ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ನೇತ್ರದಾನ ಶಿಬಿರದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು.
ಬೆಂಗಳೂರು : ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ನೇತ್ರದಾನ ಶಿಬಿರದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು.
ಗುರುವಾರ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ನೇತ್ರದಾನ ಶಿಬಿರದಲ್ಲಿ ಭಾಗವಹಿಸಿದ ಡಿ.ಕೆ.ಶಿವಕುಮಾರ್ ತಮ್ಮ ನೇತ್ರದಾನ ಪತ್ರಕ್ಕೆ ಸಹಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಜನ್ಮದಿನ ಅಂಗವಾಗಿ ‘ಯುವ ಕಾಂಗ್ರೆಸ್’ ವತಿಯಿಂದ ನೇತ್ರದಾನ ಶಿಬಿರ ಹಮ್ಮಿಕೊಂಡಿದ್ದಾರೆ. ನನ್ನ ನೇತ್ರ ದಾನ ಮಾಡಿದ್ದೇನೆ ಒಪ್ಪಿಗೆ ಪತ್ರ ನೀಡಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾವೇರಿ ಆರತಿಯಿಂದ ಸೃಷ್ಟಿಯಾಗುವ ಉದ್ಯೋಗ ಸೇರಿ ಆಗುವ ಪ್ರಯೋಜನಗಳ ಬಗ್ಗೆ ರೈತ ಸಂಘಗಳಿಗೆ ತಿಳಿವಳಿಕೆ ಇಲ್ಲ
ಕಾವೇರಿ ಆರತಿಯಿಂದ ಸೃಷ್ಟಿಯಾಗುವ ಉದ್ಯೋಗ ಸೇರಿ ಆಗುವ ಪ್ರಯೋಜನಗಳ ಬಗ್ಗೆ ರೈತ ಸಂಘಗಳಿಗೆ ತಿಳಿವಳಿಕೆ ಇಲ್ಲ. ಈ ಸಂಬಂಧ ಅವರ ಜೊತೆ ಮಾತನಾಡಲಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿ ಜಲಮಂಡಳಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಾವೇರಿ ಆರತಿಯನ್ನು ಗಂಗಾ ಆರತಿಗಿಂತ ಉತ್ತಮವಾಗಿ ಮಾಡಲಿದ್ದೇವೆ. ಕೊಡಗು, ಮಂಡ್ಯ, ತಮಿಳುನಾಡು, ಪುದುಚೆರಿಯ , ಕೇರಳದಿಂದಲೂ ಜನ ಬಂದು ನೋಡುವಂತೆ ಕಾರ್ಯಕ್ರಮ ಮಾಡಲಾಗುವುದು. ಅಲ್ಲಿ ನಡೆವ ಧಾರ್ಮಿಕ ಕಾರ್ಯಕ್ರಮ, ಲೈಟ್ ಶೋ ಸೇರಿ ಇತರೆ ಕಾರ್ಯಗಳಿಂದ ಸ್ಥಳೀಯ ಮಟ್ಟದಲ್ಲಿ 1500 ಉದ್ಯೋಗ ಸೃಷ್ಟಿಯಾಗಲಿದೆ. ಕಾವೇರಿ ಆರತಿ ಬಗ್ಗೆ ಅಲ್ಲಿನ ರೈತ ಸಂಘಗಳಿಗೆ ಅರಿವಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯರ ಜೊತೆ ನಾನೇ ಮಾತನಾಡಲಿದ್ದೇನೆ ಎಂದರು.
ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿಗೆ ವಿರೋಧ ಬೇಡ: ರಾಜ್ಯ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಧಾರ್ಮಿಕ ಕಾರ್ಯಕ್ರಮ ನಡೆಸಲುದ್ದೇಶಿಸಿರುವುದನ್ನು ವಿರೋಧಿಸುವುದು ಹಾಸ್ಯಾಸ್ಪದ ಎಂದು ಬಜರಂಗಸೇನ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ತಿಳಿಸಿದರು. ಕಾವೇರಿ ಆರತಿ ಧಾರ್ಮಿಕ ಕಾರ್ಯಕ್ರಮ ಪ್ರಾರಂಭ ಮಾಡುತ್ತಿರುವುದು ಸಂತೋಷದ ಸಂಗತಿ. ಜೀವನಾಡಿಯಾಗಿರುವ ಕಾವೇರಿ ಮಾತೆಗೆ ಕೃತಜ್ಞತೆ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಉತ್ತರ ಭಾರತದಲ್ಲಿ ಗಂಗಾರತಿಯಿಂದಾಗಿ ಅಲ್ಲಿನ ಸ್ಥಳೀಯ ಆಡಳಿತಕ್ಕೆ ವರ್ಷಕ್ಕೆ ೨೦೦ ಕೋಟಿಗೂ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿದೆ.
ಅದೇ ಮಾದರಿಯಲ್ಲಿ ಕಾವೇರಿ ಆರತಿಯನ್ನು ಆರಂಭಿಸಿದರೆ ಸರ್ಕಾರಕ್ಕೆ ಕೋಟ್ಯಂತ ರು. ಆದಾಯ ಹರಿದುಬರುವುದಲ್ಲದೆ ಪ್ರವಾಸೋದ್ಯಮ ಬೆಳವಣಿಗೆಗೂ ಉತ್ತೇಜನ ನೀಡಿದಂತಾಗುತ್ತದೆ ಎಂದರು. ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದಕ್ಕೆ ನಮ್ಮ ವಿರೋಧವೂ ಇದೆ. ಆ ಜಾಗವನ್ನು ಹೊರತುಪಡಿಸಿ ಶ್ರೀರಂಗಪಟ್ಟಣದ ಬೇರೆ ಯಾವುದಾದರೂ ಸ್ಥಳದಲ್ಲಿ ಕಾವೇರಿ ಆರತಿ ಮಾಡುವಂತೆ ಒತ್ತಾಯಿಸಿದರು. ಕಾವೇರಿ ಆರತಿ ಬೇಡ ಅದು ಬಿಟ್ಟು ಶಾಲೆಗಳನ್ನು ಅಭಿವೃದ್ಧಿಪಡಿಸಿ ಎಂದು ಕೆಲವರು ಹೇಳುತ್ತಿದ್ದಾರೆ. ಕಾವೇರಿ ಆರತಿ ಮಾಡುವುದು ಒಂದು ನಮ್ಮ ಸಂಸ್ಕೃತಿ, ಪರಂಪರೆಗೆ ನಾವು ನೀಡುವ ಗೌರವ ಮತ್ತು ಪ್ರವಾಸೋಧ್ಯಮ ಅಭಿವೃದ್ಧಿಗೆ ಇದು ಒಳ್ಳೆಯ ಯೋಜನೆಯಾಗಿದೆ.
