ಸೋನು ನಿಗಮ್‌ರ ಹೇಳಿಕೆಯಿಂದ ಕನ್ನಡಿಗರ ಆಕ್ರೋಶಕ್ಕೆ ಜಗದೀಶ್‌ ನಡನಳ್ಳಿ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡದೆ, ಬೇರೆಯವರ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸುವುದು ವ್ಯರ್ಥ ಎಂದಿದ್ದಾರೆ. ಕನ್ನಡ ಚಿತ್ರರಂಗದ ಅವನತಿಯ ಬಗ್ಗೆಯೂ ಚಿಂತಿಸಬೇಕೆಂದು ಮನವಿ ಮಾಡಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಗಾಯಕ ಸೋನು ನಿಗಮ್‌ ಅವರು ಪಹಲ್ಗಾಮ್‌ ದುರಂತವನ್ನು ಪ್ರಸ್ತಾಪ ಮಾಡಿದ್ದರು. ಇದು ಅನೇಕರಿಗೆ ಸಿಟ್ಟು ತಂದಿದೆ. ಈ ಬಗ್ಗೆ ಬರಹಗಾರ ಜಗದೀಶ್‌ ನಡನಳ್ಳಿ ಅವರು ಸುದೀರ್ಘವಾದ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಎರಡು ಮೂರು ವಾರದ ಹಿಂದೆ ಕನ್ನಡ ವಿಷಯಕ್ಕಾಗಿ ಹುಯಿಲೆಬ್ಬಿಸಿದ ಕನ್ನಡಿಗರು ಒಂದು ವಾರ ಮಲಗಿಕೊಂಡು ಈಗ ಮತ್ತೆ ಎಚ್ಚೆತ್ತುಕೊಂಡಿದ್ದಾರೆ. ಸೋನು ನಿಗಮ್‌ ಒಂದು ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಹೀಗೆ ಮಾಡುವುದರಿಂದಲೇ ಪಹಲ್ಗಾಮ್‌ ನಂತಹ ಘಟನೆಗಳು ಆಗೋದು ಎಂದಿದ್ದಕ್ಕೆ ಎಲ್ಲ ಕನ್ನಡಿಗರು ಕನ್ನಡಕ್ಕೆ ಅವಮಾನ ಎಂದು ರೊಚ್ಚಿಗೆದ್ದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಅವನು ಏನು ತಿಕ್ಲು ಎದ್ದು ಇಂತಹ ಮಾತಾಡಿದನೋ, ಅಥವಾ ಹೀಗೆ ಭಾಷೆ, ಜಾತಿ, ಮತ ಎಂದು ಬಡಿದಾಡುವುದಕ್ಕಾಗಿಯೇ ಹಿಂದೂಗಳನ್ನು ಪ್ಯಾಂಟು ಬಿಚ್ಚಿಸಿ ಕೊಲ್ಲಲಾಗುತ್ತಿದೆ ಎನ್ನುವ ರೀತಿಯಲ್ಲಿ ಹೇಳಿದನೋ, ಅಥವ ನಿಜವಾಗಲೂ ಬೇಸತ್ತು ಆ ಮಾತುಗಳನ್ನಾಡಿದನೋ ಅಲ್ಲಿ ಸಿಕ್ಕ ಯಾವ ವಿಡಿಯೋದಿಂದ ಸ್ಪಷ್ಟವಾಗುವುದಿಲ್ಲ. ಅದಕ್ಕೆ ಅವನೇ ಸ್ಪಷ್ಟನೇ ನೀಡಬೇಕು. ಈಗ ಎದ್ದಿರೋ ಬೀರುಗಾಳಿ ನೋಡಿದರೆ ಸದ್ಯದಲ್ಲಿ ಅವನಿಂದ ಒಂದು ಸ್ಪಷ್ಟನೆ ಹಾಗೂ ಕ್ಷಮಾಪಣೆಯ ವಿಡಿಯೋ ಬರುತ್ತದೆ ಎಂದು ನನ್ನ ಅನಿಸಿಕೆ.

ಹೌದು, ಸೋನು ನಿಗಮ್‌ಗೆ ಕನ್ನಡದಲ್ಲಿ ಹಾಡಲು ಅವಕಾಶ ಕೊಟ್ಟವರು ಯಾರು? ಕನ್ನಡದವರೇ ತಾನೆ? ಆಗ ಅವರಿಗೆ ಯಾರು ಕನ್ನಡಿಗರು ಸಿಗಲಿಲ್ಲವೇ? ಹೀಗೆ ಬೇರೆ ಭಾಷೆಯವರಿಗೆ ಅವಕಾಶ ಕೊಟ್ಟರೆ ಮುಂದೆ ಇಂತಹ ದಿನಗಳು ಬರುತ್ತವೆ ಎಂದು ಅವರಿಗೆ ಗೊತ್ತಿರಲಿಲ್ಲವೇ? ಇಷ್ಟು ವರ್ಷಗಳು ಹಾಡಿದಕ್ಕೆ ಅವನನ್ನು ಮೆರೆಸಿ ಈಗ ಒಂದೇ ಮಾತಿಗೆ ಅದರ ಹಿನ್ನಲೆಯನ್ನು ಅರ್ಥಮಾಡಿಕೊಳ್ಳದೆ ಸುಮ್ಮನೆ ಬಟ್ಟೆ ಹರಿದುಕೊಂಡರೆ ಏನು ಪ್ರಯೋಜನ? ಒಂದು ವೇಳೆ ಅವನು ತಪ್ಪು ಮಾಡಿದ್ದರೆ ಅವನನ್ನು ಕೊರ್ಟಿಗೆ ಎಳೆದು ಕೇಳಬಹುದು ಇಲ್ಲ ಕತ್ತಿನ ಪಟ್ಟಿ ಹಿಡಿದು ವಾರ್ನಿಂಗ್‌ ಕೊಡಬಹುದು ಅದೆಲ್ಲ ಮಾಡಬೇಕಾದದ್ದೆ ಆದರೆ ಇದೆ ಸೋನು ನಿಗಮ್‌ ಹಲವಾರು ಬಾರಿ ವೇದಿಕೆಗಳ ಮೇಲೆ, ಸಂದರ್ಶನಗಳಲ್ಲಿ, ಪಾಡಕಾಸ್ಟ್‌ಗಳಲ್ಲಿ ಕನ್ನಡ ಬಗ್ಗೆ ಸಾಕಷ್ಟು ಹೆಮ್ಮಯಿಂದ ಮಾತಾಡಿದ್ದಾನೆ. ಅಲ್ಲಿ ಕೇಳಿದಾಗ ಕನ್ನಡ ಹಾಡುಗಳನ್ನು ಹಾಡಿದ್ದಾನೆ ಅದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಲ್ಲವೆ?

ಇದೆಲ್ಲ ಬಿಡಿ... ನಾನು ಕೆಲವು ದಿನಗಳಿಂದ ಜನರ ಮೆಚ್ಚುಗೆ ಗಳಿಸಿ ಹೌಸ್‌ ಫುಲ್‌ ಆಗುತ್ತಿದ್ದರೂ ಯುದ್ಧಕಾಂಡ ಎಂಬ ಸಿನಿಮಾ ಹೇಗೆ ಮಲ್ಟಿಪ್ಲೇಕ್ಸ್‌ನಲ್ಲಿ ಶೋಗಳು ಸಿಗದೇ ಒದ್ದಾಡುತ್ತಿದೆ ಎಂದು ಬರೆದಿದ್ದೇನೆ. ಹೀಗೆ ಎಷ್ಟೋ ಕನ್ನಡ ಸಿನಿಮಾಗಳು ಕನ್ನಡಿಗರು ಬಾರದೆಯೋ ಅಥವ multiplex ಗಳ ಲಾಬಿಯಿಂದಾನೋ ಚಿಗುರಿಕೊಳ್ಳುವುದಕ್ಕಿಂತ ಮುಂಚೆಯೇ ಮುದುಡಿಕೊಳ್ಳುತ್ತಿವೆ. ಬೇಕಾದರೆ ನೀವೆ Book My Show ಹೋಗಿ ನೋಡಿ ಆಗಲೇ ಯುದ್ಧಕಾಂಡ ಸಿನಿಮಾದ ಏಷ್ಟೋ ಶೋಗಳನ್ನು ತೆಗೆಯಲಾಗಿದೆ. ಅದು ಬೇರೆ ಕನ್ನಡ ಸಿನಿಮಾಕ್ಕಾಗಿ ಅಲ್ಲ ಪರಭಾಷ ಚಿತ್ರಗಳಿಗಾಗಿ. ಕನ್ನಡಿಗರಾಗಿ ನಾವು ಇದರ ವಿರುದ್ಧ ರೊಚ್ಚಿಗೆಳುವುದು ನ್ಯಾಯವಲ್ಲವೆ? ಏಕೆ ಯಾರೋ ಒಬ್ಬ ಕಾಂಜಿಪಿಂಜಿ ಕನ್ನಡದ ವಿರುದ್ಧ ಮಾತಾಡಿದರೆ ಕುದಿಯುವ ನಮ್ಮ ರಕ್ತ ಒಂದು ಕನ್ನಡ ಸಿನಿಮಾ ಉಳಿಸಿಕೊಳ್ಳಬೇಕಾದಾಗ ತಣ್ಣಗಾಗುತ್ತದೆ? ಕನ್ನಡದ ವಿರುದ್ಧ ಮಾತನಾಡಿದವನ ಮೇಲೆ ಎರಗಿ, ಅವನಿಗೆ ಪಾಠ ಕಲಿಸಿ, ಅವನು ಕ್ಷಮೆ ಕೇಳಿದಾಗ ಸಿಗುವ ಆನಂದ, ಒಂದು ಕನ್ನಡ ಸಿನಿಮಾ ಟೀಕೆಟ್‌ ಕೊಂಡು ಸಿನಿಮಾ ನೋಡಿ ಕನ್ನಡಿಗರನ್ನು ಬೆಳೆಸುವುದರಲ್ಲಿ ಏಕೆ ಸಿಗುವುದಿಲ್ಲ? ಇದು ಎಷ್ಟು ದಿನ ಹೀಗೆ ನಡೆಯಲಿದೆ. ಆಗಲೇ ಕನ್ನಡ ಸಿನಿಮಾ ICU ನಲ್ಲಿದೆ ಅದು ಸತ್ತ ಮೇಲೆಯೇ ಕನ್ನಡಿಗರಿಗೆ ಬುದ್ಧಿ ಬರುವುದೆ?

ನಾನು ಇಲ್ಲಿ ಕನ್ನಡದ ವಿರುದ್ಧ ಮಾತನಾಡಿದವರ ವಿರುದ್ಧ ಎದ್ದು ನಿಲ್ಲಬೇಡಿ ಎಂದು ಹೇಳುತ್ತಿಲ್ಲ. ಆದರೆ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ನಿಜವಾದ, ಅರ್ಥಪೂರ್ಣ ಕೆಲಸಗಳು ಬೇರೆ ಇವೆ ಅವುಗಳಿಗೆ ಮೊದಲು ಪ್ರಾತಿನಿಧ್ಯ ಕೊಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಅದರಲ್ಲಿ ಯಶಸ್ವಿಗೊಳ್ಳುತ್ತಿರುವ ಸಿನಿಮಾ ಉಳಿಸಿಕೊಳ್ಳುವುದು ಒಂದು ಕನ್ನಡದ ಪರವಾಗಿ ಮಾಡುವ ಸೇವೆಯೆ. ಇದನ್ನು ಎಷ್ಟು ಕನ್ನಡಿಗರು ಅರ್ಥ ಮಾಡಿಕೊಳ್ಳುತ್ತಾರೋ ಆ ಕನ್ನಡಾಂಬೆಗೆ ಗೊತ್ತು.
ಜೈ ಕರ್ನಾಕ ಮಾತೆ... ಸಿರಿಗನ್ನಡಂ ಗೆಲ್ಗೆ