ಅಕ್ರಮ ನಡೆಸಿತ್ತಾ ಕಾನ್ಫಿಡೆಂಟ್ ಗ್ರೂಪ್? ಸಿಜೆ ರಾಯ್ ಸಾವಿನಿಂದ ಮೃತ ಅಧಿಕಾರಿ ಡಿಕೆ ರವಿ ಹೇಳಿಕೆ ವೈರಲ್ ಆಗುತ್ತಿದೆ. ಕಾನ್ಫಿಡೆಂಟ್ ಗ್ರೂಪ್ ಅಕ್ರಮ ಪತ್ತೆ ಹಚ್ಚಿದ ಕಾರಣಕ್ಕೆ ದಕ್ಷ ಅಧಿಕಾರಿ ವರ್ಗಾವಣೆ ಶಿಕ್ಷೆಗೆ ಒಳಗಾಗಿದ್ರಾ?

ಬೆಂಗಳೂರು (ಜ.31) ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ ದುರಂತ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದೆ. ಇತ್ತ ಸಿಜೆ ರಾಯ್ ಸಾವಿನ ಸುತ್ತ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಜೆ ರಾಯ್ ಸಾಮಾಜಿಕ ಕಾರ್ಯಗಳು, ಮನೋರಂಜನಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಇದೇ ವೇಳೆ ಕರ್ನಾಟಕ ಕಂಡ ಅತ್ಯಂತ ದಕ್ಷ ಅಧಿಕಾರಿಗಳಲ್ಲೊಬ್ಬರಾದ ಮೃತ ಐಎಎಸ್ ಅಧಿಕಾರಿ ಡಿಕೆ ರವಿ ಹೇಳಿಕೆ, ಹಳೇ ಪ್ರಕರಣವೊಂದು ಮತ್ತೆ ಮುನ್ನಲೆಗೆ ಬಂದಿದೆ. ಸಿಜೆ ರಾಯ್ ದುರಂತ ಸಾವಿನ ಬೆನ್ನಲ್ಲೇ ಮೃತ ಅಧಿಕಾರಿ ಡಿಕೆ ರವಿ ಪತ್ತೆ ಹಚ್ಚಿದ ಹಳೇ ಕೇಸ್ ಒಂದು ಭಾರಿ ಸದ್ದು ಮಾಡುತ್ತಿದೆ.

ಏನಿದು ಪ್ರಕರಣ?

ಸಿಜೆ ರಾಯ್ ಅವರ ಕಾನ್ಫಿಡೆಂಟ್ ಗ್ರೂಪ್ ನಡೆಸಿದೆ ಎನ್ನಲಾದ ಅಕ್ರಮವನ್ನು ಅಂದು ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಡಿಕೆ ರವಿ ಪತ್ತೆ ಹಚ್ಚಿದ್ದರು. ಈ ಕುರಿತು ಸ್ವತಃ ಡಿಕೆ ರವಿ ಅವರೇ ಅಕ್ರಮದ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಕೋಲಾರದಲ್ಲಿ ಕಾನ್ಫಿಡೆಂಟ್ ಗ್ರೂಪ್ ಗಾಲ್ಫ್ ಹಾಗೂ ವಿಲ್ಲಾ ಮಾಡಲು ಭಾರಿ ಪ್ರಮಾಣದಲ್ಲಿ ಭೂಮಿ ಖರೀದಿ ಹಾಗೂ ಒತ್ತುವರಿ ಮಾಡಿಕೊಂಡಿತ್ತು. ಇದರಲ್ಲಿ ಸರ್ಕಾರದ 40ಕ್ಕೂ ಹೆಚ್ಚು ಏಕರೆ ಪ್ರದೇಶವನ್ನು ಕಾನ್ಫಿಡೆಂಟ್ ಗ್ರೂಪ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ. ನಕಲಿ ದಾಖಲೆ ಸೃಷ್ಟಿಸಿ, ಹಲವು ಅಧಿಕಾರಿಗಳ, ರಾಜಕಾರಣಿಗಳು, ಶಾಸಕರ ನೆರವಿನಿಂದ ಈ ಅಕ್ರಮ ನಡೆದಿದೆ ಎಂದು ಸ್ವತಃ ಡಿಕೆ ರವಿ ಅವರೇ ದಾಖಲೆ ಸಮೇತ ಬಿಡುಗಡೆ ಮಾಡಿದ್ದರು. 2013-14ರಲ್ಲಿ ನಡೆದ ಈ ಪ್ರಕರಣ ಇದೀಗ ಸಿಜೆ ರಾಯ್ ಸಾವಿನಿಂದ ಮತ್ತೆ ಮುನ್ನಲೆಗೆ ಬಂದಿದೆ.

ಕೋಲಾರದ ಬಂಗಾರಪೇಟೆ ಸಮೀಪ ಕಾನ್ಫಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಬಂಡವಾಳ ಹೂಡಿಕೆ ಮಾಡಿತ್ತು. ಆದರೆ ಈ ಹೂಡಿಕೆಯಲ್ಲಿ ಸಕ್ರಮಕ್ಕಿಂತ ಅಕ್ರಮವೇ ಹೆಚ್ಚಾಗಿತ್ತು ಅನ್ನೋದು ಅಂದಿನ ಜಿಲ್ಲಾಧಿಕಾರಿ ಡಿಕೆ ರವಿ ಹೇಳಿದ್ದರು. ಇದಕ್ಕೆ ಪೂರಕ ದಾಖಲೆಯನ್ನು ಬಹಿರಂಗಪಡಿಸಿದ್ದರು. 150 ಎಕರೆ ಪ್ರದೇಶದಲ್ಲಿ ಕಾನ್ಫಿಡೆಂಟ್ ಗ್ರೂಪ್ ವಿಶಾಲವಾದ ಗಾಲ್ಫ್ ಕೋರ್ಟ್, ಅತ್ಯಂತ ಐಷಾರಾಮಿ ವಿಲ್ಲಾಗಳನ್ನು ನಿರ್ಮಾಣ ಮಾಡಿತ್ತು. ಆದರೆ ಈ 150 ಏಕರೆಯಲ್ಲಿ 40ಕ್ಕೂ ಹೆಚ್ಚು ಏಕರೆ ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಡಿಕೆ ರವಿ ಆರೋಪಿಸಿದ್ದರು. ಇದಕ್ಕೆ ಭೂ, ಕಂದಾಯ, ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಅಂದಿನ ಸ್ಥಳೀಯ ಶಾಸಕರು ಸಾಥ್ ನೀಡಿದ್ದಾರೆ ಎಂಬ ಸ್ಫೋಟಕ ಆರೋಪವನ್ನು ಡಿಕೆ ರವಿ ಮಾಡಿದ್ದರು.

ಅಕ್ರಮ ಪತ್ತೆ ಹಚ್ಚಿದ ಡಿಕೆ ರವಿಗೆ ವರ್ಗಾವಣೆ ಶಿಕ್ಷೆ

ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಿಕೆ ರವಿ, ಕಾನ್ಫಿಡೆಂಟ್ ಗ್ರೂಪ್ ನಡೆಸಿದೆ ಎನ್ನಲಾದ ಅಕ್ರವನ್ನು ಬಯಲಿಗೆಳೆದಿದ್ದರು. ದುರಂತ ಅಂದರೆ ಈ ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕರಲ್ಲಿ ಅಂದಿನ ಕೋಲಾರದ ಸ್ಥಳೀಯ ಶಾಸಕರು ಸದಸ್ಯರಾಗಿದ್ದರು. ಹೀಗಾಗಿ ಡಿಕೆ ರವಿಗೆ ಶಾಸಕರು ಧಮ್ಕಿ ಹಾಕಿದ್ದರು ಎಂದು ವರದಿಯಾಗಿದೆ. ಕಾನ್ಫಿಡೆಂಟ್ ಗ್ರೂಪ್ ಅಕ್ರಮ ಬಯಲಿಗೆಳೆದ ಬೆನ್ನಲ್ಲೇ ಡಿಕೆ ರವಿ ಕೋಲಾರದಿಂದ ವರ್ಗಾವಣೆಗೊಂಡಿದ್ದರು. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿತ್ತು ಅನ್ನೋ ಆರೋಪ ಬಲವಾಗಿ ಕೇಳಿಬಂದಿತ್ತು.

ಸಿಜೆ ರಾಯ್ ಕಾನ್ಫಿಡೆಂಟ್ ಗ್ರೂಪ್ ಮೇಲೆ ಗಂಭೀರ ಆರೋಪ

ಕಾನ್ಫಿಡೆಂಟ್ ಗ್ರೂಪ್ ಬೆಂಗಳೂರು, ಕೋಲಾರ ಸೇರಿದಂತೆ ಹಲೆವೆಡೆ ವಿಸ್ತಾರಗೊಳ್ಳುತ್ತಿದ್ದಂತೆ ಗಂಭೀರ ಆರೋಪಗಳು ಕೇಳಿಬಂದಿತ್ತು. ಭೂ ಕಬಳಿಕೆ, ಅಕ್ರಮ ಒತ್ತುವರಿ ಆರೋಪಗಳು ಕೇಳಿಬಂದಿತ್ತು. ಡಿಕೆ ರವಿ ಕಾನ್ಫಿಡೆಂಟ್ ಗ್ರೂಪ್ ವಿರುದ್ದ ತೊಡೆ ತಟ್ಟಿ ನಿಂತಿದ್ದರು. ದುರಂತ ಅಂದರೆ ಹಲವು ಒತ್ತಡ, ಕಿರುಕುಳದಿಂದ ಡಿಕೆ ರವಿ ದುರಂತ ಅಂತ್ಯಕಂಡಿದ್ದರು. ಇದೀಗ ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ ಎದೆಗೆ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿದ್ದಾರೆ. ಪ್ರಕರಣದ ತನಿಖೆಗೆ ಎಸ್‌ಐಟಿ ಇಳಿದಿದೆ. ಹೀಗಾಗಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗುವ ಸಾಧ್ಯತೆ ಇದೆ.

Scroll to load tweet…