ಗಣಿ ಗುತ್ತಿಗೆ ನವೀಕರಣ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಲ್ಲಿಕೆಯಾಗಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ. ಹಳೆಯ ದೂರಿನ ಅಂಶಗಳನ್ನೇ ಕಾಪಿ-ಪೇಸ್ಟ್ ಮಾಡಲಾಗಿದೆ ಎಂಬ ಸರ್ಕಾರದ ವಾದದ ಬಳಿಕ ಅರ್ಜಿದಾರರ ವಕೀಲರು ಹಿಂದೆ ಸರಿದಿದ್ದಾರೆ.

ಬೆಂಗಳೂರು (ಅ.27): ಗಣಿ ಗುತ್ತಿಗೆ ನವೀಕರಣದಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ದೊಡ್ಡ ಮಟ್ಟದ ಕಾನೂನು ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್‌ನ ವಿಭಾಗೀಯ ಪೀಠ ವಜಾಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಈ ಮಹತ್ವದ ಆದೇಶ ನೀಡಿದೆ.

ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ಬಲವಾದ ವಾದ:

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ (AG) ಶಶಿಕಿರಣ್ ಶೆಟ್ಟಿ ಅವರು ಅರ್ಜಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದರು.

  • 'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಆ ದೂರನ್ನು ಕೂಲಂಕಷವಾಗಿ ಪರಿಶೀಲಿಸಿದ ಲೋಕಾಯುಕ್ತವು ಈಗಾಗಲೇ ಅದನ್ನು ವಜಾಗೊಳಿಸಿದೆ.
  • ಅಷ್ಟೇ ಅಲ್ಲದೆ, ಈ ಸಂಬಂಧ ದಾಖಲಾಗಿದ್ದ ಖಾಸಗಿ ದೂರು ಕೂಡ 2017ರ ನವೆಂಬರ್ 14ರಂದೇ ಮುಕ್ತಾಯಗೊಂಡಿದೆ (ಕ್ಲೋಸ್ ಆಗಿದೆ).
  • ಹಳೆಯ, ಈಗಾಗಲೇ ಇತ್ಯರ್ಥವಾಗಿರುವ ದೂರಿನ ಅಂಶಗಳನ್ನೇ ಯಥಾವತ್ತಾಗಿ ಕಾಪಿ-ಪೇಸ್ಟ್ ಮಾಡಿ ಮತ್ತೆ ಹೈಕೋರ್ಟ್‌ನಲ್ಲಿ ಪಿಐಎಲ್ ಆಗಿ ಸಲ್ಲಿಸಲಾಗಿದೆ.
  • ಈ ಹಿಂದೆ ಕೂಡ ಅರ್ಜಿದಾರರು ಅಥವಾ ಅವರ ಪರ ವಕೀಲರು ವಿಚಾರಣೆಗೆ ಹಾಜರಾಗದ ಕಾರಣ ಇದೇ ಪಿಐಎಲ್ ವಜಾಗೊಂಡಿತ್ತು' ಎಂದು ಎಜಿ ಶಶಿಕಿರಣ್ ಶೆಟ್ಟಿ ಪೀಠದ ಗಮನಕ್ಕೆ ತಂದರು.

ಕೇಸ್‌ನಿಂದ ಹಿಂದೆ ಸರಿದ ವಕೀಲರು:

ಸರ್ಕಾರದ ಪರ ಬಲವಾದ ವಾದ ಮತ್ತು ದಾಖಲೆಗಳನ್ನು ಗಮನಿಸಿದ ಬಳಿಕ, ಅರ್ಜಿದಾರರ ಪರ ವಕೀಲರು ತಾವು ಈ ಪ್ರಕರಣದಿಂದ ಹಿಂದೆ ಸರಿಯುವುದಾಗಿ (Withdrawal) ನ್ಯಾಯಾಲಯಕ್ಕೆ ಮೆಮೋ ಸಲ್ಲಿಕೆ ಮಾಡಿದರು. ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು, ಸಿದ್ದರಾಮಯ್ಯ ಅವರ ವಿರುದ್ಧದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಂತಿಮವಾಗಿ ವಜಾಗೊಳಿಸಿ ಆದೇಶಿಸಿತು. ಇದರಿಂದಾಗಿ ಸಿದ್ದರಾಮಯ್ಯ ಅವರಿಗೆ ಗಣಿ ಅಕ್ರಮ ಆರೋಪದ ಕಾನೂನು ಸಮರದಲ್ಲಿ ದೊಡ್ಡ ಜಯ ಸಿಕ್ಕಂತಾಗಿದೆ.