ಬೆಂಗಳೂರು (ಅ.22):  ಕಾಲೇಜು ಆಡಳಿತ ಮಂಡಳಿ ಕಾಲೇಜಿನಿಂದ ಹೊರ ಹಾಕಿದ್ದಕ್ಕೆ ನೊಂದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಕಾಲೇಜಿನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಶ್ರೀಹರ್ಷ (24) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿರುವ ಪ್ರತಿಷ್ಠಿತ ‘ಅಮೃತಾ ವಿಶ್ವ ವಿದ್ಯಾಪೀಠ’ ಕಾಲೇಜಿನಲ್ಲಿ ಘಟನೆ ಸಂಭವಿಸಿದ್ದು, ವಿದ್ಯಾರ್ಥಿ ಆತ್ಮಹತ್ಯೆಯಿಂದ ಆಕ್ರೋಶಗೊಂಡ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ರಾತ್ರಿವರೆಗೆ ಪ್ರತಿಭಟನೆ ನಡೆಸಿದರು.

ಆಂಧ್ರಪ್ರದೇಶದ ವಿಜಯಕುಮಾರ್‌ ಎಂಬುವವರ ಪುತ್ರ ಹರ್ಷ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ-ಟೆಕ್‌ ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ಕಾಲೇಜು ಹಾಸ್ಟೆಲ್‌ನ ಊಟ ಹಾಗೂ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಸೆ.23ರಂದು ರಾತ್ರಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸಿದ್ದರು. ಈ ವೇಳೆ ಕೆಲ ವಿದ್ಯಾರ್ಥಿಗಳು ವಾರ್ಡನ್‌, ಕಾಲೇಜು ವಾಹನಗಳ ಮೇಲೆ ಕಲ್ಲು ತೂರಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆಡಳಿತ ಮಂಡಳಿ ತನಿಖೆಗೆ ‘ಶಿಸ್ತು ಪಾಲನಾ ಸಮಿತಿ’ ರಚನೆ ಮಾಡಿತ್ತು. ಪ್ರಕರಣದ ತನಿಖೆ ನಡೆಸಿದ ಸಮಿತಿ ಶ್ರೀ ಹರ್ಷ ಸೇರಿ 21 ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದರಂತೆ ವಿದ್ಯಾರ್ಥಿ ತಂದೆ ವಿಜಯಕುಮಾರ್‌ ಸೋಮವಾರ ಬೆಳಗ್ಗೆ ಕಾಲೇಜು ಬಳಿ ಬಂದಿದ್ದರು. ಆದರೆ ಅವರಿಗೆ ಕಾಲೇಜು ಒಳಗೆ ಪ್ರವೇಶ ನೀಡಿರಲಿಲ್ಲ. ಶ್ರೀ ಹರ್ಷನನ್ನು ಕರೆಯಿಸಿಕೊಂಡ ಆಡಳಿತ ಮಂಡಳಿ ಚರ್ಚೆ ನಡೆಸಿತ್ತು ಎನ್ನಲಾಗಿದೆ. ಬಳಿಕ ಮಧ್ಯಾಹ್ನ 12.30ರ ಸುಮಾರಿಗೆ ಕಾಲೇಜಿನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ವಿದ್ಯಾರ್ಥಿಯನ್ನು ಕಾಲೇಜಿನ ಕಾರಿನಲ್ಲಿ ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ.

ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ

ಘಟನೆಯಿಂದ ಆಕ್ರೋಶಗೊಂಡ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ರಾತ್ರಿವರೆಗೆ ಕಾಲೇಜು ಮುಂಭಾಗ ಪ್ರತಿಭಟಿಸಿದರು. ಶ್ರೀ ಹರ್ಷ ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ವಿದ್ಯಾರ್ಥಿಗಳು ಸ್ಥಳದಲ್ಲಿ ಜಮಾಯಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸ್ಥಳದಲ್ಲಿ ಬಿಗಿ ಪೊಲಿಸ್‌ ಭದ್ರತೆ ಕೈಗೊಂಡಿದ್ದರು.

ಘಟನಾ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಕಾಲೇಜಿನ ಸಿಬ್ಬಂದಿ ಪೆನಾಯಿಲ್‌ ಹಾಕಿ ರಕ್ತ ಚೆಲ್ಲಿದ್ದ ಸ್ಥಳವನ್ನು ಶುಚಿಗೊಳಿಸಿದ್ದಾರೆ. ಅಲ್ಲದೆ, ಕೆಲ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಘಟನೆ ಫೋಟೋವನ್ನು ಡಿಲೀಟ್‌ ಮಾಡಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಕಠಿಣ ಕ್ರಮಕ್ಕೆ ಆಡಳಿತ ಮಂಡಳಿ ಶಿಫಾರಸು

ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವರ್ಷ ವಿದ್ಯಾರ್ಥಿಗಳನ್ನು ಅಮಾನತು ಮಾಡಬೇಕು. ಈ ವರ್ಷದ ಪ್ರವೇಶ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. 25 ಸಾವಿರ ದಂಡ ಕಟ್ಟಿಸಿಕೊಂಡು 50 ಸಾವಿರ ರು. ಠೇವಣಿ ಜಮೆ ಮಾಡಿಸಿಕೊಳ್ಳಬೇಕು. ತಪ್ಪು ಎಸಗಿದ ವಿದ್ಯಾರ್ಥಿಗಳಿಂದ ಪೋಷಕರ ಸಹಿ ಜತೆ ಕ್ಷಮೆ ಪತ್ರ ಬರೆಯಿಸಿಕೊಳ್ಳಬೇಕು. ಷರತ್ತುಗಳನ್ನು ಅ.31ರ ಒಳಗಾಗಿ ಪೂರೈಸಬೇಕು. ಅಮಾನತುಗೊಂಡಿರುವ ಅವಧಿಯನ್ನು ಶೈಕ್ಷಣಿಕ ವರ್ಷಕ್ಕೆ ಪರಿಗಣಿಸುವುದಿಲ್ಲ. ಸಂಸ್ಥೆಯ ನಿಮಯ ಉಲ್ಲಂಘನೆ ಮುಂದುವರಿದರೆ ಶಾಶ್ವತವಾಗಿ ಸಂಸ್ಥೆಯಿಂದ ನಿಷೇಧಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟು ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಕಂಪನಿಗೆ ಆಯ್ಕೆಯಾಗಿದ್ದ!

ಅಂತಿಮ ವರ್ಷದ ಬಿ.ಟೆಕ್‌ ವಿದ್ಯಾರ್ಥಿಯಾಗಿದ್ದ ಶ್ರೀ ಹರ್ಷ ಕಾಲೇಜು ಕ್ಯಾಂಪಸ್‌ ಆಯ್ಕೆಯಲ್ಲಿ ಕಂಪನಿಯೊಂದಕ್ಕೆ ಕೆಲಸಕ್ಕೆ ಆಯ್ಕೆಯಾಗಿದ್ದ. ಕಂಪನಿ ವಿದ್ಯಾರ್ಥಿಗೆ 14 ಲಕ್ಷ ರು. ವೇತನದ ಪ್ಯಾಕೇಜ್‌ ಕೂಡ ಲಭ್ಯವಾಗಿತ್ತು. ಕಾಲೇಜು ಶಿಸ್ತು ಪಾಲನಾ ಸಮಿತಿ ವರದಿ ಬಳಿಕ ಶ್ರೀಹರ್ಷನನ್ನು ಅಮಾನತು ಮಾಡಿದ್ದಲ್ಲದೆ, ಕಂಪನಿಯಿಂದ ನೀಡಲಾಗಿದ್ದ ನೇಮಕಾತಿ ಪ್ರಮಾಣ ಪತ್ರವನ್ನು ಕಾಲೇಜು ಅಧಿಕಾರಿಗಳು ಹರಿದು ಹಾಕಿದ್ದಾರೆ ಎಂದು ವಿದ್ಯಾರ್ಥಿಯ ಸಹಪಾಠಿಗಳು ಆರೋಪಿಸಿದ್ದಾರೆ.

ಪುತ್ರ ಹರ್ಷ ಸಾವಿಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣ. ಹಾಸ್ಟೆಲ್‌ನಲ್ಲಿ ಊಟ, ನೀರಿನ ವ್ಯವಸ್ಥೆ ಸರಿಯಾಗಿಲ್ಲ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡುವುದೇ ತಪ್ಪಾ? ನನ್ನ ಬಳಿ ಮಾತನಾಡಬೇಕೆಂದು ಆಡಳಿತ ಮಂಡಳಿ ಕಾಲೇಜು ಬಳಿ ಕರೆಯಿಸಿಕೊಂಡು ಗೇಟ್‌ ಬಳಿಯೇ ನಿಲ್ಲಿಸಿದ್ದರು. ಒಳಗೆ ಪುತ್ರನನ್ನು ಕರೆದು ಆತನಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಮಹಡಿಯಿಂದ ಬಿದ್ದ ಮೇಲೂ ನನ್ನ ಗಮನಕ್ಕೆ ತರದೇ ಆಸ್ಪತ್ರೆಗೆ ಸಾಗಿಸಿ ರಕ್ತದ ಕಲೆಗಳನ್ನು ಸ್ವಚ್ಛ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

-ವಿಜಯಕುಮಾರ್‌, ಮೃತನ ತಂದೆ.