ಸಂಪತ್‌ ತರೀಕೆರೆ

ಬೆಂಗಳೂರು (ಅ.27):  ಮಧುಮೇಹಿಗಳು ಸೇರಿದಂತೆ ಪ್ರತಿಯೊಬ್ಬರು ಆಹಾರದಲ್ಲಿ ಪರೋಕ್ಷವಾಗಿ ಉಪಯೋಗಿಸಬಹುದಾದ ಅತ್ಯಂತ ಹೆಚ್ಚು ಪ್ರೋಟಿನ್‌, ನಾರಿನಾಂಶಯುಕ್ತ ಆರೋಗ್ಯವರ್ಧಕ ಚಿಯಾ ಬೆಳೆಗೆ ಇದೀಗ ಎಲ್ಲಿಲ್ಲದ ಬೇಡಿಕೆ.

ಆಕಾರದಲ್ಲಿ ಅಂಡಾಕಾರ, ಗಾತ್ರದಲ್ಲಿ ಸಣ್ಣಗೆ ಹೆಚ್ಚಿನ ಪೌಷ್ಟಿಕಾಂಶಗಳಿಂದ ಕೂಡಿದ ಚಿಯಾಗೆ ಪ್ರತಿ ಕ್ವಿಂಟಾಲ್‌ಗೆ 25 ಸಾವಿರದಿಂದ 30 ಸಾವಿರ ರು. ಇದೆ. ಒಂದು ಕೆಜಿ ಚಿಯಾಗೆ ಮಾರುಕಟ್ಟೆಯಲ್ಲಿ ಸುಮಾರು 800ರಿಂದ 900 ರು. ಬೆಲೆ ಇದೆ. ನೀರಾವರಿ ಅಥವಾ ಅರೆ ನೀರಾವರಿ ಪ್ರದೇಶದಲ್ಲಿ ಒಂದು ಎಕರೆಗೆ ಮೂರೂವರೆಯಿಂದ ನಾಲ್ಕು ಕ್ವಿಂಟಾಲ್‌ನಷ್ಟುಇಳುವರಿ ಪಡೆಯಬಹುದು. ಇದು ವಾರ್ಷಿಕ ಬೆಳೆಯಾಗಿದ್ದು, ಮೂರು ತಿಂಗಳಿಗೆ ಇಳುವರಿ ಪಡೆಯಬಹುದು. ಜತೆಗೆ ಎಕರೆಗೆ ಕೇವಲ 15 ಸಾವಿರದಿಂದ 20 ಸಾವಿರ ರು. ಖರ್ಚು ಮಾತ್ರ.

ಅಕ್ಟೋಬರ್‌ ಮತ್ತು ನವೆಂಬರ್‌ (ಹಿಂಗಾರು) ತಿಂಗಳಲ್ಲಿ ಬೆಳೆ ಬೆಳೆಯಲು ಸೂಕ್ತ. ಸುಮಾರು 1.75 ಮೀ. ಎತ್ತರ ಬೆಳೆಯುವ ಗಿಡದಲ್ಲಿ ಬೀಜವು ಅಂಡಾಕಾರದಲ್ಲಿದ್ದು, 1-2 ಮಿಮೀ ಗಾತ್ರದಿಂದ ಕೂಡಿರುತ್ತದೆ. ಕಪ್ಪು, ಬೂದು/ಕಪ್ಪು ಮಚ್ಚೆಗಳಿಂದ ಬಿಳಿ ಬಣ್ಣ ಹೊಂದಿರುತ್ತದೆ. ಈ ಬೆಳೆಯು ಹೇರಳವಾದ ಪೋಷಕಾಂಶ ಮತ್ತು ಔಷಧೀಯ ಗುಣ ಹೊಂದಿದೆ. ಶೇ.16.5ರಷ್ಟುಪ್ರೋಟೀನ್‌, ದೇಹದ ಪೋಷಣೆಗೆ ಅಗತ್ಯವಾದ ವಿಟಮಿನ್‌ಗಳು ಅಧಿಕವಾಗಿದೆ. ಸುಮಾರು 100 ಗ್ರಾಂ ಚಿಯಾ ಬೀಜದಲ್ಲಿ ಥೈಯಾಮಿನ್‌(ಶೇ.54), ನಿಯಾಸಿನ್‌(ಶೇ.59), ರೈಬೋಪ್ಲೇವಿನ್‌(ಶೇ.15) ಮತ್ತು ಫೋಲೇಟ್‌(ಶೇ.12) ಅಂಶಗಳು ಹೆಚ್ಚಾಗಿವೆ.

ಚಿಯಾ ಬೀಜಗಳು ಉತ್ತಮ ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಒಮೇಗಾ-3 ಅಂಶಗಳನ್ನು ಹೊಂದಿದೆ. ಇತರ ಸಾಮಾನ್ಯ ಬೆಳೆಗಳಿಗೆ ಹೋಲಿಕೆ ಮಾಡಿದರೆ ಚಿಯಾ ಬೀಜದಲ್ಲಿರುವ ಪೌಷ್ಟಿಕ ಅಂಶಗಳನ್ನು ಹೊಂದಿದೆ. ಕೆ.ಜಿಗೆ ರಿಯಾಯಿತಿ ಮಾರುಕಟ್ಟೆಯಲ್ಲಿ 350ರಿಂದ 500 ru. ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 900 ರಿಂದ ಒಂದು ಸಾವಿರ ರು.ಗಿಂತ ಹೆಚ್ಚು ಇದೆ ಎನ್ನುತ್ತಾರೆ ಬೆಂಗಳೂರು ಕೃಷಿ ವಿವಿ ಸಮರ್ಥ ಬೆಳೆಗಳ ಪ್ರಾಯೋಜನೆ ವಿಭಾಗದ ಮುಖ್ಯಸ್ಥ ಡಾ.ನಿರಂಜನ ಮೂರ್ತಿ.

ಪ್ರಾಣಿಗಳ ಹಾವಳಿಗೆ ತಡೆ:

ಅರಣ್ಯ ಅಥವಾ ಗುಡ್ಡದ ತಪ್ಪಲಿನಲ್ಲಿ ಹೊಲ, ಗದ್ದೆ ಇರುವ ರೈತರು ಧೈರ್ಯವಾಗಿ ಚಿಯಾ ಬೆಳೆ ಬೆಳೆಯಬಹುದು. ಏಕೆಂದರೆ, ಇಂತಹ ಪ್ರದೇಶಗಳಲ್ಲಿ ರೈತರು ಬೆಳೆದ ಬೆಳೆ ಕಾಡುಪ್ರಾಣಿಗಳ ದಾಳಿಗೆ ಒಳಗಾಗಿ ನಷ್ಟಅನುಭವಿಸುವುದು ಸಾಮಾನ್ಯ. ಆದರೆ, ಚಿಯಾ ಬೆಳೆಯ ವಿಶೇಷತೆ ಎಂದರೆ, ಕಾಡುಪ್ರಾಣಿ(ಹಂದಿ, ಕಾಡುಕುರಿ, ಜಿಂಕೆ ಇತ್ಯಾದಿ)ಗಳು ಈ ಬೆಳೆಯನ್ನು ತಿನ್ನುವುದಿಲ್ಲ. ಯಾಕೆ ಚಿಯಾ ಬೆಳೆಯನ್ನು ಪ್ರಾಣಿಗಳು ತಿನ್ನುವುದಿಲ್ಲ ಎಂಬುದು ಗೊತ್ತಿಲ್ಲ. ಆದರೆ, ಚಿಯಾ ಬೆಳೆ ಉಳಿಯುತ್ತದೆ. ಇದು ರೈತರನ್ನು ಉಳಿಸುತ್ತದೆ. ಜತೆಗೆ ಈ ಬೆಳೆಗೆ ರೋಗರುಜಿನ ಕಡಿಮೆ, ಬೇಸಾಯವು ಸುಲಭ.

ಪರೋಕ್ಷ ಬಳಕೆ ಉತ್ತಮ:

ಚಿಯಾವನ್ನು ನೇರವಾಗಿ ಆಹಾರವಾಗಿ ಬಳಸಲು ಸಾಧ್ಯವಿಲ್ಲ. ಪರೋಕ್ಷವಾಗಿ ಬಳಕೆ ಮಾಡಬೇಕು. ಬೀಜವನ್ನು ನೀರಿನಲ್ಲಿ ಹಾಕಿದರೆ ಅರಳುತ್ತದೆ (ಕಾಮಕಸ್ತೂರಿ ಮಾದರಿಯಲ್ಲಿ). ಒಣ ಬೀಜ ತಿನ್ನಬಾರದು. ಚಿಯಾ ಶರಬತ್ತು, ಚಿಸ್ಕೆಟ್‌, ತರಕಾರಿ ಸಲಾಡ್‌, ಕೇಕ್‌, ಚಾಕೋಲೆಟ್‌, ಐಸ್‌ಕ್ರೀಂ, ಹಾಲಿನ ಶೇಕ್‌, ನೀರು, ಎಣ್ಣೆಯಲ್ಲಿಯೂ ಬಳಕೆ ಮಾಡಬಹುದು. ಪ್ರಸ್ತುತ ಚಿಯಾ ಬೀಜದ ಮೌಲ್ಯ ಅಧಿಕವಾಗಿದ್ದು, ಇದನ್ನು ಬಳಸಿದ ಚಾಕೋಲೆಟ್‌ ಸೇರಿದಂತೆ ಇತರ ಖಾದ್ಯಗಳ ಬೆಲೆ ಅಧಿಕ. ಐಟಿಬಿಟಿ ಜನರು, ಹೆಚ್ಚು ಆದಾಯ ಇರುವ ಜನರು ಮಾತ್ರ ಇದನ್ನು ಉಪಯೋಗಿಸುತ್ತಿದ್ದಾರೆ. ಬೆಳೆ ಬೆಳೆಯುವವರ ಸಂಖ್ಯೆ ಹೆಚ್ಚಾದರೆ ತಾನಾಗಿಯೇ ಬೆಲೆ ಕಡಿಮೆಯಾಗುತ್ತದೆ. ಬೆಳೆಯುವವರು ಕೂಡ ಇದನ್ನು ಉಪಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎನ್ನುತ್ತಾರೆ ಡಾ.ನಿರಂಜನಮೂರ್ತಿ.

ಹೆಚ್ಚಿನ ಮಾಹಿತಿಗೆ

ಚಿಯಾ ಬೆಳೆ ಕುರಿತು ಹೆಚ್ಚಿನ ಮಾಹಿತಿಗೆ ಡಾ.ನಿರಂಜನಮೂರ್ತಿ, ಪ್ರಾಧ್ಯಾಪಕರು ಮತ್ತು ಮುಖ್ಯಸ್ತರು, ಅ.ಭಾ.ಸು.ಸಂ ಸಮರ್ಥ ಬೆಳೆಗಳ ಪ್ರಾಯೋಜನೆ, ಜಿಕೆವಿಕೆ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು-65. ದೂರವಾಣಿ: 080-23627265, ಮೊಬೈಲ್‌: 9448680139.