ಬೆಂಗಳೂರು, [ನ.11]: ನಗರದ ರಸ್ತೆಗಳನ್ನು ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ತಾನೇ ಹಾಕಿಕೊಂಡಿದ್ದ ಗಡುವು (ನ.10) ಮುಗಿದರೂ ನಗರದ ರಸ್ತೆಗಳು ಇನ್ನು ಗುಂಡಿ ಮುಕ್ತವಾಗಿಲ್ಲ.

ನಗರದಲ್ಲಿ ರಸ್ತೆಗುಂಡಿ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಅ.22 ರಂದು ಸಭೆ ನಡೆಸಿದ ಮೇಯರ್‌ ಗೌತಮ್‌ ಕುಮಾರ್‌ ನ.10ರೊಳಗೆ ನಗರದ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವುದಾಗಿ ಹೇಳಿದ್ದರು. 

ಅಲ್ಲದೇ ಒಂದು ವೇಳೆ ನಗರ ರಸ್ತೆಗಳು ಗುಂಡಿ ಮುಕ್ತವಾಗದಿದ್ದ ಪಕ್ಷದಲ್ಲಿ ಸಂಬಂಧಪಟ್ಟಅಧಿಕಾರಿಯನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಜತೆಗೆ ಗುಂಡಿ ಭರ್ತಿ ಸಂಬಂಧಿಸಿದಂತೆ ಪ್ರತಿದಿನ ಯೋಜನಾ ವಿಭಾಗದ ವಿಶೇಷ ಆಯುಕ್ತರು ಸಭೆ ನಡೆಸಬೇಕೆಂದು ಆದೇಶಿಸಿದರು. ಆದರೆ, ಯಾವುದೇ ಸಭೆ ನಡೆದಿಲ್ಲ.

ಬೆಂಗಳೂರು: ರಾತ್ರಿ ವೇಳೆ ರಸ್ತೆಗುಂಡಿ ಪರಿಶೀಲನೆಗೆ ಮೇಯರ್‌ ನಿರ್ಧಾರ

 ಪ್ರತಿದಿನ ಎಷ್ಟುಗುಂಡಿ ಮುಚ್ಚಲಾಗಿದೆ ಎಂಬ ಮಾಹಿತಿ ನೀಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಬಿಬಿಎಂಪಿ ಅಧಿಕಾರಿಗಳು ಖುದ್ದು ಆಯುಕ್ತರಿಗೆ ಮತ್ತು ಮೇಯರ್‌ ಅವರಿಗೆ ಗುಂಡಿ ಮುಚ್ಚಿದ ಬಗ್ಗೆ ಮಾಹಿತಿ ನೀಡುತ್ತಿಲ್ಲ.

ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳು
ಇದೀಗ ಮೇಯರ್‌ ರಸ್ತೆ ಗುಂಡಿ ಮುಚ್ಚುವುದಕ್ಕೆ ನೀಡಿದ್ದ ಗಡುವು ಮುಕ್ತಾಯವಾಗಿದೆ. ಆದರೂ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಹಾಗೇ ಇವೆ. ಆದರೆ, ಈವರೆಗೆ ಮೇಯರ್‌ ಹಾಗೂ ಆಯುಕ್ತರ ಆದೇಶ ನಿರ್ಲಕ್ಷಿಸಿದ ಯಾವುದೇ ಒಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಆಯುಕ್ತರು ಮತ್ತು ಮೇಯರ್‌ ನೀಡಿದ ಗಡುವನ್ನು ಪಾಲಿಕೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಈ ವರ್ಷ ಮಳೆಗಾಲ ಮುಕ್ತಾಯವಾಗುವುದಕ್ಕೆ ಮುನ್ನ ಮುಖ್ಯರಸ್ತೆ ಗುಂಡಿ ಮುಚ್ಚುವುದಕ್ಕೆ ಮತ್ತು ವಾರ್ಡ್‌ ರಸ್ತೆ ಗುಂಡಿ ಮುಚ್ಚುವುದಕ್ಕೆ ಪ್ರತ್ಯೇಕವಾಗಿ ಹಣ ಮೀಸಲಿಟ್ಟು ಟೆಂಡರ್‌ ನೀಡಲಾಗಿದೆ. ಕಳೆದ ಶನಿವಾರ ಹೊರತು ಪಡಿಸಿ ಒಂದು ವಾರದಿಂದ ನಗರದಲ್ಲಿ ಮಳೆಯೇ ಬಂದಿಲ್ಲ. ಆದರೂ ಬಿಬಿಎಂಪಿ ನಗರದ ರಸ್ತೆ ಗುಂಡಿ ಮುಕ್ತಗೊಳಿಸದಿರುವುದು ನಿಚ್ಚಳವಾಗಿದೆ.

ಬೇಕಾಬಿಟ್ಟಿ ತಪಾಸಣೆ:
ಸಾರ್ವಜನಿಕರ ಟೀಕೆಯಿಂದ ತಪ್ಪಿಸಿಕೊಳ್ಳಬೇಕೆಂಬ ಒಂದೇ ಒಂದು ಕಾರಣಕ್ಕೆ ಕಳೆದ ಮೂರು ದಿನಗಳ ಹಿಂದೆ ಮೇಯರ್‌ ಗೌತಮ್‌ ಕುಮಾರ್‌ ಹಾಗೂ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ನಗರದ ಕೇಂದ್ರ ಭಾಗದ ಕೆಲವು ರಸ್ತೆಗಳಲ್ಲಿ ತಪಾಸಣೆ ನಡೆಸಿದ್ದರು.

1,337 ರಸ್ತೆ ಗುಂಡಿ ಬಾಕಿ:
ಬಿಬಿಎಂಪಿ ಮಾಹಿತಿ ಪ್ರಕಾರ ಅ.1ಕ್ಕೆ 10,656 ರಸ್ತೆ ಗುಂಡಿಗಳಿವೆ ಎಂದು ಗುರುತಿಸಿದ್ದ ಬಿಬಿಎಂಪಿ ನ.8ರ ವರೆಗಿನ ಮಾಹಿತಿ ಪ್ರಕಾರ 9,319 ಗುಂಡಿ ಮುಚ್ಚಲಾಗಿದೆ. ಇನ್ನು 1,337 ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ. ಇದು ಅಧಿಕೃತ ಮಾಹಿತಿಯಷ್ಟೇ. ಇನ್ನೂ ನಗರದಲ್ಲಿ ಅಸಂಖ್ಯಾತ ರಸ್ತೆ ಗುಂಡಿಗಳಿವೆ.

ಫಲ ನೀಡದ ಮೇಯರ್‌ ಪತ್ರ
ನಗರದ 28 ಮಂದಿ ಶಾಸಕರಿಗೂ ಮೇಯರ್‌ ಗೌತಮ್‌ ಕುಮಾರ್‌ ಪತ್ರ ಬರೆದು ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಆದರೆ, ಮೇಯರ್‌ ಪತ್ರಕ್ಕೆ ಯಾವುದೇ ಶಾಸಕರು ಅಧಿಕೃತವಾಗಿ ಬೆಂಬಲ ಸೂಚಿಸಿ ರಸ್ತೆಗಿಳಿದು ರಸ್ತೆ ಗುಂಡಿ ಮುಚ್ಚುವುದಕ್ಕೆ ಮುಂದಾಗಲಿಲ್ಲ.

ಶೇ.80ರಷ್ಟುಗುಂಡಿ ಭರ್ತಿ
ಈ ಕುರಿತು ಪ್ರತಿಕ್ರಿಯೆ ನೀಡಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ರಸ್ತೆ ಗುಂಡಿ ಭರ್ತಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕಳೆದ ಅಕ್ಟೋಬರ್‌ 1 ರಿಂದ ಈವರೆಗೆ 10 ಸಾವಿರ ರಸ್ತೆ ಗುಂಡಿ ಮುಚ್ಚಿದ್ದೇವೆ. ಹೊಸದಾಗಿ ಮತ್ತೆ ಮತ್ತೆ ರಸ್ತೆ ಗುಂಡಿ ಸೃಷ್ಟಿಯಾಗುತ್ತಿದೆ. ಶೇ.80ರಷ್ಟುರಸ್ತೆ ಗುಂಡಿ ಮುಚ್ಚಿದ್ದೇವೆ. ಉಳಿದ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ‘ಕನ್ನಡಪ್ರಭ’ಕ್ಕೆ

ಗೌತಮ್‌ ಕುಮಾರ್‌ ಹೇಳಿದಿಷ್ಟು..!
ಬಹುತೇಕ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಂಡಿದೆ. ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿಯಿಂದ ಒಂದು ರೂಪಾಯಿ ಹಣ ಖರ್ಚು ಮಾಡಿಲ್ಲ, ನಿರ್ವಹಣೆ ಅವಧಿ ಬಾಕಿ ಇರುವ ಗುತ್ತಿಗೆದಾರರಿಂದ ರಸ್ತೆ ಗುಂಡಿ ಮುಚ್ಚಿಸಲಾಗಿದೆ. ರಸ್ತೆ ಅಭಿವೃದ್ಧಿ ಪಡಿಸಿದ ಕೆಲವು ಗುತ್ತಿಗೆದಾರರ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗುಂಡಿ ಮುಚ್ಚುವುದು ಬಾಕಿ ಇದೆ.