ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಬಿಬಿಎಂಪಿ ಇನ್ನು ಇರಲ್ಲ. ಕಾರಣ ರಾಜ್ಯಪಾಲರು ಈಗಾಗಲೇ ಗ್ರೇಟರ್ ಬೆಂಗಳೂರು ಕಾಯ್ದೆಗೆ ಸಹಿ ಹಾಕಿದ್ದಾರೆ. 

ಬೆಂಗಳೂರು(ಏ.25) ಬೆಂಗಳೂರಿನ ಆಡಳಿತ ಏನಿದ್ದರು ಬಿಬಿಎಂಪಿ ಅಥವಾ ಬೆಂಗಳೂರು ಮಹಾನಗರ ಪಾಲಿಕೆ ನೋಡಿಕೊಳ್ಳುತ್ತೆ. ಆದರೆ ಇನ್ಮುಂದೆ ಬಿಬಿಎಂಪಿ ಅಸ್ತಿತ್ವದಲ್ಲಿ ಇರಲ್ಲ. ಕಾಂಗ್ರೆಸ್ ಕನಸಿನ ಕೂಸಾಗಿರುವ ಗ್ರೇಟರ್ ಬೆಂಗಳೂರು ಕಾಯ್ದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕಿದ್ದಾರೆ. ಇದೀಗ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ. ಗ್ರೇಟರ್ ಬೆಂಗಳೂರು ಆಡಳಿತ ಹಾಗೂ ಅಧಿಕಾರ ಬಿಬಿಎಂಪಿ ವ್ಯಾಪ್ತಿಗಿಂತ ಹೆಚ್ಚು ಮಾಡಲಾಗುತ್ತಿದೆ. ಇಷ್ಟೇ ಅಲ್ಲ ಸುಲುಭ ಹಾಗೂ ಅಭಿವೃದ್ಧಿಪೂರಕ ಆಡಳಿತಕ್ಕೆ ಆಡಳಿತವನ್ನು ವಿಭಜನೆ ಮಾಡಿ ಸರಳೀಕೃತಗೊಳಿಸಲಾಗುತ್ತಿದೆ. ಇದರ ಪರಿಣಾಮ 17 ವರ್ಷದಿಂದ ಬೆಂಗಳೂರಿನ ಆಡಳಿತ ನೋಡಿಕೊಳ್ಳುತ್ತಿರುವ ಬಿಬಿಎಂಪಿ ಯುಗಾಂತ್ಯಗೊಳ್ಳುತ್ತಿದೆ. 

ಬಿಬಿಎಂಪಿ ವಿಭಜನೆ ಮಾಡಿ ವಿವಿಧ ಪಾಲಿಕೆಗಳನ್ನು ರಚಿಸಲು ಪ್ರಸ್ತಾಪಿಸಿರುವ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ವಿಧೇಯಕವನ್ನು ಬಜೆಟ್‌ ಅಧಿವೇಶನದಲ್ಲಿ ಉಭಯ ಸದನಗಳ ಅಂಗೀಕಾರ ಪಡೆದು ರಾಜ್ಯಪಾಲರ ಅನುಮೋದನೆಗೆ ಸರ್ಕಾರ ಕಳುಹಿಸಿತ್ತು. ಆದರೆ ಅಂಕಿತ ಹಾಕಲು ನಿರಾಕರಿಸಿ ಹೆಚ್ಚುವರಿ ವಿವರಣೆಗಳನ್ನು ಕೇಳಿ ಮರು ಸಲ್ಲಿಕೆ ಮಾಡಲು ವಾಪಸ್‌ ಕಳುಹಿಸಿದ್ದರು. ಕೆಲ ತಿದ್ದುಪಡಿಗಳ ಮೂಲಕ ಮತ್ತೆ ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿರುವ ಕಾರಣ ರಾಜ್ಯಪಾಲರು ಇದೀಗ ತಡಮಾಡದೇ ಅಂಕಿತ ಹಾಕಿದ್ದಾರೆ. 

ಗ್ರೇಟರ್ ಬೆಂಗಳೂರು ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ, ಕಾರಣ ಹೀಗಿದೆ!

ಬೆಂಗಳೂರಿನ ಜನಸಂಖ್ಯೆ ಸುಮಾರು 1.5 ಕೋಟಿ ತಲುಪಿದೆ. 786 ಚ.ಕಿಮೀ ವಿಸ್ತೀರ್ಣದ ಬೆಂಗಳೂರು ನಗರ ವಿಸ್ತರಣೆಯಾಗುತ್ತಿದೆ. ಒಬ್ಬ ಮೇಯರ್‌ ಮತ್ತು ಆಯುಕ್ತರಿಂದ ಇದನ್ನು ನಿರ್ವಹಣೆ ಮಾಡಲಾಗದು. ಆಡಳಿತ ಹತೋಟಿಗೆ ಸಿಗುತ್ತಿಲ್ಲ. ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಪಾರದರ್ಶಕತೆ ಮತ್ತು ಸಮರ್ಥ ಆಡಳಿತದ ದೃಷ್ಟಿಯಿಂದ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಹೀಗಾಗಿ, ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಅಗತ್ಯವಿದೆ ಎಂದು ವಿಧೇಯಕದಲ್ಲಿ ಕರ್ನಾಟಕ ಸರ್ಕಾರ ತನ್ನ ನಿಲುವು ತಿಳಿಸಿತ್ತು.