ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಕೆ.ಆರ್. ಪುರದಲ್ಲಿ ನೂತನ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲು ಬೃಹತ್ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 5 ಎಕರೆ ಜಮೀನು ಗುರುತಿಸಲಾಗಿದ್ದು, ನವೆಂಬರ್ 16ರಂದು ಜಂಟಿ ಸರ್ವೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬೆಂಗಳೂರು (ನ.06): ಬೆಂಗಳೂರು ನಗರ ತೀವ್ರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಸುಸಜ್ಜಿತ ಸಾರಿಗೆ ಸೌಲಭ್ಯ ಕಲ್ಪಿಸಲು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಪುರದಲ್ಲಿ (KR Puram) ನೂತನ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲು ಬೃಹತ್ ಯೋಜನೆ ರೂಪಿಸಲಾಗಿದೆ.
ಯೋಜನೆಯ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಾಧ್ಯತೆಗಳು, ಭೂಸ್ವಾಧೀನ, ಪರಿಹಾರ ವಿತರಣೆ ಮತ್ತು ಅಗತ್ಯ ಮೂಲಸೌಕರ್ಯಗಳ ಕುರಿತು ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳ ಸಮನ್ವಯ ಸಭೆ ಶುಕ್ರವಾರ ನಡೆಯಿತು.
ಮುಖ್ಯರಸ್ತೆ ಸಮೀಪ 5 ಎಕರೆ ಜಾಗ ಗುರುತು
ಕೆ.ಆರ್. ಪುರ ಭಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ಅಗತ್ಯತೆ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಹಂತದಲ್ಲೂ ಚರ್ಚೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಆರ್. ಪುರದಿಂದ ಭಟ್ಟರಹಳ್ಳಿ ನಡುವಿನ ಮುಖ್ಯರಸ್ತೆ ಸಮೀಪ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲು ಸೂಕ್ತವಾದ ಸುಮಾರು 5 ಎಕರೆ ಜಮೀನನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯರಸ್ತೆಗೆ ಸಮೀಪವೇ ಬಸ್ ನಿಲ್ದಾಣ ನಿರ್ಮಾಣವಾದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಬಸ್ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಟ್ರಾಫಿಕ್ ಜಾಮ್ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಐಟಿಐ ಜಮೀನು ಲಭ್ಯತೆ ಮತ್ತು ಕೆಎಸ್ಆರ್ಟಿಸಿ ಆಸಕ್ತಿ
ಸಭೆಯಲ್ಲಿ ಐಟಿಐ ಲಿಮಿಟೆಡ್ಗೆ (ITI Limited) ಸೇರಿದ ಜಮೀನಿನ ಲಭ್ಯತೆ ಹಾಗೂ ಕೆಎಸ್ಆರ್ಟಿಸಿ (KSRTC) ವತಿಯಿಂದ ಸುಮಾರು 5 ಎಕರೆ ಜಮೀನು ಪಡೆದು ಬಸ್ ನಿಲ್ದಾಣ ನಿರ್ಮಿಸುವ ಆಸಕ್ತಿಯ ಕುರಿತು ಗಂಭೀರ ಚರ್ಚೆ ನಡೆಯಿತು. ಜಮೀನಿನ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಪರಿಹಾರ ನಿಗದಿಪಡಿಸುವುದು, ಭೂ ವಿನಿಮಯ ಸಾಧ್ಯತೆಗಳು ಹಾಗೂ ಭೂಸ್ವಾಧೀನ ಕಾಯ್ದೆಯಡಿ ಜಮೀನು ಪಡೆಯುವ ಪ್ರಕ್ರಿಯೆಗಳನ್ನು ನಿಯಮಾನುಸಾರ ಪರಿಶೀಲಿಸಲು ನಿರ್ದೇಶಿಸಲಾಯಿತು. ಇದಲ್ಲದೆ, ಐಟಿಐ ಲಿಮಿಟೆಡ್ ಸಮೀಪ ನಕ್ಷೆಯಲ್ಲಿದ್ದರೂ ಸ್ಥಳದಲ್ಲಿ ಒತ್ತುವರಿಯಾಗಿದ್ದ 80 ಮೀಟರ್ ಉದ್ದದ ರಸ್ತೆಯ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಿ, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ನವೆಂಬರ್ 16ರಂದು ಜಂಟಿ ಸರ್ವೆಗೆ ಸೂಚನೆ
ಯೋಜನೆಯ ವೇಗದ ಅನುಷ್ಠಾನಕ್ಕಾಗಿ ನವೆಂಬರ್ 16ರಂದು ಜಂಟಿ ಸರ್ವೆ ನಡೆಸಲು ನಿರ್ಧರಿಸಲಾಗಿದೆ. ಐಟಿಐ ಲಿಮಿಟೆಡ್ ಸಂಸ್ಥೆಯ ಪ್ರತಿನಿಧಿಗಳು, ಎಡಿಎಲ್ಆರ್ (ADLR), ಕರ್ನಾಟಕ ಗೃಹ ಮಂಡಳಿ (KHB) ಹಾಗೂ ಅರಣ್ಯ/ಸಂಬಂಧಿತ ಇಲಾಖೆ ಅಧಿಕಾರಿಗಳು ಈ ಜಂಟಿ ಸರ್ವೆಯಲ್ಲಿ ಭಾಗವಹಿಸಲಿದ್ದಾರೆ. ಸರ್ವೆಗೂ ಮುನ್ನ ಸಿಡಿಪಿ (CDP) ರಸ್ತೆ ನಕ್ಷೆಯ ಪ್ರಕಾರ ಅಲೈನ್ಮೆಂಟ್ ಸಿದ್ಧಪಡಿಸಿ, ರಸ್ತೆ ಮಾರ್ಗದಲ್ಲಿರುವ ಒತ್ತುವರಿ ಹಾಗೂ ಗಿಡಗಳನ್ನು ತೆರವುಗೊಳಿಸಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.
ಲಿಖಿತ ವರದಿ ನೀಡಿ ತಕ್ಷಣ ಕೆಲಸ ಆರಂಭಿಸಿ!
ಅಧಿಕಾರಿಗಳು ಕೇವಲ ಮೌಖಿಕವಾಗಿ ಮಾಹಿತಿ ನೀಡುವುದನ್ನು ನಿರಾಕರಿಸಿದ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್, 'ಸ್ಥಳದ ಲಭ್ಯತೆ, ಭೂಸ್ವಾಧೀನದ ತಾಂತ್ರಿಕ ವಿವರಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಯಾವುದೇ ವಿಳಂಬವಿಲ್ಲದೆ ತಕ್ಷಣದಿಂದಲೇ (ನವೆಂಬರ್ 7) ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸಿ' ಎಂದು ಆದೇಶಿಸಿದರು.
ಸಭೆಯ ಬಳಿಕ ಅಪರ ಆಯುಕ್ತರ ನಿರ್ದೇಶನದಂತೆ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರ ತಂಡವು ಐಟಿಐ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಸಭೆಯಲ್ಲಿ ಮುಖ್ಯ ಅಭಿಯಂತರರಾದ ವಿಶ್ವನಾಥ್ ಜೆ., KHB, PWD, DDLR, ಐಟಿಐ ಲಿಮಿಟೆಡ್ ಹಾಗೂ ಪಾಲಿಕೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.






