ಹವ್ಯಕರು 3 ಮಕ್ಕಳ ಹೆರಬೇಕು, 4ನೇ ಮಗು ಹೆತ್ತರೆ ಅದರ ಜವಾಬ್ದಾರಿ ಮಠದ್ದು: ಸ್ವಾಮೀಜಿ
ಹವ್ಯಕರು ಮೂರು ಮಕ್ಕಳನ್ನು ಹೊಂದಿರಬೇಕು ಮತ್ತು ನಾಲ್ಕನೇ ಮಗುವಿನ ಜವಾಬ್ದಾರಿಯನ್ನು ಮಠ ವಹಿಸಿಕೊಳ್ಳುತ್ತದೆ ಎಂದು ಸ್ವರ್ಣವಲ್ಲಿ ಮಠದ ಸ್ವಾಮೀಜಿ ಹೇಳಿದ್ದಾರೆ. ಹವ್ಯಕ ಸಮುದಾಯದಲ್ಲಿ ವಿವಾಹ ಮತ್ತು ವಿಚ್ಛೇದನದ ಸಮಸ್ಯೆಗಳನ್ನು ಪರಿಹರಿಸಲು ಶಾಸ್ತ್ರೀಯ ವಿವಾಹಗಳನ್ನು ಉತ್ತೇಜಿಸಬೇಕು ಮತ್ತು ದಾಂಪತ್ಯ ಶಿಬಿರಗಳನ್ನು ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ
ಬೆಂಗಳೂರು: ಸೂಕ್ತ ವಯಸ್ಸಿನಲ್ಲಿ ಶಾಸ್ತ್ರೀಯ ವಿವಾಹ ಜರುಗಿಸಲು ಪ್ರತಿ ಹವ್ಯಕರ ಮನೆಯಲ್ಲೂ ಸಂಕಲ್ಪ ಆಗಬೇಕು. ದಂಪತಿ ನಾಲ್ಕನೇ ಮಗು ಪಡೆದರೂ ಮಠ ಅದರ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧವಾಗಿದೆ' ಎಂದು ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಜತೆಗೆ ವಿಚ್ಚೇದನ ತಡೆ ಸೇರಿ ಹವ್ಯಕತನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ, ಕ್ರಮಗಳ ಅನುಷ್ಠಾನವಾಗಬೇಕು ಎಂದೂ ಅವರು ಕರೆ ನೀಡಿದ್ದಾರೆ.
ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ 'ಸಹಸ್ರಚಂದ್ರಸಭಾ' ಕಾರ್ಯಕ್ರಮದಲ್ಲಿ ಮಾತನಾಡಿ ಹವ್ಯಕರ ಉಳಿವಿಗೆ ಪಾರಮಾರ್ಥಿಕ, ವ್ಯವಹಾರಿಕವಾಗಿ ತೆಗೆದುಕೊಳ್ಳಬೇಕಾದ ಸೂತ್ರಗಳನ್ನು ತಿಳಿಸಿದರು.
ವೈದಿಕರು, ಅಡುಗೆಯವರು, ಕೃಷಿಕ ಯುವಕರನ್ನು ಯುವತಿಯರು ವಿವಾಹವಾಗಲು ಒಪ್ಪುತ್ತಿಲ್ಲ, ವಿವಾಹ ಹಾಗೂ ವಿಚ್ಛೇದನದ ಸಮಸ್ಯೆ ತೀವ್ರವಾಗಿದೆ. ಇಂಥವನ್ನು ತಡೆಯದಿದ್ದರೆ ಹವ್ಯಕ ಸಮಾಜ ಉಳಿವುದು ಕಷ್ಟ. ಹೀಗಾಗಿ ಸೂಕ್ತ ವಯಸ್ಸಿನಲ್ಲಿ ಶಾಸ್ತ್ರೀಯ ವಿವಾಹ ಏರ್ಪಡಿಸಬೇಕು. ವಿವಾಹಿತರಿಗೆ ಶಿಬಿರ ಏರ್ಪಡಿಸಿ ಮಾರ್ಗದರ್ಶನ ನೀಡಬೇಕಿದೆ. ದಾಂಪತ್ಯ ಗಟ್ಟಿಗೊಳಿಸಿಕೊಳ್ಳುವ, ಸಂತಾನ ಪಡೆವ, ಮಕ್ಕಳಿಗೆ ಸಂಸ್ಕಾರ ಕೊಡುವ ಬಗ್ಗೆ ಮನದಟ್ಟು ಮಾಡಿಕೊಡಬೇಕಿದೆ ಎಂದರು.
ಸಂಸ್ಕಾರ ಮತ್ತು ಜನಸಂಖ್ಯೆಯ ಕೊರತೆ ಹವ್ಯಕ ಸಮುದಾಯಕ್ಕೆ ಸವಾಲಾಗಿದೆ. ಯುವ ಸಮುದಾಯ ನಾಸ್ತಿಕತೆ, ಭೋಗದತ್ತ ಹೆಚ್ಚು ಒಲವು ತೋರುತ್ತಿದೆ. ಆಧುನಿಕ ವ್ಯವಸ್ಥೆ, ಧರ್ಮ ಪ್ರಜ್ಞೆ ಇಲ್ಲದ ವಿಜ್ಞಾನದಿಂದ ಪ್ರಭಾವಿತರಾದ ಯುವಕರು ವಿವಾಹ ವ್ಯವಸ್ಥೆಯಿಂದ ವಿಮುಖರಾಗಿ ಅನೈತಿಕ ಮಾರ್ಗ ಅನುಸರಿಸುತ್ತಿದ್ದಾರೆ. ಇದು ಹವ್ಯಕ ಸಮಾಜದ ಪತನಕ್ಕೆ ಕಾರಣವಾಗುತ್ತಿದೆ. ಎಂದು ಕಳವಳ ವ್ಯಕ್ತಪಡಿಸಿದರು. ಹೇಗೇಗೋ ಉಳಿದರೆ ಪ್ರಯೋಜನವಿಲ್ಲ, ಹವ್ಯಕ ಬ್ರಾಹ್ಮಣತನ ಉಳಿಸಿಕೊಳ್ಳುವ ನಿಟ್ಟಿನಲ್ಲಿ 21-18ರ ವಯಸ್ಸಿಗೆ ಯುವಕ, ಯುವತಿಯರಿಗೆ ವಿವಾಹ ಏರ್ಪಡಿಸಬೇಕು. ಆಡಂಬರದ ಬದಲು ಶಾಸ್ತ್ರೀಯ ವಿವಾಹಕ್ಕೆ ಆದ್ಯತೆ ದೊರೆಯಬೇಕು. ಕನಿಷ್ಠ ಮೂರು ಸಂತಾನ ಪಡೆಯುವಂತೆ ಪ್ರೇರೇಪಿಸಬೇಕು. ನಾಲ್ಕನೇ ಮಗುವಾದರೆ ಸ್ವರ್ಣವಲ್ಲೀ ಮಠಕ್ಕೆ ನೀಡಿ, ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಸ್ವರ್ಣವಲ್ಲೀ ಮಠ ಹವ್ಯಕ ಕನ್ಯಾ ಸಂಸ್ಕಾರ ಶಿಬಿರ, ನವದಂಪತಿಗೆ ಶಿಬಿರ, ಉತ್ತರ ಭಾರತದ ಸಂಬಂಧ ಏರ್ಪಡಿಸುವ ಮೂಲಕ ಹವ್ಯಕ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಇನ್ನು, ಹವ್ಯಕ ಬ್ರಾಹ್ಮಣರಲ್ಲಿ ಒಗ್ಗಟ್ಟು ಮೂಡಿಸುವುದು ಇನ್ನೊಂದು ಸಮುದಾಯವನ್ನು ತುಳಿಯಲು ಅಲ್ಲ ಎಂಬುದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಸ್ವರ್ಣವಲ್ಲಿ ಆನಂದ ಬೋಧೇಂದ್ರ ಸರಸ್ವತಿ ಸ್ವಾಮೀಜಿ, ಬೆಂಗಳೂರು ರಾಮಕೃಷ್ಣ ಮಠದ ಚಂದ್ರೇಶಾನಂದಜೀ ಮಹಾರಾಜ್, ಹೊರನಾಡು ಧರ್ಮಕರ್ತ ಡಾ.ಭೀಮೇಶ್ವರ ಜೋಷಿ, ಪುತ್ತೂರು ಶಾಸಕ ಆಶೋಕ ಕುಮಾರ ರೈ, ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ, ಸಮ್ಮೇಳನದ ಗೌರವಾಧ್ಯಕ್ಷ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಯದರ್ಶಿ ವೇಣು ವಿಶ್ಲೇಶ ಸೇರಿ ಇತರರಿದ್ದರು.
ನಾಲ್ಕು ಮಕ್ಕಳನ್ನು ಪಡೆಯಬೇಕು: ರವಿ
ಮನೆಗೆ ಇಬ್ಬರು, ಧರ್ಮಕ್ಕೊಬ್ಬ, ದೇಶಕ್ಕೊಬ್ಬ ಎಂದು ಒಟ್ಟು ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಸಲಹೆ ನೀಡಿದ್ದಾರೆ. ನಾವು ಸನಾತನ ಧರ್ಮದ ಭಾಗ ಎಂಬುದನ್ನು ಮರೆಯಬಾರದು. ನಾವಿಬ್ಬರು ನಮಗಿಬ್ಬರು ಕಟ್ಟುಪಾಡಿನಿಂದ ಹೊರಬರಬೇಕು. ಹವ್ಯಕ ಸಮುದಾಯವು ಸನಾತನ ಪರಂಪರೆಯ ಶ್ರೇಷ್ಠ ಕೊಂಡಿ. ಜ್ಞಾನದಲ್ಲಿ ಯಾವ ಸಮುದಾಯಕ್ಕೂ ಹವ್ಯಕ ಸಮುದಾಯ ಕಡಿಮೆ ಇಲ್ಲ ಹಿಂದುತ್ವ ಎಂದಾಕ್ಷಣ ಜೊತೆಯಲ್ಲಿ ನಿಲ್ಲುತ್ತದೆ ಎಂದು ಪ್ರಶಂಸಿಸಿದರು.
ಬೆಂಗಳೂರು: ಸನಾತನ ಹಿಂದೂ ಧರ್ಮದ ಸಂರಕ್ಷಣೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಸಮುದಾಯಗಳು ತಮ್ಮ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿಗಳನ್ನು ಪಾಲಿಸಬೇಕು. ಹವ್ಯಕ ಸಮುದಾಯ ಹಿಂದೂ ಪರಂಪರೆಯ ಶ್ರೇಷ್ಠ ಕೊಂಡಿ ಎಂಬ ಒಕ್ಕೊರಲ ಅಭಿಪ್ರಾಯ 'ತೃತೀಯ ವಿಶ್ವ ಹವ್ಯಕ ಸಮ್ಮೇಳನ'ದ ಸಮಾರೋಪ ಮತ್ತು 'ಸಹಸ್ರಚಂದ್ರ' ಸ್ಮರಣ ಸಂಚಿಕೆ ಲೋಕಾರ್ಪಣೆ ಸಮಾರಂಭದಲ್ಲಿ ವ್ಯಕ್ತವಾಯಿತು. ಅರಮನೆ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಮ್ಮೇಳನದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು, ಗಣ್ಯರು ಇಂದು ಸನಾತನ ಹಿಂದೂ ಧರ್ಮದ ಪುನರುತ್ಥಾನದ ಅವಶ್ಯಕತೆ, ಜನಸಂಖ್ಯೆ ಹೆಚ್ಚಳ, ಸಂಸ್ಕೃತಿ, ಪರಂಪರೆಯ ಪಾಲನೆ ಬಗ್ಗೆ ಹವ್ಯಕ ಸಮುದಾಯಕ್ಕೆ ಸಂದೇಶ ನೀಡಿದರು.
ವರ್ಚುವಲ್ ಮೂಲಕ ಪಾಲ್ಗೊಂಡ ಕಂಚಿ ಕಾಮಕೋಟಿ ಪೀಠದ ಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ಹವ್ಯಕ, ವೀರಶೈವ, ಒಕ್ಕಲಿಗ, ಕುರುಬ ಸೇರಿ ಎಲ್ಲ ಸಮುದಾಯದವರೂ ಸಂಘಟಿತರಾಗಿ ಸನಾತನ ಹಿಂದೂ ಧರ್ಮವನ್ನು ಸಂರಕ್ಷಿಸಬೇಕು. ಧರ್ಮ ಸಂರಕ್ಷಣೆ ಆಗದಿದ್ದರೆ ವಿಶ್ವಶಾಂತಿ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜನಸಂಖ್ಯೆ ಹೆಚ್ಚಳವಾಗಲಿ: ಹಿಂದೂಗಳ ಜನಸಂಖ್ಯೆ ಹೆಚ್ಚಾಗಬೇಕು.ಕಡಿಮೆ ಆಗಬಾರದು. ವೃದಾಶ್ರಮಗಳಿಗೆ ಅವಕಾಶ ನೀಡಬಾರದು. ವಿದೇಶಗಳಲ್ಲಿರುವವರು ತಾಯ್ಕೆಲದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಸಮಾಜದ ಕಾರ್ಯಗಳಿಗೆ ಸಮಯ ನೀಡಬೇಕು. ಹವ್ಯಕ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಆಗಮಿಸಿರುವುದು ಸಂತೋಷದ ವಿಚಾರ. ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ ಸೇರಿ ಎಲ್ಲ ರಂಗದಲ್ಲೂ ಹವ್ಯಕ ಸಮುದಾಯ ಸುಭದ್ರವಾಗಬೇಕು ಎಂದು ಕರೆ ನೀಡಿದರು.
ಅಡಕೆಯಿಂದ ಐಟಿಗೆ ವಾಲಿದ ಹವ್ಯಕರು-ಎಚೈಪಿ:
ಹವ್ಯಕರ ಯುವ ಸಮುದಾಯ ಅಡಕೆಯಿಂದ ಐಟಿ ಕ್ಷೇತ್ರದತ್ತವಾಲಿದೆ. ಪತ್ರಿಕೋದ್ಯಮದಂತೆ ಮುಂದಿನ ದಿನಗಳಲ್ಲಿ ಐಟಿ ಕ್ಷೇತ್ರದಲ್ಲಿ ಮುಂದಾಳತ್ವ ಪಡೆಯ ಲಿದೆ ಎಂಬುದು ನನ್ನ ನಿರೀಕ್ಷೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಹವ್ಯಕರು ಬೆಂಗಳೂರಿನಲ್ಲಿ ಐಟಿ ಬೆಳೆಸುವುದು ಮುಖ್ಯವಲ್ಲ, ಅದನ್ನು ತಮ್ಮ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಗೆ ತೆಗೆದುಕೊಂಡು
ಹೋಗಿ ಅಲ್ಲಿ ಉದ್ಯಮ ಸ್ಥಾಪಿಸಬೇಕು. ಇನ್ನು, ಸಹಕಾರಿ ಸಂಘಗಳು ಯಶಸ್ವಿಯಾಗಿ ನಡೆದಿವೆ ಎಂದಾದರೆ ಅದಕ್ಕೆ ಹವ್ಯಕ ಸಮುದಾಯದ ಕೊಡುಗೆ ಸಾಕಷ್ಟಿದೆ. ಹವ್ಯಕ ಸಮುದಾಯದವರಲ್ಲಿ ಜಾತಿ, ಮತದ ಭೇದ ಭಾವ ಇಲ್ಲ ಎಂದು ಹೇಳಿದರು.
ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಅಭಿನವ ಶಂಕರ ಭಾರತೀ ಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಹೊರ ನಾಡಿನ ಧರ್ಮಕರ್ತ ಭೀಮೇಶ್ವರ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಅಖಿಲ ಹವ್ಯಕ ಮಹಾ ಸಭಾ ಅಧ್ಯಕ್ಷ ಡಾ| ಗಿರಿಧರ ಕಜೆ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಗೌಡ ಉಪಸ್ಥಿತರಿದ್ದರು.
ಸರ್ವಧರ್ಮ ಸಮ್ಮೇಳನ: ರವಿ ಹೆಗಡೆ
ಎಲ್ಲರನ್ನೂ ಸೇರಿಸಿಕೊಂಡು, ಎಲ್ಲರನ್ನೂ ಒಳಗೊಂಡ ಸರ್ವಧರ್ಮದ ಸಮ್ಮೇಳನ ಇದಾಗಿದೆ. ಇದೊಂದು ಅದ್ಭುತ ಕಲ್ಪನೆಯಾಗಿದ್ದು, ದೊಡ್ಡ ಹಬ್ಬದ ರೀತಿ ಸಂಭ್ರಮಿಸಲಾಗಿದೆ. ಇದಕ್ಕಾಗಿ ಶ್ರಮಿಸಿದ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಅವರನ್ನು ಅಭಿನಂದಿಸುತ್ತೇನೆ ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೂರು ದಿನ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ನಾಲ್ಕನೇ ಸಮ್ಮೇಳನಕ್ಕೆ ಎಲ್ಲರೂ ಮಕ್ಕಳೊಂದಿಗೆ ಬರಬೇಕು. ಇಲ್ಲಿ ಹವ್ಯಕ ಸಂಸ್ಕೃತಿಯ ದರ್ಶನವಾಗಿದ್ದು, ಇದನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದರು.