ಬೆಂಗಳೂರು/ ಕೆ.ಆರ್‌.ಪುರ (ಅ.18):  ಮನೆಯಲ್ಲಿದ್ದ ದಂಪತಿ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಮಹದೇವಪುರ ಸಮೀಪ ನಡೆದಿದೆ.

ಗರುಡಾಚಾರಪಾಳ್ಯದ ಆರ್‌ಎಚ್‌ಬಿ ಕಾಲೋನಿ ನಿವಾಸಿಗಳಾದ ಚಂದ್ರೇಗೌಡ (63) ಮತ್ತು ಪತ್ನಿ ಲಕ್ಷ್ಮಮ್ಮ (55) ಕೊಲೆಯಾದ ದುರ್ದೈವಿಗಳು. ವೃದ್ಧರ ಮನೆಗೆ ಬುಧವಾರ ರಾತ್ರಿ ಬಂದಿರುವ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮೃತರ ಮನೆಗೆ ಗುರುವಾರ ಬೆಳಗ್ಗೆ ಅವರ ಬಾಡಿಗೆದಾರ ಶಿವರಾಜ್‌ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯದಲ್ಲಿ ಮೃತರ ಪರಿಚಯಸ್ಥರು ಪಾಲ್ಗೊಂಡಿರುವ ಬಗ್ಗೆ ಆಯುಕ್ತ ಭಾಸ್ಕರ್‌ ರಾವ್‌ ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಗೆ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತ ಚಂದ್ರೇಗೌಡ ಅವರು ಕೆ.ಆರ್‌.ಪೇಟೆ ತಾಲೂಕಿನವರಾಗಿದ್ದು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಖಾಸಗಿ ಕಂಪನಿ ಉದ್ಯೋಗದಲ್ಲಿದ್ದ ಅವರು, ಮೂರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. 17 ವರ್ಷಗಳ ಹಿಂದೆ ಗರುಡಾಚಾರಪಾಳ್ಯದ ಆರ್‌ಎಚ್‌ಬಿ ಕಾಲೋನಿಯಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದರು. ಇದರಲ್ಲಿ ಅಂಗಡಿ ಮತ್ತು ಮೂರು ಮನೆಗಳನ್ನು ಬಾಡಿಗೆ ನೀಡಿದ್ದ ಅವರು, ಅದೇ ಕಟ್ಟಡದ ಮತ್ತೊಂದು ಮನೆಯಲ್ಲಿ ಪತ್ನಿ ಜತೆ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರೇಗೌಡ ಅವರ ಮನೆಗೆ ಬುಧವಾರ ರಾತ್ರಿ ಆರೋಪಿಗಳು ಬಂದಿದ್ದಾರೆ. ಆಗ ಕೆಲ ಹೊತ್ತು ವೃದ್ಧ ದಂಪತಿ ಜತೆ ಕುಶಲೋಪರಿ ನಡೆಸಿ, ಬಳಿಕ ನಡುಮನೆಯಲ್ಲಿ ಚಂದ್ರೇಗೌಡರ ತಲೆ ಮತ್ತು ಹೊಟ್ಟೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಂದಿದ್ದಾರೆ. ಬಳಿಕ ಬೆಡ್‌ ರೂಮ್‌ನಲ್ಲಿದ್ದ ಲಕ್ಷ್ಮಮ್ಮರನ್ನು ಹತ್ಯೆಗೈದ ಆರೋಪಿಗಳು, ಬಳಿಕ ಹೊರಗಿನಿಂದ ಮುಂಬಾಗಿಲಿಗೆ ಚೀಲ ಹಾಕಿಕೊಂಡು ಕಾಲ್ಕಿತ್ತಿದ್ದಾರೆ.

ಸಂಪ್‌ ನೀರು ತುಂಬಿ ಹರಿಯುತ್ತಿರುವುದರಿಂದ ಬಾಡಿಗೆದಾರ ಶಿವರಾಜ್‌ ಅವರು, ಬೆಳಗ್ಗೆ ಮನೆ ಮಾಲಿಕರಿಗೆ ತಿಳಿಸಲು ಬಂದಿದ್ದಾರೆ. ಆದರೆ ಬಾಗಿಲು ಬಡಿದರೂ ಮಾಲಿಕರು ಪ್ರತಿಕ್ರಿಯಿಸಿಲ್ಲ. ಕಿಟಕಿಯಲ್ಲಿ ಇಣುಕಿದಾಗ ಪ್ರಜ್ಞಾಹೀನರಾಗಿ ಚಂದ್ರೇಗೌಡ ಬಿದ್ದಿರುವುದು ಕಂಡು ಬಂದಿದೆ. ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು, ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ರಕ್ತದ ಮಡುವಿನಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿಗಾಗಿ ಪರಿಚಯಸ್ಥರಿಂದಲೇ ಹತ್ಯೆ?

ಚಂದ್ರೇಗೌಡ ದಂಪತಿಗೆ ಮಕ್ಕಳಿರಲ್ಲಿಲ್ಲ. ಹೀಗಾಗಿ ದತ್ತು ಪಡೆದು ಹೆಣ್ಣು ಮಗಳನ್ನು ಸಾಕಿದ್ದ ಅವರು, ಮೂರು ವರ್ಷಗಳ ಹಿಂದೆ ಕೆ.ಆರ್‌.ಪೇಟೆ ತಾಲೂಕಿನ ಸಂಬಂಧಿಕರ ಪುತ್ರನೊಂದಿಗೆ ಮದುವೆ ಮಾಡಿದ್ದರು. ಇದಾದ ಬಳಿಕ ದಂಪತಿ ಮಾತ್ರ ಮನೆಯಲ್ಲಿ ನೆಲೆಸಿದ್ದರು.

ಚಾಮರಾಜನಗರ ತಾಲೂಕಿನಲ್ಲಿ ಜಮೀನು ಹಾಗೂ ಗರುಡಾಚಾರಪಾಳ್ಯದಲ್ಲಿ ಮೂರು ಅಂತಸ್ತಿನ ಹೊಂದಿದ್ದರು. ಈ ಆಸ್ತಿ ಕಬಳಿಕೆಗೆ ಅವರ ಕೆಲವು ಸಂಬಂಧಿಕರು ಹಾಗೂ ಪರಿಚಯಸ್ಥರು ಹೊಂಚು ಹಾಕಿದ್ದರು ಎಂದು ತಿಳಿದು ಬಂದಿದೆ. ಈ ಹತ್ಯೆ ಬಳಿಕ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿಲ್ಲ. ಆದರೆ ಕಬೋರ್ಡ್‌ನಲ್ಲಿ ಯಾವುದೋ ದಾಖಲೆಗಳಿಗೆ ಹುಡುಕಾಡಿರುವುದು ಕಂಡು ಬಂದಿದೆ. ಅಲ್ಲದೆ, ಬುಧವಾರ ರಾತ್ರಿ ಮನೆಗೆ ಬಂದಿರುವ ಅತಿಥಿಗಳಿಗೆ ಅವರು ಸಿಹಿ ಊಟದೊಂದಿಗೆ ಸತ್ಕರಿಸಿದ್ದಾರೆ. ಹಾಗೆಯೇ ನೆರೆಹೊರೆಯವರಿಗೆ ಸಹ ರಾತ್ರಿ ಮನೆಗೆ ನೆಂಟರು ಬಂದಿದ್ದಾರೆ ಎಂದು ಲಕ್ಷ್ಮಮ್ಮ ಹೇಳಿಕೊಂಡಿದ್ದರು. ಈ ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳನ್ನು ಅವಲೋಕಿಸಿದಾಗ ಆಸ್ತಿಗಾಗಿ ಪರಿಚಿತರೇ ಸಂಚು ರೂಪಿಸಿ ಹತ್ಯೆಗೈದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಚಂದ್ರೇಗೌಡರ ಮನೆಯ ದೇವರ ಪೂಜಾ ಗೃಹದಲ್ಲಿ ಹಾಗೂ ಲಕ್ಷ್ಮಮ್ಮ ಧರಿಸಿದ್ದ ಒಡವೆಗಳು ಹಾಗೇ ಇದ್ದವು. ಹತ್ಯೆಗೆ ನಿರ್ದಿಷ್ಟವಾಗಿ ಕಾರಣ ಗೊತ್ತಾಗಿಲ್ಲ. ಆಸ್ತಿ ಅಥವಾ ಹಣ ಸೇರಿದಂತೆ ಎಲ್ಲಾ ಆಯಾಮದಿಂದ ತನಿಖೆ ನಡೆದಿದೆ.

-ಎಂ.ಎನ್‌.ಅನುಚೇತ್‌, ಡಿಸಿಪಿ, ವೈಟ್‌ಫೀಲ್ಡ್‌ ವಿಭಾಗ.