ಬೆಂಗಳೂರು[ಅ.11]:  ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ‘ಕರ್ನಾಟಕ ಪೌರ ನಿಗಮ ಕಾಯ್ದೆ-1976ರ ಸೆಕ್ಷನ್‌ 321 ಬಿ ಪ್ರಕಾರ ದಂಡ ಪ್ರಮಾಣ ನಿಗದಿಪಡಿಸಿ ಕರಡು ನಿಯಮ ರೂಪಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ  ಮಾಹಿತಿ ನೀಡಿತು.

ಪ್ರಕರಣ ಕುರಿತಂತೆ ವಕೀಲ ಎಸ್‌.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರಿ ವಕೀಲ ಅಚ್ಚಪ್ಪ ಈ ಮಾಹಿತಿ ನೀಡಿದರು. ಜತೆಗೆ, ‘ಕರ್ನಾಟಕ ಪೌರ ನಿಗಮಗಳು (ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಯಲು ವಿಫಲರಾದ ಅಧಿಕಾರಿಗಳಿಗೆ ದಂಡ ವಿಧಿಸುವ) ನಿಯಮಗಳು-2019’ರ ಕರಡು ಗೆಜೆಟ್‌ ಅಧಿಸೂಚನೆಯ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೈಕೋರ್ಟ್‌ ಆದೇಶದಂತೆ ಅ.3ರಂದು ಪರಿಷ್ಕೃತ ಕರಡು ನಿಯಮ ರೂಪಿಸಲಾಗಿದ್ದು, ಅ.4ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಕರಡು ನಿಯಮಗಳು ಬಿಬಿಎಂಪಿ ಸೇರಿದಂತೆ ಪಾಲಿಕೆಗಳಿಗೆ ಅನ್ವಯವಾಗಲಿದೆ. ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆ ಆಹ್ವಾನಿಸಲಾಗಿದೆ. ಅದಕ್ಕಾಗಿ 30 ದಿನ ಕಾಲಾವಕಾಶ ನೀಡಲಾಗಿದ್ದು, ನಂತರ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ನ.18ಕ್ಕೆ ಮುಂದೂಡಿತು.

ಕರಡು ನಿಯಮಗಳು

*ಕರ್ನಾಟಕ ಪೌರ ನಿಗಮ ಕಾಯ್ದೆ-1976ರ ಸೆಕ್ಷನ್‌ 321 ಬಿ ಪ್ರಕಾರ ಸಂಬಂಧಪಟ್ಟಅಧಿಕಾರಿ, ತನ್ನ ಅಧಿಕಾರಾವಧಿ ಮತ್ತು ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ವಿಫಲವಾದ ಬಗ್ಗೆ ದೂರು ಬಂದರೆ ಅಥವಾ ಆಯುಕ್ತರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಶೋಕಾಸ್‌ ನೋಟಿಸ್‌ ಜಾರಿಗೊಳಿಸಬಹುದು. ನಂತರ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು.

*ಮೊದಲ ಬಾರಿಗೆ ತಪ್ಪು ಎಸಗಿದರೆ 25 ಸಾವಿರ ರು.ಗೆ ಕಡಿಮೆ ಇಲ್ಲದಂತೆ ಮತ್ತು 50 ಸಾವಿರ ಮೀರದಂತೆ ದಂಡ ವಿಧಿಸಬಹುದು. ಎರಡನೇ ತಪ್ಪಿಗೆ .50 ಸಾವಿರಕ್ಕೆ ಕಡಿಮೆ ಇಲ್ಲದಂತೆ ಮತ್ತು 1 ಲಕ್ಷ ರು. ಮೀರದಂತೆ ದಂಡ ವಿಧಿಸಬಹುದು. ಮೂರನೇ ಮತ್ತು ಅದರ ನಂತರದ ಪ್ರತಿ ತಪ್ಪಿಗೆ ಆಯುಕ್ತರು ಪೌರ ನಿಗಮ ಕಾಯ್ದೆಯ ಸೆಕ್ಷನ್‌ 90ರಡಿ ಕ್ರಮ ಜರುಗಿಸಬಹುದು.

*ದಂಡ ಪಾವತಿಸಿದ ಅಧಿಕಾರಿಯು ನೀಡಿದ್ದ ಕಟ್ಟಡ ಯೋಜನಾ ಮಂಜೂರಾತಿಗೆ ಅನುಮೋದನೆ ನೀಡುವಂತಿಲ್ಲ.

*ಸಂತ್ರಸ್ತ ಅಥವಾ ಬಾಧಿತ ಅಧಿಕಾರಿಯು ಸಂಬಂಧಪಟ್ಟಪ್ರಾದೇಶಿಕ ಆಯುಕ್ತರಿಗೆ 30 ದಿನಗಳಲ್ಲಿ ಮನವಿ ಸಲ್ಲಿಸಬೇಕು. ಆ ಅಧಿಕಾರಿಗೆ ಶೋಕಾಸ್‌ ನೋಟಿಸ್‌ ನೀಡಿ ಅವರ ವಾದ ಕೇಳಿದ ನಂತರ 45 ದಿನಗಳಲ್ಲಿ ಮನವಿಯನ್ನು ಇತ್ಯರ್ಥಪಡಿಸಬೇಕು. ಪ್ರಾದೇಶಿಕ ಆಯುಕ್ತರ ತೀರ್ಮಾನವೇ ಅಂತಿಮ.