ಕ್ಯಾಂಪಸ್ ಸೆಲೆಕ್ಷನ್ ಆಗಿದ್ದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಲೇಜಿನ 10 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. 

ಬೆಂಗಳೂರು [ಅ.23]: ಕಾಲೇಜಿನಿಂದ ಹೊರ ಹಾಕಿದ್ದಕ್ಕೆ ನೊಂದು ವಿದ್ಯಾರ್ಥಿ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲರು ಸೇರಿದಂತೆ 10 ಮಂದಿ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

14 ಲಕ್ಷ ವೇತನಕ್ಕೆ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದ ವಿದ್ಯಾರ್ಥಿ ಆತ್ಮಹತ್ಯೆ...

ಅ.22ರಂದು ಆಂಧ್ರಪ್ರದೇಶ ಮೂಲದ ವಿಜಯ ಭಾಸ್ಕರ್‌ ಎಂಬುವವರ ಪುತ್ರ ಶ್ರೀಹರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತನ ತಂದೆ ನೀಡಿದ ದೂರಿನ ಮೇರೆಗೆ ಸರ್ಜಾಪುರದ ಕಸವನಹಳ್ಳಿಯಲ್ಲಿರುವ ಪ್ರತಿಷ್ಠಿತ ‘ಅಮೃತಾ ವಿಶ್ವ ವಿದ್ಯಾಪೀಠ’ ಕಾಲೇಜಿನ ಪ್ರಾಂಶುಪಾಲ ಧನರಾಜ್‌ ಸ್ವಾಮಿ, ಉಪನ್ಯಾಸಕರಾದ ಎಸ್‌.ಜಿ.ರಾಕೇಶ್‌, ಬಿ.ಎಲ್‌.ಭಾಸ್ಕರ್‌, ರವಿಕುಮಾರ್‌, ಕೆ.ಟಿ.ರಮೇಶ್‌, ನಿಪುನ್‌ ಕುಮಾರ್‌, ಅಮುಧಾ, ಬಿ.ವೆಂಕಟೇಶ್‌, ಎಸ್‌.ಆರ್‌.ನಾಗರಾಜು ಮತ್ತು ಎನ್‌.ಎಸ್‌.ಮೂರ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿತರ ವಿರುದ್ಧ ಆತ್ಮಹತ್ಯೆಗೆ ಪ್ರಚೋಧನೆ(ಐಪಿಸಿ 306) ಮತ್ತು ಅಪರಾಧ ಪ್ರಕರಣದ ಸಾಕ್ಷ್ಯಗಳ ನಾಶ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.