ಬೆಂಗಳೂರಿನ ಐತಿಹಾಸಿಕ ಕುಮಾರ ಕೃಪಾ ಅತಿಥಿಗೃಹವನ್ನು ನವೀಕರಿಸಿ ಡಿಕೆ ಶಿವಕುಮಾರ್ ಅವರ ಅಧಿಕೃತ ನಿವಾಸವಾಗಿ ಮಾಡಲಾಗಿದೆ. ಇದಕ್ಕೆ 'ಗಂಗಾ' ಎಂದು ಹೊಸ ನಾಮಕರಣ ಮಾಡಲಾಗಿದ್ದು, ಬಿಗಿ ಭದ್ರತೆಯೊಂದಿಗೆ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ನೆರವೇರಲಿದೆ.
ಬೆಂಗಳೂರು (ನ.15): ರಾಜ್ಯ ರಾಜಕಾರಣದ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಪ್ರತಿಷ್ಠಿತ 'ಕುಮಾರ ಕೃಪಾ' (Kumara Krupa) ಅತಿಥಿಗೃಹವೀಗ ಮುಖ್ಯಮಂತ್ರಿ ಡಿ.ಕೆ. ಶಿಕುಮಾರ್ ಅವರಿಗೆ ಅಧಿಕೃತ ನಿವಾಸವಾಗಿ ಸಜ್ಜುಗೊಂಡಿದೆ. ಅಷ್ಟೇ ಅಲ್ಲದೆ, ಈ ನವೀಕೃತ ಬಂಗಲೆಗೆ ಈಗ ಅಧಿಕೃತವಾಗಿ 'ಗಂಗಾ' (Ganga) ಎಂದು ಹೊಸ ನಾಮಕರಣ ಮಾಡಲಾಗಿದ್ದು, ಭವನದ ಮುಂಭಾಗದಲ್ಲಿ 'ಗಂಗಾ' ಎಂಬ ನೂತನ ನಾಮಫಲಕವನ್ನು ಸಹ ಅಳವಡಿಸಲಾಗಿದೆ.
ಕಾರ್ತಿಕ ಸೋಮವಾರದ ಶುಭ ಮುಹೂರ್ತದಲ್ಲಿ ಗೃಹಪ್ರವೇಶ:
ಹಳೆಯ ಕುಮಾರ ಕೃಪಾ ಕಟ್ಟಡವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತ ನಿವಾಸವನ್ನಾಗಿ ಪರಿವರ್ತಿಸಲು ಕಳೆದ ಹಲವು ತಿಂಗಳುಗಳಿಂದ ನವೀಕರಣ ಕಾಮಗಾರಿ ನಡೆಸಲಾಗಿತ್ತು. ಇದೀಗ ಸಂಪೂರ್ಣ ನವೀಕರಣಗೊಂಡಿರುವ ಈ 'ಗಂಗಾ' ನಿವಾಸಕ್ಕೆ ನಾಳೆ ಕಾರ್ತಿಕ ಮಾಸದ ಸೋಮವಾರದ ಶುಭ ಮುಹೂರ್ತದಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ಗೃಹಪ್ರವೇಶ ನೆರವೇರಲಿದೆ.
ರಾತ್ರಿಯಿಂದಲೇ ಆರಂಭವಾದ ಧಾರ್ಮಿಕ ವಿಧಿವಿಧಾನ, ಹೋಮ-ಹವನ:
ಗೃಹಪ್ರವೇಶದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ನೂತನ 'ಗಂಗಾ' ನಿವಾಸದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಖ್ಯಾತ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹೋಮ, ವಾಸ್ತು ಶಾಂತಿ ಸೇರಿದಂತೆ ವಿವಿಧ ಹೋಮ-ಹವನಗಳು ಜರುಗಿದವು. ಈ ಪೂಜಾ ಕೈಂಕರ್ಯಗಳಲ್ಲಿ ಮುಖ್ಯಮಂತ್ರಿಗಳ ಪತ್ನಿ, ಕುಟುಂಬದ ಸದಸ್ಯರು ಹಾಗೂ ಅತ್ಯಂತ ಆಪ್ತರು ಮಾತ್ರ ಭಾಗಿಯಾಗಿದ್ದರು. ಸಂಜೆಯ ಧಾರ್ಮಿಕ ಪೂಜೆಗಳು ಮುಗಿದ ನಂತರ ಕುಟುಂಬಸ್ಥರು ಮತ್ತು ಪುರೋಹಿತರು ಅಲ್ಲಿಂದ ನಿರ್ಗಮಿಸಿದ್ದು, ನಾಳೆ ಬೆಳಿಗ್ಗೆ 10 ಗಂಟೆಗೆ ಮುಖ್ಯ ಗೃಹಪ್ರವೇಶ ಪೂಜಾ ಕಾರ್ಯಗಳು ನಡೆಯಲಿವೆ.
ಬಿಗಿ ಪೊಲೀಸ್ ಬಂದೋಬಸ್ತ್, ಮಾಧ್ಯಮಗಳಿಗೂ ನೋ ಎಂಟ್ರಿ!:
ಪೂಜಾ ಕಾರ್ಯಕ್ರಮಗಳು ಅತ್ಯಂತ ಗೌಪ್ಯ ಹಾಗೂ ಕೌಟುಂಬಿಕವಾಗಿ ನಡೆಯುತ್ತಿರುವುದರಿಂದ ನವೀಕೃತ ನಿವಾಸದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಸಾರ್ವಜನಿಕರು ಮಾತ್ರವಲ್ಲದೆ, ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ನಿರಾಕರಿಸಲಾಗಿದೆ. ಗೇಟ್ ಬಳಿಯೇ ಬ್ಯಾರಿಕೇಡ್ ಹಾಕಿ ತಡೆದಿರುವ ಪೊಲೀಸರು, ಒಳಗೆ ತೆರಳಲು ಯಾರಿಗೂ ಅನುಮತಿ ನೀಡಿಲ್ಲ.
ಐತಿಹಾಸಿಕ ಹಿನ್ನೆಲೆಯುಳ್ಳ ಕುಮಾರಕೃಪಾ ಗೆಸ್ಟ್ಹೌಸ್ಗೆ 'ಗಂಗಾ' ಎಂದು ಮರುನಾಮಕರಣ ಮಾಡಿ, ವಾಸ್ತು ಪ್ರಕಾರ ನವೀಕರಿಸಿ ಸಿಎಂ ಅಧಿಕೃತ ಗೃಹವನ್ನಾಗಿ ಮಾಡಿಕೊಂಡಿರುವುದು ಇದೀಗ ರಾಜಕೀಯ ವಲಯದಲ್ಲೂ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.














