ಕರ್ನಾಟಕದಲ್ಲಿ ಬರಗಾಲ ಘೋಷಣೆ ಹೇಗೆ? ಕೇಂದ್ರ-ರಾಜ್ಯ ಬರ ಸಂಗ್ರಾಮ, 3 ವೈಜ್ಞಾನಿಕ ಹಂತಗಳು ಹಾಗೂ SDRF, NDRF ಪರಿಹಾರ ನಿಧಿಗಳ ಒಳಾರ್ಥವೇನು? ಯಾವುದರ ಪಾಲು ಎಷ್ಟಿದೆ? ಇಲ್ಲಿದೆ ಸಂಪೂರ್ಣ ವಿವರ.

ಕರ್ನಾಟಕ ಸರ್ಕಾರವು ಈ ಮೊದಲು ವೈಜ್ಞಾನಿಕ ಮೌಲ್ಯಮಾಪನದ ನಂತರ ಹಂತ-ಹಂತವಾಗಿ ರಾಜ್ಯದ ಒಟ್ಟು 240 ತಾಲ್ಲೂಕುಗಳ ಪೈಕಿ 177 ತಾಲ್ಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿತ್ತು. ತದನಂತರ ಮತ್ತೊಂದಿಷ್ಟು ತಾಲೂಕುಗಳನ್ನು ಸೇರಿಸಿತು. ರಾಜ್ಯದಲ್ಲಿ ಮಾನ್ಸೂನ್ ಮಳೆ ಕೊರತೆಯಿಂದಾಗಿ (ಸುಮಾರು ಶೇ. 36 ರಷ್ಟು ಮಳೆ ಅಭಾವ) ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಈಡಾಗಿದೆ. ಅದರಲ್ಲೂ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.

ಬರಗಾಲದ ಘೋಷಣೆ ಹೇಗೆ?

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ವರದಿ ಹಾಗೂ 'ಮೊಬೈಲ್ ಆಪ್' ಆಧಾರಿತ 'ಗ್ರೌಂಡ್ ಟ್ರೂಥಿಂಗ್' (ಸ್ಥಳ ಪರಿಶೀಲನೆ) ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಬರಗಾಲವನ್ನು ಹೇಗೆ ಘೋಷಿಸಲಾಗುತ್ತದೆ? ರಾಜ್ಯಗಳಿಗೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವೇ ಅಥವಾ ರಾಜ್ಯಗಳು ತಮ್ಮದೇ ಆದ ಬರ ಘೋಷಿಸಬಹುದೇ ಎಂಬ ಮುಖ್ಯ ಪ್ರಶ್ನೆಗಳು ಮೂಡುತ್ತವೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ

ಬರಗಾಲ ಘೋಷಿಸುವ ಅಧಿಕಾರ ಯಾರಲ್ಲಿದೆ?

ಭಾರತದ ಒಕ್ಕೂಟ ವ್ಯವಸ್ಥೆಯ ಪ್ರಕಾರ, ಯಾವುದೇ ರಾಜ್ಯದಲ್ಲಿ ಅಥವಾ ಪ್ರದೇಶದಲ್ಲಿ ಬರಗಾಲವನ್ನು ಘೋಷಿಸುವ ಪ್ರಾಥಮಿಕ ಅಧಿಕಾರ ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕಿರುತ್ತದೆ. ಕೇಂದ್ರ ಸರ್ಕಾರವು ಸ್ವತಃ ಯಾವುದೇ ರಾಜ್ಯದಲ್ಲಿ ನೇರವಾಗಿ ಬರಗಾಲವನ್ನು ಸಾರುವುದಿಲ್ಲ. ಕರ್ನಾಟಕ ಸರ್ಕಾರವು ಒಮ್ಮೆ ಅಧಿಕೃತ ನಿಯಮಾವಳಿಗಳಂತೆ ಬರಗಾಲ ಘೋಷಿಸಿದರೆ, ಆ ಆದೇಶವು ಆರು ತಿಂಗಳ ಕಾಲ ಮಾನ್ಯವಾಗಿರುತ್ತದೆ. ತದನಂತರ ಪರಿಸ್ಥಿತಿಯನ್ನು ಮರು ಪರಿಶೀಲಿಸಲಾಗುತ್ತದೆ.

ಬರ ಘೋಷಣೆಯ 3 ವೈಜ್ಞಾನಿಕ ಹಂತಗಳು!

ಕೇಂದ್ರದ 'ಬರ ನಿರ್ವಹಣಾ ಸಂಹಿತೆ'ಯ (Manual for Drought Management) ಪ್ರಕಾರ ಬರ ಮೌಲ್ಯಮಾಪನ ಪ್ರಕ್ರಿಯೆಯು 3 ಹಂತಗಳಲ್ಲಿ ನಡೆಯುತ್ತದೆ:

1. ಟ್ರಿಗ್ಗರ್ 1 (ಮಳೆ ಕೊರತೆ); ಶೇ. 25 ಕ್ಕಿಂತ ಹೆಚ್ಚು ಮಳೆ ಅಭಾವವಿದ್ದು, ಸತತ 21 ದಿನಗಳ ಕಾಲ ಒಂದೂ ಹನಿ ಮಳೆಯಾಗದೆ ಒಣ ಹವಾಮಾನ ಇದ್ದಾಗ ಈ ಹಂತ ಸಕ್ರಿಯಗೊಳ್ಳುತ್ತದೆ.

2. ಟ್ರಿಗ್ಗರ್ 2 (ಪರಿಣಾಮಗಳ ಮೌಲ್ಯಮಾಪನ); ಬಿತ್ತನೆ ಪ್ರದೇಶದ ಇಳಿಕೆ, ಉಪಗ್ರಹ ಆಧಾರಿತ ದೂರಸಂವೇದಿ ಮಾಹಿತಿ (Remote Sensing), ಮಣ್ಣಿನ ತೇವಾಂಶ ಮತ್ತು ಅಂತರ್ಜಲ ಮಟ್ಟ ಕುಸಿತವನ್ನು ಪರಿಶೀಲಿಸಲಾಗುತ್ತದೆ.

3. ಟ್ರಿಗ್ಗರ್ 3 (ಸ್ಥಳೀಯ ಸಮೀಕ್ಷೆ); ಪೀಡಿತ ಗ್ರಾಮಗಳ ಶೇ. 10 ರಷ್ಟು ಪ್ರದೇಶದಲ್ಲಿ ಕ್ಷೇತ್ರ ಸಮೀಕ್ಷೆ ನಡೆಸಲಾಗುತ್ತದೆ. ಶೇ. 80 ರಷ್ಟು ಸಮೀಕ್ಷೆಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆ ಹಾನಿ ಕಂಡುಬಂದರೆ, ಅದನ್ನು 'ತೀವ್ರ ಬರಗಾಲ' ಎಂದು ವರ್ಗೀಕರಿಸಲಾಗುತ್ತದೆ.

ಬರ ಘೋಷಣೆಗೆ ನಿಯಮಿತ ಸಮಯದ ಗಡುವಿದ್ದು, ಖಾರಿಫ್ (ಮುಂಗಾರು) ಬೆಳೆಗಳಿಗೆ ಅಕ್ಟೋಬರ್ 31 ಮತ್ತು ರಬಿ (ಹಿಂಗಾರು) ಬೆಳೆಗಳಿಗೆ ಮಾರ್ಚ್ 31 ಕೊನೆಯ ದಿನಾಂಕವಾಗಿರುತ್ತದೆ.

ಆರ್ಥಿಕ ನೆರವು ಮತ್ತು ಪರಿಹಾರ ನಿಧಿಗಳು!

2005 ರ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬರಪೀಡಿತ ಪ್ರದೇಶಗಳಿಗೆ ಎರಡು ಮೂಲಗಳಿಂದ ಅನುದಾನ ಲಭಿಸುತ್ತದೆ.

SDRF (ರಾಜ್ಯ ವಿಪತ್ತು ಪರಿಹಾರ ನಿಧಿ); ಸಾಧಾರಣ ಹಾಗೂ ಮಧ್ಯಮ ಪ್ರಮಾಣದ ಬರ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳು ತಮ್ಮ ಬಳಿ ಇರುವ ಈ ನಿಧಿಯನ್ನು ಬಳಸಿ ತಕ್ಷಣದ ಕುಡಿಯುವ ನೀರು, ಮೇವಿನ ಬ್ಯಾಂಕ್ ಮತ್ತು ಪರಿಹಾರ ಕಾರ್ಯಗಳನ್ನು ಆರಂಭಿಸುತ್ತವೆ.

NDRF (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ); ಬರಗಾಲ ಅತ್ಯಂತ ತೀವ್ರವಾಗಿದ್ದಾಗ ರಾಜ್ಯ ಸರ್ಕಾರವು ಕೇಂದ್ರಕ್ಕೆ ನಷ್ಟದ ಸುದೀರ್ಘ ವರದಿ (Memorandum) ಸಲ್ಲಿಸುತ್ತದೆ. ತರುವಾಯ ಕೇಂದ್ರ ಪ್ರತಿನಿಧಿಗಳ ತಂಡವು (Inter-Ministerial Central Team) ಸ್ಥಳ ಪರಿಶೀಲನೆ ನಡೆಸಿದ ನಂತರ NDRF ನಿಂದ ಹೆಚ್ಚುವರಿ ಹಣ ಬಿಡುಗಡೆಯಾಗುತ್ತದೆ.

ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟು!

ಬರಗಾಲವು ಗ್ರಾಮೀಣ ಭಾಗದಲ್ಲಿ ಭಾರಿ ಸಾಮಾಜಿಕ-ಆರ್ಥಿಕ ಸಂಕಷ್ಟ ಸೃಷ್ಟಿಸುತ್ತದೆ. ಬರ ಘೋಷಣೆ ವಿಳಂಬವಾದರೆ ಬೆಳೆ ನಷ್ಟ ಅನುಭವಿಸಿದ ರೈತರು ಬ್ಯಾಂಕ್ ಸಾಲ ಮರುಪಾವತಿಸಲು ಸಾಧ್ಯವಾಗದೆ, ಖಾಸಗಿ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಾಲದ ಸುಳಿಗೆ ಸಿಲುಕುತ್ತಾರೆ. ಇದು ಗ್ರಾಮೀಣ ಭಾಗದಿಂದ ನಗರಗಳಿಗೆ ವಲಸೆ ಹೆಚ್ಚಲು ಮತ್ತು ರೈತರ ಆತ್ಮಹತ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸರ್ಕಾರಗಳು ಕಾಲಮಿತಿಯಲ್ಲಿ ವೈಜ್ಞಾನಿಕವಾಗಿ ಬರ ಘೋಷಿಸಿ ಪರಿಹಾರ ಒದಗಿಸುವುದು ಅತ್ಯಗತ್ಯವಾಗಿದೆ.