ಬೆಂಗಳೂರು, [ನ.27]: ಕರ್ತವ್ಯ ಲೋಪದಿಂದಾಗಿ ಬಿಬಿಎಂಪಿ ಹೈಕೋರ್ಟ್ ನಿಂದ ಅದೆಷ್ಟು ಸಲ ಉಗಿಸಿಕೊಂಡಿದಿಯೋ ಲೆಕ್ಕವಿಲ್ಲ. ಈಗ ಬೆಂಗಳೂರಲ್ಲಿ ರಸ್ತೆ ಗುಂಡಿಗಳಿಂದ ಅಪಘಾತ ವಿಚಾರವಾಗಿ ಬಿಬಿಎಂಪಿ ವಿರುದ್ಧ ಖಡಕ್ ವಾರ್ನಿಂಗ್ ಕೊಟ್ಟಿದೆ. ಅಷ್ಟೇ ಅಲ್ಲದೇ ದಿಟ್ಟ ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರಲ್ಲಿ ರಸ್ತೆ ಗುಂಡಿಗಳಿಂದ ಅಪಘಾತವಾಗುತ್ತಿದೆ ಎಂದು ವಿಜಯ್ ಮೆನನ್ ಹಾಗೂ ಇತರರು ಸಲ್ಲಿಸಿದ್ದ ಪಿಐಎಲ್ ಅನ್ವಯ ಹೈಕೋರ್ಟ್,  ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೂ ಗುಂಡಿ ಇಲ್ಲದಂತೆ ಮಾಡಬೇಕು ಎಂದು ತಾಕೀತು ಮಾಡಿತ್ತು. ಆದ್ರೆ, ಇದುವರೆಗೂ ಆದೇಶವನ್ನು ಪಾಲಿಸಿಲ್ಲದಿರುವುದರಿಂದ ಕೋರ್ಟ್ ಕೆಂಡಾಮಂಡಲವಾಗಿದೆ.

BBMP ಹಾಕಿಕೊಂಡಿದ್ದ ಗಡುವು ಅಂತ್ಯ: ಗುಂಡಿ ಮುಚ್ಚುವ ಭರವಸೆ ಈಡೇರಿಲ್ಲ

ಇಂದು [ಬುಧವಾರ] ಬೆಂಗಳೂರಲ್ಲಿ ರಸ್ತೆ ಗುಂಡಿಗಳಿಂದ ಅಪಘಾತ ಪ್ರಕರಣವನ್ನು ಕೋರ್ಟ್ ಕೈಗೆತ್ತುಕೊಂಡಿತು. ಕೋರ್ಟ್ ಆದೇಶವನ್ನು ಪಾಲಿಸಲು ಮೇಯರ್,‌ ಉಪಮೇಯರ್ ಮೀಟಿಂಗ್ ಮಾಡಿ. ಬಳಿಕ ಆದೇಶವನ್ನು ಪಾಲಿಸಬೇಕೋ ಬೇಡವೋ ಎಂದು ಅವರು ನಿರ್ಧಾರ ಮಾಡುತ್ತಾರೆ ಅಂದ್ರೆ ಏನಿದರ ಅರ್ಥ?

ನಾವು‌ ಹೇಳಿದ್ದು ಸಾಧಾರಣ ವಿಚಾರನಾ? ಹೈಕೋರ್ಟ್ ಆದೇಶ ಪಾಲಿಸಲು ಮೀಟಿಂಗ್ ಅವಶ್ಯಕತೆ ಇದೆಯೇ? ನೀವೂ ಒಬ್ಬ ವಕೀಲರಾಗಿ ಅವರನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ಕೋರ್ಟ್ ಬಿಬಿಎಂಪಿ ಪರ ವಕೀಲರನ್ನ ತರಾಟೆಗೆ ತೆಗೆದುಕೊಂಡಿತು.

ಕೂಡಲೇ ಮೇಯರ್, ಉಪಮೇಯರ್ ಹಾಗು ಆಡಳಿತ ಪಕ್ಷದ ನಾಯಕರ ಹೆಸರು ತಿಳಿಸಬೇಕು ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿತು. ಇದಕ್ಕೆ ಬಿಬಿಎಂಪಿ ಪರ ವಕೀಲ ಒಂದು ವಾರ ಸಮಾಯಾವಕಾಶ ಕೋರಿದರು.

ಇದರಿಂದ ಮತ್ತಷ್ಟು ಗರಂ ಆದ ಕೋರ್ಟ್,  ಒಂದು ವಾರ ಅಲ್ಲ, ಒಂದು ದಿನ ಸಹ ನೀಡುವುದಿಲ್ಲ. ಅವರ ಹೆಸರನ್ನು ನಾಳೆ [ಗುರುವಾರ] ಬೆಳಿಗ್ಗೆ10.30ಕ್ಕೆ ಸೂಚಿಸಬೇಕು.  ಅವರ‌ ವಿರುದ್ದ ಕಂಟೆಮ್ಪ್ಟ್  ಆಫ್ ಕೋರ್ಟ್ ನೊಟೀಸ್ ನೀಡುತ್ತೇವೆ.  ಬಿಬಿಎಂಪಿಗೆ ಒಮ್ಮೆಯಾದರೂ ಬುದ್ದಿ ಕಲಿಸಬೇಕು ಎಂದು ಖಡಕ್ ಆಗಿಯೇ ಹೇಳಿದೆ.