೂ ಜನ ಪಟಾಕಿ ಹೊಡೆಯುವುದನ್ನು ಬಿಡಲಿ. ದೀಪಗಳ ಹಬ್ಬವನ್ನು ದೀಪಗಳಿಂದಲೇ ಆಚರಿಸಿ ಬೆಳಕು ಹರಡಲಿ. ದೀಪಾವಳಿ ಹೆಸರಿನಲ್ಲಿ ನಮ್ಮ ಬದುಕುಗಳನ್ನೇ ಕತ್ತಲು ಮಾಡಿಕೊಳ್ಳುವುದು ಬೇಡ’

-ಇದು ಕಳೆದ ವರ್ಷದ ದೀಪಾವಳಿಯಲ್ಲಿ ಬೇರೊಬ್ಬರು ಹಚ್ಚಿದ್ದ ರಾಕೆಟ್‌ ತಗುಲಿ ಶಾಶ್ವತವಾಗಿ ಕಣ್ಣು ಕಳೆದುಕೊಂಡ ಶಶಾಂಕ್‌ (ಹೆಸರು ಬದಲಿಸಲಾಗಿದೆ) ಅವರು ತಮ್ಮ ನೋವಿನ ನಡುವೆಯೂ ಹಂಚಿಕೊಂಡ ಕಾಳಜಿಯ ನುಡಿ.

ಮನೆ ಮುಂದೆ ನಿಂತಿರುವಾಗ ಬೇರೊಬ್ಬರು ಹಚ್ಚಿದ ರಾಕೆಟ್‌ ತಗುಲಿ ಎಡಗಣ್ಣು ಹೋಯಿತು. ಕಳೆದ ಒಂದು ವರ್ಷದಿಂದ ಮನೆಯವರೆಲ್ಲಾ ನರಳಿದ್ದೀವೆ. ನನ್ನ ದೃಷ್ಟಿಕಳೆದ ಪಟಾಕಿ ನಮ್ಮ ಮನೆಯನ್ನೂ ಬಡವಾಗಿಸಿದೆ. ಸರ್ಕಾರದಿಂದ ಅಥವಾ ಯಾವ ಸಂಘಸಂಸ್ಥೆಗಳಿಂದಲೂ ನಮಗೆ ನೆರವು ಸಿಗಲಿಲ್ಲ. ಜೀವನ ನಿರ್ವಹಣೆಗೆ ಏನು ಮಾಡಬೇಕು ಎಂಬುದೂ ತೋಚುತ್ತಿಲ್ಲ ಎಂದು 18 ವರ್ಷದ ಶಶಾಂಕ್‌ ಅಳಲು ತೋಡಿಕೊಂಡರು.

ಬೇರೊಬ್ಬರಿಗೆ ಹಾನಿ ಮಾಡುವ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಹಚ್ಚುವುದು ಬೇಡ. ಬದಲಿಗೆ ದೀಪಗಳನ್ನು ಹಚ್ಚುವ ಮೂಲಕ ನಮ್ಮ ಹಿಂದೂ ಸಂಪ್ರದಾಯದಂತೆ ದೀಪಾವಳಿ ಆಚರಿಸೋಣ ಎನ್ನುತ್ತಾರೆ ಶಶಾಂಕ್‌.

ಪ್ರತಿ ವರ್ಷ 100 ಮಂದಿ ಕಣ್ಣಿಗೆ ಹಾನಿ!

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು ಪಟಾಕಿ ಹೊಡೆಯದಂತೆ ಹಾಗೂ ಪರಿಸರಸ್ನೇಹಿಯಾಗಿ ಹಬ್ಬ ಆಚರಿಸುವಂತೆ ಸತತವಾಗಿ ಜಾಗೃತಿ ಮೂಡಿಸುತ್ತಿವೆ. ಹೀಗಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ಪಟಾಕಿ ಸಿಡಿತದಿಂದ ಹಾನಿಗೊಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಐದು ವರ್ಷದಿಂದ ಸರಾಸರಿ 100 ಮಂದಿ ಪ್ರತಿವರ್ಷ ಪಟಾಕಿ ಸಿಡಿತದಿಂದ ಹಾನಿಗೊಳಗಾಗುತ್ತಿದ್ದಾರೆ. ಈ ಪೈಕಿ ಶೇ.10ರಷ್ಟುಮಂದಿಯ ಕಣ್ಣಿಗೆ ತೀವ್ರ ಹಾನಿಯಾಗುತ್ತಿದ್ದು, ಪ್ರತಿ ವರ್ಷ 2-3 ಮಂದಿ ಶಾಶ್ವತ ಅಂಧತ್ವಕ್ಕೆ ಒಳಗಾಗುತ್ತಿದ್ದಾರೆ. ಒಟ್ಟು ಗಾಯಾಳುಗಳಲ್ಲಿ ಶೇ.40ರಷ್ಟುಮಂದಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಹೀಗಾಗಿ ಪಟಾಕಿ ಹೊಡೆಯುವ ವೇಳೆ ಮಕ್ಕಳ ಬಗ್ಗೆ ಎಚ್ಚರಿಕೆ ಅತ್ಯಗತ್ಯ.

ಶಬ್ದಮಾಲಿನ್ಯದಿಂದ ಶ್ರವಣ ದೋಷ:

ದೀಪಾವಳಿ ಪಟಾಕಿ ಸಿಡಿತದಿಂದ ವಾಯು ಮಾಲಿನ್ಯದೊಂದಿಗೆ ಶಬ್ದ ಮಾಲಿನ್ಯವೂ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಪಟಾಕಿಗೆ ಬೆಂಕಿ ಹಚ್ಚಿದ ಕ್ಷಣಾರ್ಧದಲ್ಲಿ ಪಟಾಕಿ ಸಿಡಿಯುತ್ತವೆ. ಪಟಾಕಿ ಸಿಡಿಯುವ ಬಗ್ಗೆ ಅರಿವಿಲ್ಲದ ವಾಹನ ಸವಾರರು, ದಾರಿಹೋಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ವಯೋವೃದ್ಧರು, ಪುಟ್ಟಮಕ್ಕಳು ಪಟಾಕಿ ಶಬ್ದಕ್ಕೆ ಬೆಚ್ಚಿ ಬೀಳುತ್ತಿದ್ದಾರೆ. ಪಕ್ಷಿಗಳು ತಮ್ಮ ಆವಾಸತಾಣ ಬಿಟ್ಟು ದಿಕ್ಕಾಪಾಲಾಗಿ ಓಡುವಂತಾಗಿದೆ. ಶಬ್ದದಿಂದ ಕಿವಿ ತಮಟೆಗೆ ತೀವ್ರ ಹಾನಿಯಾಗಿ, ಶ್ರವಣ ದೋಷವೂ ಉಂಟಾಗುತ್ತಿದೆ. ಪ್ರತಿ ಶ್ರವಣದೋಷವುಳ್ಳ ವ್ಯಕ್ತಿಗಳಲ್ಲಿ ಶೇ.2ರಷ್ಟುಮಂದಿ ದೀಪಾವಳಿ ಪಟಾಕಿಯಿಂದಲೇ ಕಿವುಡರಾಗುತ್ತಿದ್ದಾರೆ ಎನ್ನುತ್ತವೆ ವೈದ್ಯಕೀಯ ವರದಿಗಳು.

ಮಾಲಿನ್ಯ ಪ್ರಮಾಣ ಶೇ.35ರಷ್ಟುಹೆಚ್ಚಳ:

ದೀಪಾವಳಿಯ ಮೂರು ದಿನ ಬೆಂಗಳೂರು ನಗರದಲ್ಲಿ ಸಾಮಾನ್ಯ ದಿನಗಳಿಗಿಂತ ಶೇ.35ರಿಂದ 37ರಷ್ಟುಹೆಚ್ಚು ವಾಯುಮಾಲಿನ್ಯ ಉಂಟಾಗುತ್ತಿರುವುದಾಗಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಬೆಂಗಳೂರು ನಗರದಲ್ಲಿ ವಿವಿಧ ಕಡೆಗಳಲ್ಲಿ ವಾಯು ಗುಣಮಟ್ಟತಪಾಸಣೆ ಯಂತ್ರಗಳನ್ನು ಅಳವಡಿಸಿತ್ತು. ಅವುಗಳಲ್ಲಿನ 13 ವಾಯು ಗುಣಮಟ್ಟತಪಾಸಣೆ ನಡೆಸಿದಾಗ, 8 ಕೇಂದ್ರಗಳಲ್ಲಿ ನ್ಯಾಷನಲ್‌ ಆಂಬಿಯೆಂಟ್‌ ಏರ್‌ ಕ್ವಾಲಿಟಿ ಸ್ಟಾಂಡರ್ಡ್ಸ್ (ಎನ್‌ಎಎಕ್ಯೂಎಸ್‌) ನಿಗದಿಪಡಿಸಿರುವ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿತ್ತು.

ಎನ್‌ಎಎಕ್ಯೂಎಸ್‌ ಪ್ರಕಾರ ಗಂಧಕದ ಡೈಆಕ್ಸೈಡ್‌(ಎಸ್‌ಒ2) ಹಾಗೂ ಸಾರಜನಕ ಡೈ ಆಕ್ಸೈಡ್‌(ಎನ್‌ಒ2) ಪ್ರಮಾಣ ಪ್ರತಿ ಸಾವಿರ ಲೀಟರ್‌ ಗಾಳಿಯಲ್ಲಿ 80 ಮೈಕ್ರೋ ಗ್ರಾಂ ಇರಬೇಕು. ಅದೇ ರೀತಿ ಪರ್ಟಿಕ್ಯೂಲೇಟ್‌ ಮ್ಯಾಟರ್‌ (ಪಿಎಂ10) ಹಾಗೂ ಶ್ವಾಸಕೋಶಕ್ಕೆ ಭಾರಿ ಹಾನಿಯುಂಟು ಮಾಡುವ ಪಿಎಂ2.5 ಪ್ರಮಾಣ 60 ಮೈಕ್ರೋ ಗ್ರಾಂಗಳಿಗಿಂತ ಹೆಚ್ಚಾಗಿರುವುದು ವರದಿಯಾಗಿತ್ತು.

ಬಾಕ್ಸ್‌...ಒಂದು ಸಾವಿರ ಟನ್‌ ತ್ಯಾಜ್ಯ ಉತ್ಪತ್ತಿ

ದೀಪಾವಳಿ ಹಬ್ಬದಲ್ಲಿ ಸುಮಾರು 1 ಸಾವಿರ ಟನ್‌ನಷ್ಟುರಾಸಾಯನಿಕ ತ್ಯಾಜ್ಯವೂ ಉತ್ಪತ್ತಿಯಾಗುತ್ತಿದೆ. ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯಕ್ಕಿಂತ 1 ಸಾವಿರ ಟನ್‌ ತ್ಯಾಜ್ಯ ಹೆಚ್ಚುವರಿಯಾಗಿ ಉತ್ಪಾದನೆಯಾಗಲಿದೆ. ಇದರಲ್ಲಿ ಶೇ.50 ರಷ್ಟುಪಟಾಕಿ ತ್ಯಾಜ್ಯವಾಗಿರುವುದರಿಂದ ರಾಸಾಯನಿಕ ಪದಾರ್ಥಗಳು ನೀರಿನ ಮೂಲ, ಅಂತರ್ಜಲ ಸೇರುವ ಮೂಲಕ ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಮತ್ತಷ್ಟುದುಷ್ಪರಿಣಾಮ ಉಂಟು ಮಾಡುತ್ತದೆ. ಜತೆಗೆ ಕಸ ವಿಲೇವಾರಿ ಮಾಡುವ ಪೌರಕಾರ್ಮಿಕ ಸಿಬ್ಬಂದಿಗೂ ಸಮಸ್ಯೆ ಉಂಟು ಮಾಡುತ್ತದೆ.

ಗಾಯಗೊಂಡವರ ವಿವರ

ವರ್ಷ ಕಣ್ಣಿನ ಗಾಯ

2013 130

2014 112

2015 78

2016 93

2017 65

2018 79

ಬಾಕ್ಸ್‌...

ಶಬ್ದ ಮಾಲಿನ್ಯ ಪ್ರಮಾಣ (ಡೆಸಿಬಲ್‌ಗಳಲ್ಲಿ)

ನಿಮ್ಹಾನ್ಸ್‌ ಆಸ್ಪತ್ರೆ 68.1

ದೊಮ್ಮಲೂರು 79

ಮಡಿವಾಳ ಕೆರೆ 65

ಪೀಣ್ಯಾ ಕೈಗಾರಿಕಾ ಪ್ರದೇಶ 62.9

ಯಶವಂತಪುರ ಕೈಗಾರಿಕಾ ಪ್ರದೇಶ 76.7

ಮಕ್ಕಳಿಗೆ ಪಟಾಕಿ ಹೊಡೆಯುವ ಹುಚ್ಚು ಉತ್ಸಾಹ ಹೆಚ್ಚಾಗಿರುತ್ತದೆ. ಆದರೆ, ಪೋಷಕರು ಅದನ್ನು ತಡೆಯಬೇಕು. ಮಕ್ಕಳ ಉತ್ಸಾಹವನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಪೋಷಕರ ಮೇಲಿದ್ದರೂ, ಪಟಾಕಿ ವಿಷಯದಲ್ಲಿನ ಪ್ರೋತ್ಸಾಹ ಮಕ್ಕಳ ಭವಿಷ್ಯಕ್ಕೆ ಕಂಟಕವಾಗಲಿದೆ. ನನ್ನ ಮಗ ಕಳೆದ ವರ್ಷದಿಂದ ಅನುಭವಿಸುತ್ತಿರುವ ನೋವು ನೋಡಲಾಗುತ್ತಿಲ್ಲ. ಮಗನ ದೃಷ್ಟಿಇನ್ನೂ ಸರಿ ಹೋಗಿಲ್ಲ. ನಿಮ್ಮ ಮಕ್ಕಳನ್ನಾದರೂ ಪಟಾಕಿಯಿಂದ ದೂರವಿಡಿ.

-ವೆಂಕಟೇಶ್‌, ಗಾಯಾಳು ನಿತಿನ್‌ ತಂದೆ

ಪಟಾಕಿ ಹೊಡೆಯಲು ಹೋಗಿ ನನ್ನ ಅಣ್ಣನ ಮಗ ಅಶೋಕ್‌ ಗಾಯ ಮಾಡಿಕೊಂಡಿದ್ದಾನೆ. ಪಟಾಕಿ ವಿಚಾರ ಕೇವಲ ಪರಿಸರಕ್ಕೆ ಮಾತ್ರವಲ್ಲ ನಮಗೂ ನೇರವಾಗಿ ನೋವುಂಟು ಮಾಡುತ್ತದೆ. ನನ್ನ ಅಣ್ಣನ ಮಗನ ನೋಡಿದಾಗಲೆಲ್ಲಾ ಪಟಾಕಿ ಹೊಡೆಯುವುದು ಬೇಡ ಎಂದೇ ಎನಿಸುತ್ತದೆ. ಇದೇ ಮಾತು ಬೇರೆಯವರಿಗೂ ಹೇಳುತ್ತೇನೆ. ಬೆಂಕಿ, ಪಟಾಕಿಯೊಂದಿಗೆ ಚೆಲ್ಲಾಟ ಬೇಡ.

-ಸುದರ್ಶನ್‌, ಗಾಯಾಳು ಅಶೋಕ್‌ ಕುಮಾರ್‌ ಸಂಬಂಧಿ.

ಪುಟ್ಟಮಕ್ಕಳು ಅದರಲ್ಲೂ 5 ವಷಕ್ಕಿಂತ ಕಡಿಮೆ ವಯಸ್ಸಿನ ಚಿಣ್ಣರನ್ನು ಪಟಾಕಿಯಿಂದ ದೂರವಿಡಿ. ಬೀದಿಯಲ್ಲಿ ಪಟಾಕಿ ಸಿಡಿಸುವಾಗ ಮಕ್ಕಳನ್ನು ಹೊರಗಡೆ ಬಿಡಬೇಡಿ. ನನ್ನ ಮಗ ಯಾರೋ ಮಾಡಿದ ತಪ್ಪಿಗೆ ಗಾಯಾಳು ಆಗಿದ್ದಾನೆ. ಅದರ ನೋವು ಇಡೀ ಮನೆಯವರು ಅನುಭವಿಸುತ್ತಿದ್ದೇವೆ. 4 ವರ್ಷದ ಮಗನಿಗೆ ಉಂಟಾಗಿರುವ ಗಾಯ ನಮ್ಮನ್ನು ಕಾಡುತ್ತಿದೆ.

-ಸುಂದರ್‌, ಗಾಯಾಳು ಅರ್ಜುನ್‌ ಕೃಷ್ಣ.