ಬೆಂಗಳೂರು [ಅ.12]:  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅವರ ಸಹಿ ಬಳಸಿ ವರ್ಗಾವಣೆ ಕೋರಿದ್ದ ಅಧಿಕಾರಿ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ಶುಕ್ರವಾರ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.

ಅಧಿಕಾರಿ ಚಂದ್ರಕಾಂತ್‌ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯಲ್ಲಿ ಪ್ರಸ್ತುತ ಸಹಾಯಕ ಕಾರ್ಯದರ್ಶಿಯಾಗಿದ್ದಾರೆ. ಚಂದ್ರಕಾಂತ್‌ ಅವರ ವರ್ಗಾವಣೆಗಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ಅವರ ಹೆಸರಿನ ಲೆಟರ್‌ಹೆಡ್‌ ಬಳಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಚಂದ್ರಕಾಂತ್‌ ಅವರು ವಯೋವೃದ್ಧ ತಂದೆ-ತಾಯಿ ಆರೋಗ್ಯದ ಕಡೆ ಗಮನಿಸಬೇಕಾದ ಕಾರಣ ಇವರನ್ನು ಬೆಂಗಳೂರು ನಗರದ ಜಿಲ್ಲಾ ಪಂಚಾಯತಿಯಲ್ಲಿ ಸಹಾಯಕ ಯೋಜನಾ ಅಧಿಕಾರಿ-1 ಆಗಿ ಕಾರ್ಯನಿರ್ವಹಿಸುತ್ತಿರುವ ವಿಠ್ಠಲ್‌ ಕಾವಳೆ ಅವರ ಜಾಗಕ್ಕೆ ವರ್ಗಾವಣೆ ಮಾಡಬೇಕು. ಚಂದ್ರಕಾಂತ್‌ ಅವರ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ವರ್ಗಾವಣೆ ಮಾಡಬೇಕೆಂದು ವಿಶ್ವನಾಥ್‌ ಅವರಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ.

ಅಲ್ಲದೆ, ವಿಶ್ವನಾಥ್‌ ಅವರ ನಕಲಿ ಸಹಿಯನ್ನು ಹಾಕಲಾಗಿದೆ. ಈ ವರ್ಗಾವಣೆ ಕೋರಿರುವ ಪತ್ರ ಮುಖ್ಯಮಂತ್ರಿಗಳ ಕಚೇರಿ ತಲುಪಿದ್ದು, ಅನುಮಾನಗೊಂಡು ಈ ಬಗ್ಗೆ ಪ್ರಶ್ನೆ ಮಾಡಿದಾಗ ನಕಲಿ ಸಹಿ ಹಾಕಿ ವರ್ಗಾವಣೆ ಕೋರಿರುವುದು ಬೆಳಕಿಗೆ ಬಂದಿದೆ. ಚಂದ್ರಕಾಂತ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿಲ್ಲ. ಅವರೇ ಈ ರೀತಿ ಮಾಡಿದ್ದಾರೋ? ಬೇರೆ ಅವರು ಇವರ ಹೆಸರಿನಲ್ಲಿ ಮಾಡಿದ್ದಾರೆಯೇ ಎಂಬುದು ತನಿಖೆಯಿಂದ ಬೆಳಕಿಗೆ ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.