ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರು ಕೆಲಸ ಮುಗಿಸಿ ಪಿಜಿಗೆ ಮರಳುತ್ತಿದ್ದಾಗ ಕಿರುಕುಳಕ್ಕೊಳಗಾಗಿದ್ದಾರೆ. ಚಿಕ್ಕಬಾಣಾವರದಲ್ಲಿ ನಡೆದ ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೂರಿನ ಅನ್ವಯ ಸೋಲದೇವನಹಳ್ಳಿ ಪೊಲೀಸರು ಆರೋಪಿ ರಾಕೇಶ್‌ನನ್ನು ಬಂಧಿಸಿದ್ದಾರೆ.
ಬೆಂಗಳೂರು (ಜ.3): ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆಗೆ ಆಕೆ ವಾಸ ಮಾಡುತ್ತಿದ್ದ ಪಿಜಿ ಗೇಟ್ ಎದುರಲ್ಲೇ ಕಿರುಕುಳ ನೀಡಿದ ಆರೋಪದಲ್ಲಿ ಬೀದಿ ಕಾಮುಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸರಿಂದ ಬೀದಿ ಕಾಮುಕ ರಾಕೇಶ್ ಬಂಧನವಾಗಿದೆ. ಡಿಸೆಂಬರ್ 17 ರಂದು ಈ ಘಟನೆ ನಡೆದಿದ್ದು, ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ.
ಅಂದು ರಾತ್ರಿ 12.45ರ ಸುಮಾರಿಗೆ ಕೆಲಸ ಮುಗಿಸಿ ವೈದ್ಯೆ ಪಿಜಿಗೆ ತೆರಳುತ್ತಿದ್ದರು. ಈ ವೇಳೆ ಪಿಜಿ ಗೇಟ್ ಬಳಿ ಆಕೆಯ ಜೊತೆ ಅಸಭ್ಯ ವರ್ತನೆ ತೋರಲಾಗಿದೆ. ಚಿಕ್ಕಬಾಣಾವಾರದ ಎಜಿಬಿ ಲೇಔಟ್ ನಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ರಾಕೇಶ್ ಎಂಬಾತನಿಂದ ಕೃತ್ಯ ನಡೆದಿದೆ. ಹೆಸರಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಘಟನೆ ಆಗಿದ್ದು ಹೇಗೆ?
ಆಕೆ ಪಿಜಿ ಗೇಟ್‌ನ ಬಳಿ ಬಂದು ತಮ್ಮ ಬ್ಯಾಗ್‌ನಿಂದ ಗೇಟ್‌ನ ಲಾಕ್ ತೆಗೆಯಲು ಪ್ರಯತ್ನ ಮಾಡಿದ್ದರು. ಈ ವೇಳೆ ಆಕೆಯ ಬಳಿ ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ಬರುವ ರಾಕೇಶ್ ಮೊದಲಿಗೆ ಹತ್ತಿರ ಇರುವ ಬಸ್ ನಿಲ್ದಾಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹೆದರಿಕೆಯಲ್ಲೇ ವೈದ್ಯೆ ದಾರಿ ತೋರಿದ್ದಾಳೆ. ಬೈಕ್‌ಅನ್ನು ತಿರುಗಿಸಿ ಆ ಕಡೆ ಸಾಗುವ ರಾಕೇಶ್ ಒಂದು 10 ಮೀಟರ್ ದೂರದ ಬಳಿಕ ತಮ್ಮ ಬೈಕ್ ನಿಲ್ಲಿಸಿ ಆಕೆಯ ಬಳಿ ಬಂದು, ಮೈಕೈ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ. ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಬೀದಿ ಕಾಮುಕನ ನೀಚ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಕೇಶ್ ಬಂಧಿತ ಆರೋಪಿ
ಈ ಹಂತದಲ್ಲಿ ವೈದ್ಯೆ ಕಿರುಚಾಟ ಮಾಡಿದ್ದು, ಅದರ ಬೆನ್ನಲ್ಲಿಯೇ ಆಸಾಮಿ ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿಯಲ್ಲಿ ಗುರುತು ಪತ್ತೆ ಮಾಡಿದ ಬಳಿಕ ಆರೋಪಿ ರಾಕೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.


