ಬೆಂಗಳೂರು [ನ.14]:  ಹೊರ ವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಉಂಟಾಗಿರುವ ದೊಡ್ಡ ಗುಂಡಿ ಮುಚ್ಚುವ ಕಾರ್ಯ ವಿಳಂಬದಿಂದ ಸುಮನಹಳ್ಳಿ ಜಂಕ್ಷನ್‌ನಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಗುಂಡಿ ಮುಚ್ಚುವ ಕಾಮಗಾರಿ ಹಿನ್ನೆಲೆಯಲ್ಲಿ ಮೇಲ್ಸೇತುವೆಯ ಒಂದು ಮಾರ್ಗದ ರಸ್ತೆ ಬಂದ್ ಮಾಡಿರುವುದರಿಂದ ನಾಯಂಡಹಳ್ಳಿ, ನಾಗರಬಾವಿ, ಮಾಳಗಾಲ ಹಾಗೂ ಸುತ್ತ ಮುತ್ತಲ ಪ್ರದೇಶಗಳಿಂದ ಬರುವ ವಾಹನಗಳು ಸುಮನಹಳ್ಳಿ ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲಿ ಸಂಚರಿಸಬೇಕಿರುವುದರಿಂದ ಕಿ. ಮೀ. ದೂರದವರೆಗೂ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದ ನಿತ್ಯ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಹಾಗೂ ಪಾದಚಾರಿಗಳು ಕೂಡ ಹೈರಾಣಾಗುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುಂಡಿ ಬಿದ್ದು ಐದು ದಿನ ಕಳೆದರೂ ತುರ್ತಾಗಿ ಗುಂಡಿ ಮುಚ್ಚುವ ಕಾರ್ಯ ನಡೆಸದೆ ಬಿಬಿಎಂಪಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ನಾಯಂಡಹಳ್ಳಿಯಿಂದ ತುಮಕೂರು ರಸ್ತೆ ವರೆಗೆ 20 ನಿಮಿಷದಲ್ಲಿ ಸಂಚರಿಸಬಹುದಿತ್ತು. ಆದರೆ, ಈಗ ಸುಮನಹಳ್ಳಿ ಜಂಕ್ಷನಲ್ಲಿ ಸಂಚಾರ ದಟ್ಟಣೆಯಿಂದ ಆ ಸಿಗ್ನಲ್ ದಾಟಲು ಅರ್ಧಗಂಟೆ ಬೇಕಾಗುತ್ತಿದೆ. ಆದಷ್ಟು ಬೇಗ ಪಾಲಿಕೆ ಮೇಲ್ಸೇತುವೆ ದುರಸ್ತಿ ಕಾರ್ಯ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ವಾಹನ ಸವಾರರ ಆಗ್ರಹವಾಗಿದೆ.