ಹುಬ್ಬಳ್ಳಿ ಎನ್‌ಕೌಂಟರ್ vs ಮಂಡ್ಯದ ನ್ಯಾಯದಾನ: ಮಕ್ಕಳ ಅ*ಚಾರದ ಎರಡು ಪ್ರಕರಣಗಳು

Synopsis
ಮಂಡ್ಯ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಅತ್ಯಾ*ಚಾರ ಪ್ರಕರಣಗಳಲ್ಲಿ ಪೊಲೀಸರು ಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಂಡ್ಯದಲ್ಲಿ ಆರೋಪಿಗೆ ನ್ಯಾಯಾಂಗದ ಮೂಲಕ ಶಿಕ್ಷೆಯಾದರೆ, ಹುಬ್ಬಳ್ಳಿಯಲ್ಲಿ ಎನ್‌ಕೌಂಟರ್ ಮಾಡಲಾಗಿದೆ.
ಯಾವುದಾದರೂ ಮಗು ಅತ್ಯಾ*ಚಾರ ಮತ್ತು ಹತ್ಯೆಗೆ ಈಡಾದರೆ ಅದು ಪ್ರತಿಯೊಬ್ಬರೂ ಮರುಗುವಂತೆ ಮಾಡುತ್ತದೆ. ಇಂತಹ ಪ್ರಕರಣಗಳಲ್ಲಿ ಜನರು ನ್ಯಾಯಕ್ಕಾಗಿ, ಅದರಲ್ಲೂ ಕ್ಷಿಪ್ರ ನ್ಯಾಯಕ್ಕಾಗಿ ಆಗ್ರಹಿಸುತ್ತಾರೆ. ಕರ್ನಾಟಕದಲ್ಲಿ ನಡೆದ ಇಂತಹ ಎರಡು ಘೋರ ಘಟನೆಗಳು - ಮಂಡ್ಯದ ಮಳವಳ್ಳಿಯಲ್ಲಿ (2022) ಮತ್ತು ಹುಬ್ಬಳ್ಳಿಯ ವಿಜಯನಗರದಲ್ಲಿ (2025) - ಪೊಲೀಸರು ಅಪರಾಧವನ್ನು ನಿರ್ವಹಿಸಿದ್ದರಲ್ಲಿ ಇದ್ದ ಭಿನ್ನ ವಿಧಾನಗಳಿಗೆ ಸಾಕ್ಷಿಯಾದವು. ಮಂಡ್ಯದಲ್ಲಿ, ಆಗಿನ ಎಸ್‌ಪಿ ಎನ್ ಯತೀಶ್ ಮತ್ತು ಅವರ ತಂಡ ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಿ, ಅಪರಾಧಿಗೆ ಜೀವಾವಧಿ ಶಿಕ್ಷೆಯಾಗುವಂತೆ ಮಾಡಿತು. ಆದರೆ, ಹುಬ್ಬಳ್ಳಿಯಲ್ಲಿ ಕಮಿಷನರ್ ಎನ್ ಶಶಿಕುಮಾರ್ ಅವರ ಪೊಲೀಸ್ ಪಡೆ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಹ*ತ್ಯೆಗೈದಿದ್ದು, ಹಲವಾರು ಪ್ರಶ್ನೆಗಳು ಉತ್ತರ ಇಲ್ಲದಂತಾಗಿವೆ. ಮಂಡ್ಯದ ನ್ಯಾಯಾಂಗ ಪ್ರಕ್ರಿಯೆ ಆಶಾ ಭಾವನೆ ಮೂಡಿಸಿದರೆ, ಹುಬ್ಬಳ್ಳಿಯ ಘಟನೆ ಆತಂಕಕ್ಕೆ ಕಾರಣವಾಗಿದೆ. ಇವೆರಡೂ ಘಟನೆಗಳನ್ನು ಗಮನಿಸಿ, ಮಕ್ಕಳ ರಕ್ಷಣೆಯ ಕುರಿತು ಅವುಗಳು ನಮಗೇನು ಹೇಳುತ್ತವೆ ಎಂದು ಗಮನಿಸೋಣ.
ಮಂಡ್ಯ: ನ್ಯಾಯಕ್ಕೆ ಸಂದ ಜಯ
ಅಕ್ಟೋಬರ್ 2022ರಲ್ಲಿ ಮಂಡ್ಯದ ಮಳವಳ್ಳಿ ಆಘಾತಕ್ಕೆ ಒಳಗಾಗಿತ್ತು. ಕಾಂತರಾಜು ಎಂಬ 51 ವರ್ಷದ ಟ್ಯೂಷನ್ ಶಿಕ್ಷಕ ತನ್ನ ವಿದ್ಯಾರ್ಥಿನಿಯಾದ ಹತ್ತು ವರ್ಷದ ಬಾಲಕಿಯೊಬ್ಬಳನ್ನು ಅತ್ಯಾ*ಚಾರ ನಡೆಸಿ ಹತ್ಯೆಗೈದಿದ್ದ. ಬಾಲಕಿಯನ್ನು ಟ್ಯೂಷನ್ ತರಗತಿಗೆ ಕರೆದ ಕಾಂತರಾಜು ಆಕೆಯ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಹಗ್ಗದಿಂದ ಆಕೆಯನ್ನು ಉಸಿರುಗಟ್ಟಿಸಿ, ಆಕೆಯ ಮೃತದೇಹವನ್ನು ನೀರಿನ ಟ್ಯಾಂಕಿಗೆ ಎಸೆದಿದ್ದ. ಆಗಿನ ಎಸ್‌ಪಿ ಎನ್ ಸತೀಶ್ ನೇತೃತ್ವದ ಮಂಡ್ಯ ಪೊಲೀಸರು ಒಂದು ಚೂರೂ ಸಮಯ ವ್ಯರ್ಥ ಮಾಡದೆ ಕಾರ್ಯಾಚರಿಸಿದ್ದರು. ನ್ಯಾಯಾಲಯ ಅವರಿಗೆ ಆರೋಪ ಪಟ್ಟಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದ್ದರೂ, ಪೊಲೀಸರು ಕೇವಲ 14 ದಿನಗಳಲ್ಲಿ ಅದನ್ನು ಪೂರ್ಣಗೊಳಿಸಿದ್ದರು. ಅವರು ಸಲ್ಲಿಸಿದ್ದ 683 ಪುಟಗಳ ವರದಿ ನಾಲ್ವರು ಸಾಕ್ಷಿಗಳ ಹೇಳಿಕೆಗಳು, ಸಿಸಿಟಿವಿ ದೃಶ್ಯಾವಳಿಗಳು, ಕಾಂತರಾಜು ಹಿಂದಿನ ದಿನ ಬಾಲಕಿಗೆ ಕರೆ ಮಾಡಿದ್ದರ ದಾಖಲೆಗಳು, ಮತ್ತು ಆತ ಪ್ಲಾಸ್ಟಿಕ್ ದಾರವನ್ನು ಮೈಸೂರಿನ ಅಂಗಡಿಯೊಂದರಿಂದ ಖರೀದಿಸಿದ್ದಕ್ಕೆ ಸಾಕ್ಷಿ ಸೇರಿದಂತೆ ಎಲ್ಲವನ್ನೂ ಒಳಗೊಂಡಿತ್ತು. ಮೂವರು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ವರದಿಯನ್ನು ಪರಿಶೀಲಿಸಿ, ಅದು ಪರಿಪೂರ್ಣವಾಗಿದೆ ಎಂದಿದ್ದರು.
ಈ ಪ್ರಕರಣದಲ್ಲಿ ಕಾಂತರಾಜು ತಾನು ನಿರಪರಾಧಿ ಎಂಬಂತೆ ಬಿಂಬಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದ. ಆತ ಬಾಲಕಿಯ ಶೋಧ ಕಾರ್ಯದಲ್ಲೂ ಪಾಲ್ಗೊಂಡು, ಬೇರೆಯವರ ಮೇಲೆ ಆರೋಪ ಹೊರಿಸಲು ಪ್ರಯತ್ನಿಸಿದ್ದ. ಆದರೆ, ಯತೀಶ್ ಅವರ ತಂಡ ಆತನ ಸುಳ್ಳುಗಳನ್ನು ಪತ್ತೆಹಚ್ಚಲು ಯಶಸ್ವಿಯಾಗಿತ್ತು. ಅವರು ಕಾಂತರಾಜುವಿನ ದೂರವಾಣಿ ಕರೆಗಳನ್ನು ಪತ್ತೆಹಚ್ಚಿ, ಬಾಲಕಿಯ ಹ*ತ್ಯೆ ಒಂದು ಪೂರ್ವಯೋಜಿತ ಕೃತ್ಯವಾಗಿತ್ತು ಎಂದು ಸಾಬೀತುಪಡಿಸಿದ್ದರು. ಮುಖ್ಯಮಂತ್ರಿಗಳೂ ಈ ಪ್ರಕರಣದ ಕುರಿತು ಒಂದು ಸೂಕ್ಷ್ಮವಾದ ಕಣ್ಣಿಟ್ಟಿದ್ದರು. ಈ ಪ್ರಕರಣದ ತುರ್ತು ವಿಚಾರಣೆಗಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಕರೆಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಒಟ್ಟಾರೆ ತನಿಖೆಯ ಮೇಲ್ವಿಚಾರಣೆ ವಹಿಸಿದ್ದರು. ಅಕ್ಟೋಬರ್ 19, 2024ರಂದು ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಇಬ್ಬರು ಮಕ್ಕಳ ತಂದೆಯಾದ ಕಾಂತರಾಜುವಿಗೆ ಸಾಯುವ ತನಕ ಜೈಲಿನಲ್ಲಿ ಕಳೆಯುವಂತೆ ಶಿಕ್ಷೆ ವಿಧಿಸಿದರು. ಅದರೊಡನೆ, 60,000 ರೂಪಾಯಿಗಳ ದಂಡವನ್ನೂ ವಿಧಿಸಿದರು. ಇದು ಸ್ಪಷ್ಟವಾದ, ಜಾಗರೂಕವಾದ ಮತ್ತು ಮೃತ ಬಾಲಕಿಯ ಕುಟುಂಬಕ್ಕೆ ನೆಮ್ಮದಿಯನ್ನೂ ನೀಡುವಂತಹ ಸರಿಯಾದ ನ್ಯಾಯ ಪ್ರಕ್ರಿಯೆಯಾಗಿತ್ತು. ಪೊಲೀಸರು ಸತ್ಯದ ಕಡೆ ಗಮನ ಹರಿಸಿ ಕಾರ್ಯಾಚರಿಸಿದರೆ ಅವರು ಎಲ್ಲವನ್ನೂ ಸರಿಪಡಿಸಬಲ್ಲರು ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು.
ಹುಬ್ಬಳ್ಳಿ: ಒಂದು ಗುಂಡು - ಆದರೆ ನಿರುತ್ತರ!
ಈಗ ಎಪ್ರಿಲ್ 2025ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಕುರಿತು ಗಮನ ಹರಿಸೋಣ. ಹುಬ್ಬಳ್ಳಿಯ ವಿಜಯನಗರದಲ್ಲಿ ಬಿಹಾರ ಮೂಲದ 35 ವರ್ಷದ ಕಾರ್ಮಿಕ ಐದು ವರ್ಷದ ಬಾಲಕಿಯೊಬ್ಬಳನ್ನು ಖಾಲಿ ಶೆಡ್ ಒಂದರಲ್ಲಿ ಅತ್ಯಾ*ಚಾರವೆಸಗಿ ಹತ್ಯೆ ಮಾಡಿದ್ದ. ಆತ ಬಾಲಕಿಗೆ ಚಾಕೋಲೇಟ್ ಆಮಿಷ ಒಡ್ಡುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ನೆರೆಹೊರೆಯವರು ಬಾಲಕಿ ಕೂಗಿಕೊಂಡಿದ್ದನ್ನು ಕೇಳಿದ್ದರು. ಕಮಿಷನರ್ ಶಶಿಕುಮಾರ್ ಅವರ ನೇತೃತ್ವದ ಪೊಲೀಸರ ತಂಡ ಶರವೇಗದಿಂದ ಕಾರ್ಯ ನಿರ್ವಹಿಸಿತ್ತು. ಅವರು ಕೆಲವೇ ಗಂಟೆಗಳಲ್ಲಿ ರಿತೇಶ್‌ನನ್ನು ಪತ್ತೆಹಚ್ಚಿದ್ದರು. ಆದರೆ, ಅವರು ಆತನ ಗುರುತು ಪತ್ತೆಗಾಗಿ ಕರೆದೊಯ್ಯುವ ಸಂದರ್ಭದಲ್ಲಿ ಪರಿಸ್ಥಿತಿ ಕೆಟ್ಟಿತ್ತು. ರಿತೇಶ್ ಕುಮಾರ್ ಪೊಲೀಸ್ ವಾಹನದತ್ತ ಕಲ್ಲೆಸೆದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಬ್ ಇನ್ಸ್ಪೆಕ್ಟರ್ ಅನ್ನಪೂರ್ಣೇಶ್ವರಿ ಅವರು ಎಚ್ಚರಿಕೆ ನೀಡುವ ಸಲುವಾಗಿ ಗುಂಡು ಹಾರಿಸಿದ್ದರು. ಬಳಿಕ ಆತ ಓಡಿಹೋಗಲು ಪ್ರಯತ್ನ ನಡೆಸಿದಾಗ ಆತನ ಕಾಲು, ಬೆನ್ನಿಗೆ ಗುಂಡು ಹಾರಿಸಿದ್ದರು. ರಿತೇಶ್ ಆಸ್ಪತ್ರೆಯಲ್ಲಿ ಸಾವಿಗೀಡಾದ. ಕಮಿಷನರ್ ಶಶಿಕುಮಾರ್ ಇದನ್ನು 'ಅಸಹಾಯಕರಿಗೆ' ನ್ಯಾಯ ಎಂದು ಕರೆದಿದ್ದರು.
ಓರ್ವ ಕೆಟ್ಟ ವ್ಯಕ್ತಿಯ ಕೊನೆಯಾಯಿತು ಎಂದು ಜನರೂ ಚಪ್ಪಾಳೆ ತಟ್ಟಿ ಈ ಎನ್‌ಕೌಂಟರ್ ಅನ್ನು ಸಂಭ್ರಮಿಸಿದರು. ಮಂಡ್ಯದ ರೀತಿಯಲ್ಲದೆ, ಹುಬ್ಬಳ್ಳಿಯ ಪ್ರಕರಣ ಬಲುಬೇಗ ಕೊನೆಯಾಯಿತು. ಹುಬ್ಬಳ್ಳಿಯ ಪ್ರಕರಣದಲ್ಲಿ ಯಾವುದೇ ಆರೋಪ ಪಟ್ಟಿಯಿಲ್ಲ, ನ್ಯಾಯಾಲಯದ ಪ್ರಕರಣವಿಲ್ಲ, ವಾಸ್ತವವಾಗಿ ಏನಾಯಿತು ಎಂದು ಹೇಳಲು ಪೊಲೀಸರನ್ನು ಹೊರತುಪಡಿಸಿ ಬೇರಾವುದೇ ಸಾಕ್ಷಿಗಳಿಲ್ಲ. ರಿತೇಶ್ ನಿಜಕ್ಕೂ ಅಷ್ಟು ಅಪಾಯಕಾರಿಯಾಗಿದ್ದನೇ? ಅಥವಾ ಪೊಲೀಸರಿಗೆ ಆಕ್ರೋಶಗೊಂಡಿದ್ದ ಜನರನ್ನು ಸಮಾಧಾನಗೊಳಿಸುವುದಷ್ಟೇ ಬೇಕಾಗಿತ್ತೇ? ಅನ್ನಪೂರ್ಣೇಶ್ವರಿ ಅವರು ನಿಜಕ್ಕೂ ಧೈರ್ಯಶಾಲಿಯಾಗಿದ್ದರು. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿದ್ದವು. ಇದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ, ಹಾಡುಹಗಲೇ ಒಬ್ಬ ಅಪರಿಚಿತ ವ್ಯಕ್ತಿ ಒಂದು ಹೆಣ್ಣು ಮಗುವನ್ನು ಹೇಗೆ ಅಪಹರಿಸಿದ? ಇಂತಹ ಬೆಳವಣಿಗೆಗಳನ್ನು ತಡೆಯಲು ಯಾವುದೇ ಪೊಲೀಸ್ ಗಸ್ತು ಯಾಕಿರಲಿಲ್ಲ? ಎಂಬ ಪ್ರಶ್ನೆಗಳಿಗೆ ಪೊಲೀಸರ ಧೈರ್ಯ ಶೌರ್ಯಗಳು ಉತ್ತರವಲ್ಲ. ಮಂಡ್ಯದಲ್ಲಿ ಕಾನೂನು ಪ್ರಕ್ರಿಯೆಯಡಿ ನ್ಯಾಯ ಲಭಿಸಿದರೆ, ಹುಬ್ಬಳ್ಳಿಯ ಘಟನೆ ಅರೆಬರೆ ಕತೆಯಂತೆ ಕಾಣುತ್ತಿದೆ.
ಎರಡು ದಾರಿಗಳು - ಒಂದು ಪಾಠ
ಮಂಡ್ಯ ಮತ್ತು ಹುಬ್ಬಳ್ಳಿ ಘಟನೆಗಳು ಪೊಲೀಸರ ಅತ್ಯುತ್ತಮ ಮತ್ತು ಅತ್ಯಂತ ಕೆಟ್ಟ ಕಾರ್ಯಾಚರಣೆಗೆ ಸಾಕ್ಷಿಗಳಾಗಿವೆ. ಮಂಡ್ಯದಲ್ಲಿ ಎಸ್‌ಪಿ ಯತೀಶ್ ಮತ್ತವರ ತಂಡ ವೇಗವಾಗಿ ಮುಂದೆ ಸಾಗಿದ್ದರೂ, ಯಾವುದೇ ಹಂತವನ್ನು ತಪ್ಪಿಸಿರಲಿಲ್ಲ. ಅವರು ಕಾಂತರಾಜುವನ್ನು ಬಂಧಿಸಿ, ಆತನ ಅಪರಾಧವನ್ನು ಸಾಬೀತುಪಡಿಸಿ, ಆತನಿಗೆ ಸಾಯುವ ತನಕ ಜೈಲು ಶಿಕ್ಷೆಯಾಗುವಂತೆ ಸಾಬೀತುಪಡಿಸಿದ್ದರು. ಸಾಕ್ಷಿಗಳು, ಫೋನ್ ದಾಖಲೆಗಳು, ನ್ಯಾಯಾಲಯ ಪ್ರಕ್ರಿಯೆಗಳು ಎಲ್ಲವೂ ಸಾರ್ವಜನಿಕರಿಗೆ ಮುಕ್ತವಾಗಿದ್ದವು. ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಲಭಿಸಿ, ಸಾರ್ವಜನಿಕರೂ ಕಾನೂನು ಸರಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಭಾವಿಸಿದ್ದರು. ಆದರೆ, ಹುಬ್ಬಳ್ಳಿಯಲ್ಲಿ ಶಶಿಕುಮಾರ್ ಅವರ ಕ್ಷಿಪ್ರ ಕ್ರಮ ರಿತೇಶ್‌ನನ್ನು ತಡೆಯಲು ಯಶಸ್ವಿಯಾದರೂ, ಸತ್ಯ ವಿಚಾರಗಳನ್ನು ತಿಳಿಯದಂತೆ ಮಾಡಿತು. ರಿತೇಶ್ ಏನಾದರೂ ಏಕಾಂಗಿಯಾಗಿ ಇಂತಹ ಕೃತ್ಯ ನಡೆಸುತ್ತಿದ್ದನೇ? ಬೇರೆ ಮಕ್ಕಳೂ ಅಪಾಯಕ್ಕೆ ಸಿಲುಕಿರಬಹುದೇ? ಎಂಬಂತಹ ಪ್ರಶ್ನೆಗಳಿಗೆ ಉತ್ತರ ಲಭಿಸಿಲ್ಲ. ಇಂತಹ ಪ್ರಕರಣಗಳಲ್ಲಿ ಆರೋಪಿ ಹತ್ಯೆಯಾದರೆ, ಪ್ರಕರಣ ಮುಕ್ತಾಯಗೊಳ್ಳುತ್ತದೆಯೇ ಹೊರತು, ಸಮಾಜದಲ್ಲಿ ಮೂಡಿದ ಭೀತಿ, ಅನುಮಾನಗಳು ಪರಿಹಾರಗೊಳ್ಳುವುದಿಲ್ಲ.
ಕರ್ನಾಟಕ ಪೊಲೀಸರ ಮುಂದೆ ಬಹುದೊಡ್ಡ ಸಮಸ್ಯೆಗಳಿವೆ. ಕೆಲವು ಅಧಿಕಾರಿಗಳು ತಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ ಅಧಿಕಾರವನ್ನು ದುರುಪಯೋಗ ಪಡಿಸುತ್ತಾರೆ ಎನ್ನಲಾಗಿದ್ದು, ಅವರನ್ನು ದೊಡ್ಡ ವ್ಯಕ್ತಿಗಳು ರಕ್ಷಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳ ನಡುವೆ, ಮಂಡ್ಯ ಪೊಲೀಸರ ಉತ್ತಮ ಕಾರ್ಯಾಚರಣೆ ಅಪರೂಪದ ಘಟನೆಯಾಗಿ ಕಾಣುವಂತೆ ಮಾಡುತ್ತದೆ. ಹುಬ್ಬಳ್ಳಿ ಘಟನೆಯಲ್ಲಿ ಪೊಲೀಸರು ಸಮಸ್ಯೆಯನ್ನು ಪರಿಹರಿಸುವುದಕ್ಕಿಂತಲೂ ತಾವು ಕಠಿಣವಾಗಿ ಕಾಣಲು ಪ್ರಯತ್ನಿಸುವಂತೆ ಕಾಣುತ್ತಿದ್ದಾರೆ.
ಮಂಡ್ಯ ಘಟನೆ ಹುಬ್ಬಳ್ಳಿಯಂತಹ ಪ್ರಕರಣಗಳಿಗೆ ಮಾದರಿಯಾಗಲಿ
ಹುಬ್ಬಳ್ಳಿಯಲ್ಲಿ ಶಶಿಕುಮಾರ್ ಅವರ ತಂಡ ನಿಜಕ್ಕೂ ಧೈರ್ಯವನ್ನು ಪ್ರದರ್ಶಿಸಿದೆ. ಪೊಲೀಸರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಅತ್ಯಾಚಾರಿಯನ್ನು ಹಿಡಿಯಲು ಪ್ರಯತ್ನ ನಡೆಸಿದ್ದಾರೆ. ಆದರೆ ಇಂತಹ ಪ್ರಕರಣಗಳಲ್ಲಿ ಧೈರ್ಯವೊಂದೇ ಸಾಕಾಗುವುದಿಲ್ಲ. ಮಂಡ್ಯದ ಘಟನೆಯಲ್ಲಿ ಎಸ್‌ಪಿ ಯತೀಶ್ ಅವರು ನ್ಯಾಯ ಎಂದರೆ ದುಷ್ಟರನ್ನು ಬಂಧಿಸಿ, ಆತನ ಅಪರಾಧವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಎಂದು ತೋರಿಸಿದ್ದು, ಕಾಂತರಾಜುವಿನಂತಹ ಅಪರಾಧಿ ಜೀವನ ಪರ್ಯಂತ ಜೈಲಿನಲ್ಲಿ ಕಳೆಯುವಂತೆ ಮಾಡಿದ್ದರು. ಹುಬ್ಬಳ್ಳಿಯ ಎನ್‌ಕೌಂಟರ್ ಸಾರ್ವಜನಿಕರು ಒಂದು ದಿನ ಖುಷಿಯಾಗಿರುವಂತೆ ಮಾಡಿದ್ದರೂ, ಹಲವಾರು ಪ್ರಶ್ನೆಗಳನ್ನು ಉಳಿಸಿದೆ. ಈ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳಿಲ್ಲ. ಆದ್ದರಿಂದ ಮುಂದೆಯೂ ಇಂತಹ ಘಟನೆಗಳು ನಡೆಯಬಹುದೇ ಎಂದು ತಿಳಿಯಲೂ ಸಾಧ್ಯವಿಲ್ಲ. ಆರೋಪಿಯ ಮೇಲೆ ಗುಂಡು ಹಾರಿಸುವುದು ಮತ್ತು ಸಮಸ್ಯೆಯನ್ನು ಪರಿಹರಿಸುವುದು ಎರಡೂ ಒಂದೇ ಆಗಿರಲು ಸಾಧ್ಯವಿಲ್ಲ.
ಕರ್ನಾಟಕಕ್ಕೆ ಹುಬ್ಬಳ್ಳಿ ಪೊಲೀಸರಂತೆ ವೇಗವಾಗಿ ಮತ್ತು ಮಂಡ್ಯ ಪೊಲೀಸರಂತೆ ಸ್ಮಾರ್ಟ್ ಆಗಿ ಕಾರ್ಯಾಚರಿಸುವ ಪೊಲೀಸರ ಅಗತ್ಯವಿದೆ. ಪ್ರಕರಣಗಳು ಮುಕ್ತವಾಗಿದ್ದು, ಎನ್‌ಕೌಂಟರ್‌ಗಳ ಕುರಿತಂತೆ ಸ್ವತಂತ್ರ ಪರೀಕ್ಷೆಗಳಿಗೆ ಅವಕಾಶವಿರಬೇಕು. ಭ್ರಷ್ಟ ಅಧಿಕಾರಿಗಳನ್ನು ಇವುಗಳಿಂದ ಹೊರಗಿಡಬೇಕು. ಹುಬ್ಬಳ್ಳಿಯಲ್ಲಿ ಆ ಬಾಲಕಿ ಪ್ರಾಣ ಕಳೆದುಕೊಂಡ ಶೆಡ್ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಹುಬ್ಬಳ್ಳಿ ಪೊಲೀಸರು ಬಂದೂಕಿನ ಟ್ರಿಗರ್ ಎಳೆಯುವುದಕ್ಕಿಂತಲೂ ಹೆಚ್ಚಾಗಿ, ಜನರಲ್ಲಿ ನಂಬಿಕೆ ಮೂಡಿಸುವತ್ತ ಕ್ರಮ ಕೈಗೊಳ್ಳಬೇಕು.
ಮುಂದೇನು?
ನಾವು ಕಳೆದುಕೊಳ್ಳುವ ಪ್ರತಿಯೊಂದು ಮಗುವಿಗೂ ಕಣ್ಣೀರು ಮತ್ತು ಗುಂಡಿನಿಂದ ಹೆಚ್ಚಿನ ನ್ಯಾಯ ಲಭಿಸಬೇಕು. ಕರ್ನಾಟಕಕ್ಕೆ ಅನ್ನಪೂರ್ಣೇಶ್ವರಿ ಅವರಂತಹ ಧೈರ್ಯಶಾಲಿಗಳಾದ, ಪ್ರಾಮಾಣಿಕರಾದ, ಪ್ರಾಮಾಣಿಕ ನಾಯಕರ ಬೆಂಬಲವನ್ನೂ ಹೊಂದಿರುವ ಅಧಿಕಾರಿಗಳು ಬೇಕು. ಪೊಲೀಸರಿಗೆ ಕ್ಯಾಮರಾ, ಅವರ ಆದಾಯದ ಮೇಲೆ ಕಣ್ಣು, ಮತ್ತು ಮಕ್ಕಳ ಸುರಕ್ಷತೆಗಾಗಿ ಗಸ್ತು ಕೇವಲ ಆಲೋಚನೆಗಳಲ್ಲ. ಅವು ಇಂದಿನ ಅವಶ್ಯಕತೆಗಳಾಗಿವೆ. ಕಾಂತರಾಜುವಿಗೆ ಕಾನೂನಿನಡಿ ಶಿಕ್ಷೆ ನೀಡುವ ಮೂಲಕ ಮಂಡ್ಯ ಇಂತಹ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತೋರಿಸಿದೆ. ಆದರೆ ಹುಬ್ಬಳ್ಳಿಯ ಘಟನೆಯಲ್ಲಿನ ಆತುರ ಸಮಾಜ ಯಾಕೆ ಅಜಾಗರೂಕವಾಗಬಾರದು ಎನ್ನುವುದನ್ನೂ ಸಾಬೀತುಪಡಿಸಿದೆ. ನ್ಯಾಯ ಎನ್ನುವುದು ನಾವು ನಂಬಿಕೆ ಇರಿಸುವ ಪ್ರಕ್ರಿಯೆಯಾಗಬೇಕೇ ಹೊರತು, ಹೊಗೆಯಂತೆ ಕಾಣಿಸಿಕೊಂಡು ಕಣ್ಮರೆಯಾಗಬಾರದು.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)