Asianet Suvarna News Asianet Suvarna News

ಪರಪ್ಪನ ಅಗ್ರಹಾರ ಜೈಲಲ್ಲಿ ಥರಾವರಿ ಅನಾಚಾರ!

ಪರಪ್ಪನ ಅಗ್ರಹಾರ ಜೈಲು ಅನಾಚಾರಗಳ ಆಗರವಾಗಿದೆ. ಇಲ್ಲಿ ನಿಷೇಧವಿರುವುದೆಲ್ಲಾ ಕೈದಿಗಳ ಬಳಕೆಗೆ ಸಿಗುತ್ತಿದೆ. 

inmates Use Mobile Weapons in Parappana Agrahara Jail
Author
Bengaluru, First Published Oct 18, 2019, 9:04 AM IST

ಬೆಂಗಳೂರು [ಅ.18]:  ರಾಜ್ಯದ ಅತಿ ದೊಡ್ಡ ಹಾಗೂ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕೈದಿಗಳಿರುವ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಅವ್ಯವಸ್ಥೆಗಳ ಆಗರವಾಗಿದ್ದು, ಭದ್ರತೆ ಕೊರತೆ, ಅಕ್ರಮವಾಗಿ ಮೊಬೈಲ್‌ ಫೋನ್‌ಗಳ ಬಳಕೆ, ರಾತ್ರಿ ವೇಳೆ ಕೈದಿಗಳಿಗೆ ಅನಾರೋಗ್ಯ ಸಮಸ್ಯೆ ಉಂಟಾದರೆ ದೂರದ ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಇದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದ ಪಿ.ಕೃಷ್ಣ ಭಟ್‌ (ಪ್ರಸ್ತುತ ಸಾರಿಗೆ ಇಲಾಖೆ ಮೇಲ್ಮವಿ ನ್ಯಾಯ ಮಂಡಳಿ ನ್ಯಾಯಾಧೀಶ) ಅವರು ಕಾರಾಗೃಹದ ಪರಿಶೀಲನೆ ಬಳಿಕ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾನವ ಹಕ್ಕುಗಳ ಆಯೋಗ, ಕೇಂದ್ರ ಕಾರಾಗೃಹದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸೇರಿದಂತೆ ಸರ್ಕಾರದ ವಿವಿಧ ಪ್ರಾಧಿಕಾರಗಳಿಗೆ ಅವರು ವರದಿ ಸಲ್ಲಿಸಿದ್ದಾರೆ.

ಕೇಂದ್ರ ಕಾರಾಗೃಹದಲ್ಲಿ ಹಳೆಯ ತಂತ್ರಜ್ಞಾನದ 2ಜಿ ಫೋನ್‌ಗಳ ಜಾಮರ್‌ ಅಳವಡಿಕೆಯಿಂದ 4ಜಿ ಫೋನ್‌ಗಳು ಕಾರ್ಯನಿರ್ವಹಿಸದಂತೆ ತಡೆಯಲು ಆಗುತ್ತಿಲ್ಲ, ಇದರಿಂದ ಕೈದಿಗಳು ಅಕ್ರಮವಾಗಿ ಮೊಬೈಲ್‌ನಲ್ಲಿ ಮಾತನಾಡಬಹುದಾಗಿದೆ. ಅಷ್ಟೇ ಅಲ್ಲ, ಜೈಲಿನಲ್ಲಿದ್ದೇ ಅಪರಾಧ ಕೃತ್ಯ ಎಸಗಲು ತಮ್ಮ ಸಹಚರರಿಗೆ ಸೂಚನೆ ನೀಡಬಹುದಾಗಿದೆ. ಹಾಗಾಗಿ ಈಗಿರುವ 13 ಮೊಬೈಲ್‌ ಜಾಮರ್‌ಗಳನ್ನು ಉನ್ನತೀಕರಿಸಬೇಕಾದ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭದ್ರತೆ ಕೊರತೆ:

ಜೈಲಿನಲ್ಲಿ ಸಾಕಷ್ಟುಭದ್ರತಾ ಕೊರತೆಗಳು ಇರುವುದರಿಂದ ಕೈದಿಗಳು ಪರಾರಿಯಾಗಲು ಅವಕಾಶವಿದೆ. ಹಾಗಾಗಿ ತಜ್ಞರ ಸಲಹೆಗಳನ್ನು ಪಡೆದು ಭದ್ರತೆ ಹೆಚ್ಚಳ ಮಾಡಬೇಕು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಬಂದಿದೆ.

ಸುಪ್ರೀಂ ಆದೇಶಕ್ಕೆ ಕಿಮ್ಮತ್ತಿಲ್ಲ:

ದೇಶದ ಎಲ್ಲ ಕಾರಾಗೃಹಗಳಲ್ಲಿ ಸಂದರ್ಶಕರ ಮಂಡಳಿ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಹಲವು ವರ್ಷಗಳ ಹಿಂದೆ ಆದೇಶಿಸಿತ್ತು. ಆದರೆ, ಕಾರಾಗೃಹದಲ್ಲಿ ಈ ಮಂಡಳಿ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜೊತೆಗೆ ಮಂಡಳಿಯಿಂದ ಸಭೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಭೆ ನಡೆಸುವ ಬಗ್ಗೆ ಕಾರಾಗೃಹ ಅಧಿಕಾರಿಗಳಿಗೆ ಯಾವುದೇ ರೀತಿಯ ಆಸಕ್ತಿ ಹೊಂದಿಲ್ಲ. ಈ ಅಂಶ ಅತ್ಯಂತ ಆಘಾತಕಾರಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೈದಿಗಳಿಗೆ ವೈದ್ಯಕೀಯ ವ್ಯವಸ್ಥೆ ಕೊರತೆ:

ಕಾರಾಗೃಹದ ವ್ಯಾಪ್ತಿಯಲ್ಲಿ ವೈದ್ಯರಿಗಾಗಿಯೇ ಸರ್ಕಾರಿ ನಿವಾಸ ಒದಗಿಸಲಾಗಿದೆ. ಆದರೆ, ಅಲ್ಲಿ ಯಾವುದೇ ವೈದ್ಯರು ಉಳಿದುಕೊಂಡಿಲ್ಲ. ಇದರಿಂದಾಗಿ ಕೈದಿಗಳಿಗೆ ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣಕ್ಕೆ ಚಿಕಿತ್ಸೆ ಪಡೆಯುವುದು ಕಷ್ಟಸಾಧ್ಯವಾಗಲಿದೆ. ಸಣ್ಣ ಪ್ರಮಾಣದ ಪ್ರಥಮ ಚಿಕಿತ್ಸೆಗೂ ದೂರದ ಆಸ್ಪತ್ರೆಗಳಿಗೆ ಕೊಂಡೊಯ್ಯಬೇಕಾದ ಅನಿವಾರ್ಯತೆಯಿದೆ. ಜೊತೆಗೆ ಪ್ರತಿ ದಿನ ಸುಮಾರು 200ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಬರುತ್ತಾರೆ. ಆದರೆ, ಅವರಿಗೆ ಸೂಕ್ತ ಮೂಲ ಸೌಲಭ್ಯಗಳು ಇಲ್ಲ. ಹಲವು ರೋಗಿಗಳು ನೆಲದ ಮೇಲೆಯೇ ಮಲಗುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಬಲ್ಲ ಮೂಲಗಳು ವಿವರಿಸಿವೆ.

 ವರದಿಯಲ್ಲಿನ ಪ್ರಮುಖ ಶಿಫಾರಸುಗಳು

-ಕನಿಷ್ಟಎರಡು ತಿಂಗಳಿಗೊಮ್ಮೆ ಸಂದರ್ಶಕರ ಮಂಡಳಿ ಸಭೆ ನಡೆಸಬೇಕು.

-ಕಾರಾಗೃಹಗಳ ಎಡಿಜಿಪಿ ಕಚೇರಿ ಜೈಲಿಗೆ ಸಮೀಪದಲ್ಲಿರಬೇಕು. ಇದರಿಂದ ಸೂಕ್ಷ್ಮ ಸಂದರ್ಭಗಳನ್ನು ನಿರ್ವಹಣೆ ಸುಲಭ.

-ಜೈಲು ಆಸ್ಪತ್ರೆ ಸೇವೆ ಮೇಲ್ದರ್ಜೆಗೇರಿಸಬೇಕು. ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸಾಗಿಸುವಾಗ ಬೆಂಗಾವಲು ಒದಗಿಸಬೇಕು.

-ಜೈಲಿನ ಬಳಿಯಿರುವ ನಿವಾಸದಲ್ಲಿ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ನೆಲೆಸಲು ಕ್ರಮ ಕೈಗೊಳ್ಳಬೇಕು.

-ಜೈಲಿನ ಭದ್ರತೆಯನ್ನು ತಜ್ಞರ ಸಲಹೆಗಳ ಆಧಾರದಲ್ಲಿ ಸುಧಾರಣೆ ಮಾಡಬೇಕು.

-ಮಾದಕ ವಸ್ತುಗಳು ವಸ್ತುಗಳು ಕಾರಾಗೃಹದೊಳಗೆ ಸಾಗಿಸದಂತೆ ಭದ್ರತೆ ಹೆಚ್ಚಿಸಬೇಕು.

-ಕೈದಿಗಳ ಭೇಟಿಗೆ ಬರುವವರನ್ನು ಪರಿಶೀಲಿಸಬೇಕು. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು.

-ಕೈದಿಗಳು ಹೊರ ಭಾಗದಲ್ಲಿ ಇರುವವರನ್ನು ಸಂಪರ್ಕಿಸಲು ಅವಕಾಶವಿಲ್ಲದಂತೆ ಮಾಡಬೇಕು.

-ಜೈಲಿನ ಕ್ಯಾಂಟೀನಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದೆ. ಇದನ್ನು ತಪ್ಪಿಸಲು ವ್ಯಸನ ಮುಕ್ತ ಕೇಂದ್ರಗಳನ್ನು ಪ್ರಾರಂಭಿಸಬೇಕು.

-ಜೈಲಿನಲ್ಲಿರುವ ಮರಗೆಲಸ, ಫ್ಯಾಬ್ರಿಕೇಷನ್‌ ಮತ್ತು ಮುದ್ರಣ ವಿಭಾಗವನ್ನು ‘ಸಿಲ್ಕ್ ಇಂಡಿಯಾ ಯೋಜನೆ’ ವ್ಯಾಪ್ತಿಗೆ ತರಬೇಕು.

-ಹೆಚ್ಚು ಪ್ರಮಾಣದ ಪ್ರೋತ್ಸಾಹಧನ ನೀಡಿ ಹೆಚ್ಚು ಕೈದಿಗಳು ಭಾಗಿಯಾಗುವಂತೆ ಮಾಡಬೇಕು.

Follow Us:
Download App:
  • android
  • ios