ರಾಜು ಕಾಗೆ, ಪೂಜಾರಿ ಬಳಿ ಮಾತಾಡುವೆ: ಯಡಿಯೂರಪ್ಪ
ಏನೇ ಆದರೂ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುತ್ತೆ ಎಂದ ಸಿಎಂ ಯಡಿಯೂರಪ್ಪ|ಸಿದ್ದರಾಮಯ್ಯರನ್ನು ಬಿಜೆಪಿ ಮುಖಂಡರು ಭೇಟಿಯಾಗಿರುವುದು ಗೊತ್ತಿಲ್ಲ| ಕೆಲ ಬಿಜೆಪಿಗರು ಕಾಂಗ್ರೆಸ್‌ಗೆ ಹೋಗುವುದು, ಕೆಲ ಕಾಂಗ್ರೆಸ್ಸಿಗರು ಬಿಜೆಪಿಗೆ ಬರುವುದು ಸಾಮಾನ್ಯ| ಅಂತಿಮವಾಗಿ ಏನಾಗುತ್ತದೆಯೋ ನೋಡೋಣ|
ಬೆಂಗಳೂರು[ನ.12]: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರಾದ ರಾಜು ಕಾಗೆ ಮತ್ತು ಅಶೋಕ್ ಪೂಜಾರಿ ಅವರನ್ನು ಕರೆಸಿ ಮಾತನಾಡುತ್ತೇನೆ ಮತ್ತು ಪ್ರಸಕ್ತ ರಾಜಕೀಯದ ಎಲ್ಲ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬಿಜೆಪಿ ಮುಖಂಡರು ಭೇಟಿಯಾಗಿರುವುದು ಗೊತ್ತಿಲ್ಲ. ಕೆಲ ಬಿಜೆಪಿಗರು ಕಾಂಗ್ರೆಸ್‌ಗೆ ಹೋಗುವುದು, ಕೆಲ ಕಾಂಗ್ರೆಸ್ಸಿಗರು ಬಿಜೆಪಿಗೆ ಬರುವುದು ಸಾಮಾನ್ಯ. ಅಂತಿಮವಾಗಿ ಏನಾಗುತ್ತದೆಯೋ ನೋಡೋಣ. ಏನೇ ಆಗಲಿ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜು ಕಾಗೆ ಮತ್ತು ಅಶೋಕ್ ಪೂಜಾರಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿರುವ ಬಗ್ಗೆ ಗಮನಿಸಿದ್ದೇನೆ. ಅವರನ್ನು ಕರೆದು ಮಾತನಾಡುತ್ತೇನೆ. ಏನಾದರೂ ಸಮಸ್ಯೆಗಳಿದ್ದರೆ ಚರ್ಚಿಸಲಾಗುವುದು ಎಂದರು.
ಹೊಸಕೋಟೆ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಶರತ್ ಬಚ್ಚೇಗೌಡ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಶರತ್ ಬಗ್ಗೆ ಟೀಕೆ ಅಥವಾ ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದರು.