ಕನ್ನಡದ ಹಿರಿಯ ಭಾಷಾವಿಜ್ಞಾನಿ ಹಾಗೂ ಪ್ರಖ್ಯಾತ ಸಾಹಿತ್ಯ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಹಂಪಿ ಕನ್ನಡ ವಿವಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ್ದ ಇವರು, ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದರು.

ಬೆಂಗಳೂರು (ನ.6): ಕನ್ನಡ ಸಾಹಿತ್ಯ, ಭಾಷಾವಿಜ್ಞಾನ ಹಾಗೂ ವಿಮರ್ಶಾ ಲೋಕಕ್ಕೆ ಭಾರಿ ಆಘಾತ ಎದುರಾಗಿದೆ. ಕನ್ನಡದ ಹಿರಿಯ ಭಾಷಾವಿಜ್ಞಾನಿ, ಪ್ರಖ್ಯಾತ ಸಾಹಿತ್ಯ ವಿಮರ್ಶಕ ಹಾಗೂ ಸಾಹಿತ್ಯ ಲೋಕದಲ್ಲಿ 'ಕೆವಿಎನ್' ಎಂದೇ ಚಿರಪರಿಚಿತರಾಗಿದ್ದ ಪ್ರೊಫೆಸರ್ ಕೆ.ವಿ. ನಾರಾಯಣ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದ ಪ್ರೊ. ಕಂಪಲಾಪುರ ವೀರಣ್ಣ ನಾರಾಯಣ್ ಅವರ ಆರೋಗ್ಯದಲ್ಲಿ ಗುರುವಾರ ತಡರಾತ್ರಿ ದಿಢೀರ್ ಏರುಪೇರಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಎಚ್.ಎಸ್. ಶ್ರೀಮತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಪಿರಿಯಾಪಟ್ಟಣದಿಂದ ಹಂಪಿ ವಿವಿವರೆಗೆ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ 1948 ರಲ್ಲಿ ಜನಿಸಿದ ನಾರಾಯಣ ಅವರು, ಆರಂಭಿಕ ಶಿಕ್ಷಣದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ (MA) ಪದವಿ ಪಡೆದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದ ಅವರು ಕನ್ನಡ ಭಾಷೆಯ ಬೇರು ಮಟ್ಟದ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಬೆಂಗಳೂರಿನ ಪ್ರಸಿದ್ಧ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಆರಂಭಿಸಿದರು.

ತದನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಭಾಷಾ ವಿಜ್ಞಾನ (Linguistics) ಮತ್ತು ಸಾಹಿತ್ಯ ಮೀಮಾಂಸೆಯನ್ನು ಬೋಧಿಸುವ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ಡೀನ್, ಕುಲಸಚಿವ (Registrar) ಹಾಗೂ ಪ್ರಭಾರ ಕುಲಪತಿಯಾಗಿ ಯಶಸ್ವಿಯಾಗಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸೇವೆ ಸಲ್ಲಿಸಿದರು.

ಭಾಷಾ ಸೇವೆ ಹಾಗೂ 'ಕರ್ನಾಟಕ ಓದು' ಯೋಜನೆ

ಕರ್ನಾಟಕ ಸರ್ಕಾರದ 'ಕುವೆಂಪು ಭಾಷಾ ಭಾರತಿ ಪ್ರಾಧಿಕಾರ'ದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಪ್ರೊ. ಕೆ.ವಿ. ನಾರಾಯಣ್ ಅವರು, ಕನ್ನಡ ಭಾಷಾ ಚಿಂತನೆಯನ್ನು ಹೊಸ ದೃಷ್ಟಿಕೋನದಿಂದ ನೋಡಿದವರು. ಭಾಷೆ, ಸಾಹಿತ್ಯ, ಬೋಧನೆ ಮತ್ತು ವಿಜ್ಞಾನ ವಲಯಗಳಲ್ಲಿ ಆಳವಾದ ಆಸಕ್ತಿ ಹೊಂದಿದ್ದ ಅವರು, ಕನ್ನಡವನ್ನು ಜ್ಞಾನ ಭಾಷೆಯನ್ನಾಗಿ ಬೆಳೆಸಲು 'ಕರ್ನಾಟಕ ಓದು' (Karnataka Odu) ಎಂಬ ಕಾರ್ಯಾಗಾರ ಸರಣಿಯನ್ನು ಆರಂಭಿಸಿ, ಭಾಷಾ ಸಂಶೋಧನೆಗೆ ಹೊಸ ಚೈತನ್ಯ ನೀಡಿದ್ದರು.

ಪ್ರಶಸ್ತಿ ಮತ್ತು ಗೌರವಗಳು

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ನೀಡಿದ ಜೀವಮಾನದ ಕೊಡುಗೆಗಾಗಿ ಅವರಿಗೆ ಹಲವಾರು ಗೌರವಗಳು ಒಲಿದುಬಂದಿದ್ದವು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಕೆ.ವಿ. ನಾರಾಯಣ್ ಅವರ ಅಗಲಿಕೆಗೆ ರಾಜ್ಯದ ಸಾಹಿತಿಗಳು, ಸಂಶೋಧಕರು, ಭಾಷಾತಜ್ಞರು ಹಾಗೂ ಅಪಾರ ಭಕ್ತ-ವಿದ್ಯಾರ್ಥಿ ವೃಂದ ತೀವ್ರ ಶೋಕ ವ್ಯಕ್ತಪಡಿಸಿದೆ.