ಯಾರಿಗೂ ಬೇಡವಾದ ಜಾಗ ಆಯ್ಕೆ, 15 ವರ್ಷ ಹಿಂದೆ ಸರ್ಜಾಪುರದ ಭವಿಷ್ಯ ನುಡಿದಿದ್ದ ಸಿಜೆ ರಾಯ್, ದುರಂತ ಅಂತ್ಯಕಂಡ ಸೆಜೆ ರಾಯ್ ಈಗಿನ ಎಲ್ಲಾ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಒಂದೂವರೆ ದಶಕಗಳ ಹಿಂದಯೇ ಬ್ಯೂಸಿನೆಸ್ ಐಡಿಯಾ ನೀಡಿದ್ದರು. 

ಬೆಂಗಳೂರು (ಜ.30) ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿಜೆ ರಾಯ್ ದುರಂತ ಅಂತ್ಯ ಹಲವರನ್ನು ಬೆಚ್ಚಿ ಬೀಳಿಸಿದೆ. ಅತ್ಯಂತ ಶ್ರೀಮಂತಿಕೆಯ ಬದುಕು, ಐಷಾರಾಮಿ ಜೀವನದಲ್ಲಿದ್ದ ಸಿಜೆ ರಾಯ್ ಏಕಾಏಕಿ ಗುಂಡು ಹಾರಿಸಿಕೊಂಡು ಅಂತ್ಯಕಂಡಿದ್ದಾರೆ. ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಸಿಜೆ ರಾಯ್ ಸಾಮಾನ್ಯ ವ್ಯಕ್ತಿಯಾಗಿ ಉದ್ಯಮ ಆರಂಭಿಸಿ ಏಷ್ಯಾದಲ್ಲೇ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. 15 ವರ್ಷಗಳ ಹಿಂದೆ ಸರ್ಜಾಪುರ, ವೈಟ್‌ಫೀಲ್ಡ್ ಸೇರಿದಂತೆ ಬೆಂಗಳೂರಿನ ಹೊರವಲಯದ ಭವಿಷ್ಯ ನುಡಿದಿದ್ದ ಸಿಜೆ ರಾಯ್, ಬೆಂಗಳೂರಿನ ಚಿತ್ರಣ ಬದಲಿಸಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಬೆಂಗಳೂರಿನ ಪ್ರಮುಖ ಸ್ಥಳ ಬಿಟ್ಟು ಸರ್ಜಾಪುರ ಆಯ್ಕೆ

ಸಿಜೆ ರಾಯ್ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸುವಾಗ ಕೈಯಲ್ಲಿ ದುಡ್ಡಿರಲಿಲ್ಲ. ಇರುವ ದುಡ್ಡಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಒಂದು ಕಟ್ಟಡ ಕಟ್ಟಲು ಜಾಗ ಖರೀದಿಸ ಬಹುದು ಅಷ್ಟೆ. ಸಿಜೆ ರಾಯ್ ಆಪ್ತರು, ಕಂಪನಿಯ ಬೋರ್ಡ್ ಸದಸ್ಯರು ಸೇರಿದಂತೆ ಎಲ್ಲರೂ ಬೆಂಗಳೂರಿನ ಹೃದಯ ಭಾಗದಲ್ಲಿ ಜಾಗ ಖರೀದಿಸಿ ರಿಯಲ್ ಎಸ್ಟೇಟ್ ಆರಂಭಿಸಲು ಸಲಹೆ ನೀಡಿದ್ದರು. ಆದರೆ ಎಲ್ಲರ ಸಲಹೆಗಳಿಗೆ ವಿರುದ್ದವಾಗಿ ಯಾರಿಗೂ ಬೇಡವಾದ ಸರ್ಜಾಪುರದಲ್ಲಿ ಭೂಮಿ ಖರೀದಿಸಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದ್ದರು. 15 ವರ್ಷಗಳ ಹಿಂದೆ ಸಿಜೆ ರಾಯ್, ಸರ್ಜಾಪುರ ಸೇರಿದಂತೆ ಈಗ ಗುರುತಿಸಿಕೊಂಡಿರುವ ಐಟಿ ವಲಯಗಳ ಭವಿಷ್ಯವನ್ನು ಸಿಜೆ ರಾಯ್ 15 ವರ್ಷ ಹಿಂದೆ ನುಡಿದಿದ್ದರು. ಈಗಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಬೆಂಗಳೂರಿನ ಹೊರವಲಯವನ್ನೇ ಟಾರ್ಗೆಟ್ ಮಾಡುತ್ತಾರೆ. ಆದರೆ ಈ ದಾರಿಯನ್ನು ಒಂದೂವರೆ ದಶಕಗಳ ಹಿಂದೆಯೇ ಸಿಜೆ ರಾಯ್ ಮಾಡಿ ತೋರಿಸಿದ್ದರು.

ದಕ್ಷಿಣ ಭಾರತ ಮತ್ತು ಮಧ್ಯಪ್ರಾಚ್ಯದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಕಾನ್ಫಿಡೆಂಟ್ ಗ್ರೂಪ್‌ನ ಉದಯ ಕೇವಲ ಒಂದು ಬಿಸಿನೆಸ್ ಯಶಸ್ಸಲ್ಲ, ಬದಲಿಗೆ ದೂರದೃಷ್ಟಿ ಮತ್ತು ಅಚಲ ಆತ್ಮವಿಶ್ವಾಸದ ಕಥೆಯೂ ಆಗಿತ್ತು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸಿಜೆ ರಾಯ್ ವಿದೇಶದಲ್ಲಿ ಶಿಕ್ಷಣ ಮುಗಿಸಿ, ಫಾರ್ಚೂನ್ 500 ಕಂಪನಿಯಾದ ಹ್ಯೂಲೆಟ್-ಪ್ಯಾಕರ್ಡ್‌ನಲ್ಲಿದ್ದ ಉತ್ತಮ ಕೆಲಸ ಗಿಟ್ಟಿಸಿಕೊಂಡಿದ್ದರು. ಆದರೆ ಕೆಲಸ ತೊರೆದು ಉದ್ಯಮಿಯಾಗಲು ಹೆಜ್ಜೆ ಇಟ್ಟಿದ್ದರು.

ಆರ್ಥಿಕ ಹಿಂಜರಿತದಲ್ಲಿ ರಿಯಲ್ ಎಸ್ಟೇಟ್ ಉದ್ಯಮ

2006ರಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟಾಗ ಜಗತ್ತು ಆರ್ಥಿಕ ಹಿಂಜರಿತದ ಹಿಡಿತದಲ್ಲಿತ್ತು. ಆದರೆ, ಸಾಲಮುಕ್ತ ವ್ಯಾಪಾರ ಮಾದರಿ ಎಂಬ ವಿಶಿಷ್ಟ ಶೈಲಿಯ ಮೂಲಕ ಅವರು ಗ್ರೂಪ್ ಅನ್ನು ಯಶಸ್ಸಿನ ಹಾದಿಗೆ ತಂದರು. 165ಕ್ಕೂ ಹೆಚ್ಚು ಬೃಹತ್ ಯೋಜನೆಗಳು ಮತ್ತು 15,000ಕ್ಕೂ ಹೆಚ್ಚು ಗ್ರಾಹಕರು ಇಂದು ಕಾನ್ಫಿಡೆಂಟ್ ಗ್ರೂಪ್‌ನ ಶಕ್ತಿಯಾಗಿದ್ದಾರೆ. ರಿಯಲ್ ಎಸ್ಟೇಟ್ ಜೊತೆಗೆ ಹಾಸ್ಪಿಟಾಲಿಟಿ, ಮನರಂಜನೆ, ಶಿಕ್ಷಣ, ವಾಯುಯಾನ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಂತಹ ಕ್ಷೇತ್ರಗಳಲ್ಲಿಯೂ ಗ್ರೂಪ್ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ.

ಬೆಂಗಳೂರಿನ ಸರ್ಜಾಪುರ ಒಂದು ಐಟಿ ಹಬ್ ಆಗಲಿದೆ ಎಂದು 15 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಅವರು, ಅಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಸಿ ಅಭಿವೃದ್ಧಿಯ ಕೇಂದ್ರಬಿಂದುವನ್ನಾಗಿ ಮಾಡಿದರು. ದುಬೈ ಮಾರುಕಟ್ಟೆಯಲ್ಲಿ ಸಾಲ ಮತ್ತು ಡೌನ್ ಪೇಮೆಂಟ್‌ಗಳಿಗೆ ಹೊಸ ಮಾದರಿಗಳನ್ನು ಪರಿಚಯಿಸಿ ದಾಖಲೆಯ ಮಾರಾಟ ಮಾಡಿ ಅವರು ಎಲ್ಲರನ್ನೂ ಬೆರಗುಗೊಳಿಸಿದ್ದರು. ಸುಮಾರು 300 ಎಕರೆ ವಿಸ್ತೀರ್ಣದ ಗಾಲ್ಫ್ ರೆಸಾರ್ಟ್ ಮತ್ತು ವಿಲ್ಲಾ ಪ್ರಾಜೆಕ್ಟ್ ಅವರ ವ್ಯವಹಾರ ಚತುರತೆಗೆ ಉದಾಹರಣೆಯಾಗಿದೆ.

ತಮ್ಮ ಯಶಸ್ಸಿನ ಹಿಂದೆ ಪತ್ನಿ ಲಿನಿ ರಾಯ್ ಮತ್ತು ಮಕ್ಕಳಾದ ರೋಹಿತ್, ರಿಯಾ ಅವರ ಬೆಂಬಲವಿದೆ ಎಂದು ಅವರು ಯಾವಾಗಲೂ ನಂಬಿದ್ದರು. ಬಿಸಿನೆಸ್ ಒತ್ತಡದ ನಡುವೆಯೂ ಕುಟುಂಬದೊಂದಿಗೆ ಸಮಯ ಕಳೆಯಲು ಮತ್ತು ತಮ್ಮ ಹವ್ಯಾಸವಾದ ಐಷಾರಾಮಿ ಕಾರುಗಳ ಸಂಗ್ರಹಕ್ಕೂ ಅವರು ಸಮಯ ಮೀಸಲಿಡುತ್ತಿದ್ದರು. ಪ್ರತಿಯೊಂದು ಐಷಾರಾಮಿ ಕಾರನ್ನು ಒಂದು ಹೂಡಿಕೆಯಾಗಿ ಸಿಜೆ ರಾಯ್ ನೋಡುತ್ತಾರೆ. ವ್ಯವಹಾರದಲ್ಲಿನ ವೈಫಲ್ಯಗಳನ್ನು ಸಂಭ್ರಮಿಸಿ, ಅದರಿಂದ ಪಾಠ ಕಲಿತು ಮತ್ತಷ್ಟು ಬಲಶಾಲಿಯಾಗಿ ಮುನ್ನಡೆಯುವ ಅವರ ಸಾಮರ್ಥ್ಯ ಯಾವುದೇ ಉದ್ಯಮಿಗೂ ಮಾದರಿಯಾಗಿದೆ.