ಬೆಂಗಳೂರು(ಅ.29): ಸಕಾಲ ಯೋಜನೆಯಡಿ ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಸಂಬಂಧ ಸೆಪ್ಟೆಂಬರ್‌ ತಿಂಗಳಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಜಿಲ್ಲೆಗೆ ಕೊನೆಯ ಸ್ಥಾನ ಲಭಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಧಾನಸೌಧದಲ್ಲಿ ಸೋಮವಾರ ನಡೆದ ಸಕಾಲ ಸೇವೆಗಳ ಸೆಪ್ಟೆಂಬರ್‌ ತಿಂಗಳ ರಾಜ್ಯ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಕಾಲ ಯೋಜನೆಯಲ್ಲಿ ಕಳೆದ 7 ವರ್ಷದಲ್ಲಿ 20 ಕೋಟಿಗೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. 2012ರ ಏಪ್ರಿಲ್‌ 2 ರಂದು 11 ಇಲಾಖೆಗಳ 151 ಸೇವೆಗಳನ್ನು ರಾಜ್ಯಾದ್ಯಂತ ಸಕಾಲ ಯೋಜನೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದೀಗ 91 ಇಲಾಖೆಯ 1033 ಸೇವೆಗಳನ್ನು ಸಕಾಲ ಯೋಜನೆಯಡಿ ನೀಡಲಾಗುತ್ತಿದೆ. ಪಾರದರ್ಶಕವಾಗಿ ನಡೆಯುತ್ತಿರುವ ಈ ಸೇವೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ದೇಶಾದ್ಯಂತ ಈ ಸೇವೆಯನ್ನು ಅನುಷ್ಠಾನ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.