ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಸಾಲಗಾರ ಲೀಗಲ್‌ ನೋಟಿಸ್‌ ಸ್ವೀಕರಿಸಿದ 15 ದಿನದ ಒಳಗೆ ಸಾಲ ನೀಡಿದಾತ ದಾಖಲಿಸಿದ ದೂರಿಗೆ ಮಾನ್ಯತೆ ಇರುವುದಿಲ್ಲ

ವೆಂಕಟೇಶ್‌ ಕಲಿಪಿ

 ಬೆಂಗಳೂರು : ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಸಾಲಗಾರ ಲೀಗಲ್‌ ನೋಟಿಸ್‌ ಸ್ವೀಕರಿಸಿದ 15 ದಿನದ ಒಳಗೆ ಸಾಲ ನೀಡಿದಾತ ದಾಖಲಿಸಿದ ದೂರಿಗೆ ಮಾನ್ಯತೆ ಇರುವುದಿಲ್ಲ. 15 ದಿನ ಮುಗಿದ ನಂತರದ ಒಂದು ತಿಂಗಳಲ್ಲಿ ಚೆಕ್‌ ಬೌನ್ಸ್‌ ಅಪರಾಧ ಕುರಿತು ಸಾಲ ನೀಡಿದವರು ದೂರು ದಾಖಲಿಸಲು ಅವಕಾಶವಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದ ಮೇಲೆ ಲೀಗಲ್‌ ನೋಟಿಸ್‌ ಸ್ವೀಕರಿಸಿದ 15 ದಿನಗಳ ಒಳಗೆ ಸಾಲ ನೀಡಿದಾತ ದೂರು ದಾಖಲಿಸಿರುವುದನ್ನು ಗಮನಿಸಿದ ಹೈಕೋರ್ಟ್‌, ಹೊಸದಾಗಿ ದೂರು ದಾಖಲಿಸಲು ದೂರುದಾರನಿಗೆ ಅವಕಾಶ ಕಲ್ಪಿಸಿದೆ. ಜತೆಗೆ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ ಆದೇಶ ಹೊರಡಿಸಿದೆ.

ಚೆಕ್ ಪಡೆದವರು ಅಕಾಲಿಕ (15 ದಿನಗಳು ಮುಗಿಯುವ ಮುನ್ನವೇ) ದೂರು ದಾಖಲಿಸಿದ್ದಾರೆ ಎಂಬ ತಾಂತ್ರಿಕ ಕಾರಣದಿಂದ ಸಾಲಗಾರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಚೆಕ್‌ ನೀಡಿದವರು ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ದಂಡನಾ ಕ್ರಮದಿಂದ ಮುಕ್ತರಾಗುವುದಿಲ್ಲ. ಸಾಲ ನೀಡಿದವರು ಎರಡನೇ ಬಾರಿ ದಾಖಲಿಸುವ ದೂರಿನ ವಿಚಾರಣೆಯನ್ನು ಸಾಲಗಾರ ಎದುರಿಸಲೇಬೇಕು ಎಂದು ಸ್ಪಷ್ಟಪಡಿಸಿ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರ ಪೀಠ ಆದೇಶಿಸಿದೆ.

ಪ್ರಕರಣದ ವಿವರ:

ಬೆಂಗಳೂರಿನ ಹೊಂಗಸಂದ್ರ ನಿವಾಸಿ ಆರ್ಮುಗಂ (38) ವ್ಯಾಪಾರಕ್ಕೆಂದು ದೊಡ್ಡತೋಗೂರು ನಿವಾಸಿ ಆನಂದ್‌ ಎಂಬುವರಿಂದ ಒಂದು ಲಕ್ಷ ರು ಸಾಲ ಪಡೆದಿದ್ದರು. 2015ರ ಡಿ.10ರಂದು ಹಣ ಹಿಂದಿರುಗಿಸುವುದಾಗಿ ಖಾತರಿ ನೀಡಿ ಚೆಕ್‌ ನೀಡಿದ್ದರು. ಚೆಕ್‌ ಅನ್ನು ಬ್ಯಾಂಕಿ ಹಾಕಿದಾಗ ಬೌನ್ಸ್‌ ಆಗಿತ್ತು. ಇದರಿಂದ 2016ರ ಜ.13ರಂದು ಆನಂದ್‌, ನಗರದ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ನೆಗೋಷಿಯೆಬಲ್‌ ಇನ್‌ಸ್ಟ್ರುಮೆಂಟ್ಸ್‌ ಆಕ್ಟ್‌-1881ರ (ಎನ್‌ಐ ಆಕ್ಟ್‌) ಸೆಕ್ಷನ್‌ 138 ಪ್ರಕಾರ ಚೆಕ್‌ಬೌನ್ಸ್‌ ಅಪರಾಧಡಿ ಆರ್ಮುಗಂ ಅನ್ನು ದೋಷಿಯಾಗಿ ನ್ಯಾಯಾಲಯ ತೀರ್ಮಾನಿಸಿತ್ತು. ಜೊತೆಗೆ, 1.75 ಲಕ್ಷ ರು. ಪಾವತಿಸಬೇಕು ಅಥವಾ 6 ತಿಂಗಳು ಸಾಧಾರಣ ಜೈಲು ಅನುಭವಿಸಬೇಕು ಎಂದು ಆರೋಪಿಗೆ ನಿರ್ದೇಶಿಸಿ 2017ರ ಏ.3ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿದ್ದ ಮೇಲ್ಮನವಿಯನ್ನು ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿದ್ದರಿಂದ ಆರ್ಮುಗಂ ಹೈಕೋರ್ಟ್‌ಗೆ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಚೆಕ್‌ ಬೌನ್ಸ್‌ ಆದ ನಂತರ 2016ರ ಡಿ.30ರಂದು ಆರ್ಮುಗಂ ಅವರಿಗೆ ಲೀಗಲ್‌ ನೋಟಿಸ್‌ ನೀಡಿದ್ದ ಆನಂದ್‌ 15 ದಿನಗಳಲ್ಲಿ ಹಣ ಪಾವತಿಸಲು ಸೂಚಿಸಿದ್ದರು. ಆರ್ಮುಗಂ 2016ರ ಜ.1ರಂದು ನೋಟಿಸ್‌ ಸ್ವೀಕರಿಸಿದ್ದರು. ಜ.13ರಂದು ಆನಂದ್‌ ಚೆಕ್‌ ಬೌನ್ಸ್‌ ದೂರು ದಾಖಲಿಸಿದ್ದರು. ಎನ್‌ಐ ಕಾಯ್ದೆ ಸೆಕ್ಷನ್‌ 138(ಸಿ) ಅನ್ವಯ ಲೀಗಲ್‌ ನೋಟಿಸ್‌ ಸ್ವೀಕರಿಸಿದ ನಂತರದ 15 ದಿನಗಳ ಒಳಗೆ ಚೆಕ್‌ ಮೊತ್ತ ಪಾವತಿಸದಿದ್ದರೆ, ನಂತರದ ಒಂದು ತಿಂಗಳಲ್ಲಿ ಲಿಖಿತವಾಗಿ ದೂರು ದಾಖಲಿಸಬೇಕು. ಆಧರೆ, ಲೀಗಲ್‌ ನೋಟಿಸ್‌ ಸ್ವೀಕರಿಸಿದ ನಂತರದ 15 ದಿನಗಳ ಮುನ್ನವೇ ಎನ್‌ಐ ಕಾಯ್ದೆ ಸೆಕ್ಷನ್‌ 138 ಅಡಿ ಚೆಕ್‌ ಬೌನ್ಸ್‌ ದೂರು ದಾಖಲಿಸಿದರೆ, ಅದು ಮಾನ್ಯವಾಗುವುದಿಲ್ಲ. ಅಂತಹ ದೂರು ರದ್ದುಪಡಿಸಲು ಅರ್ಹವಾಗಿರುತ್ತದೆ ಎಂದು ಪೀಠ ಆದೇಶಿಸಿದೆ.

ಇದೇ ಕಾರಣ ಮುಂದಿಟ್ಟು ದೂರು ರದ್ದುಪಡಿಸಿ ನ್ಯಾಯಾಲಯ ಆದೇಶ ಹೊರಡಿಸಿದ ದಿನದಿಂದ ಒಂದು ತಿಂಗಳೊಳಗೆ ಚೆಕ್‌ ಪಡೆದವರು ಹೊಸದಾಗಿ ದೂರು ಸಲ್ಲಿಸಬಹುದು. ಹೊಸ ದೂರು ದಾಖಲಿಸುವಲ್ಲಿ ಆದ ವಿಳಂಬವನ್ನು ಎನ್‌ಐ ಕಾಯ್ದೆಯ ಸೆಕ್ಷನ್ 142 (b) ಅನ್ವಯ ಮನ್ನಿಸಬಹುದು. ಸಾಲ ನೀಡಿದವರು ಸತತ ಎರಡನೇ ದೂರು ಸಲ್ಲಿಸಿದರೆ, ಆಗ ಚೆಕ್‌ ನೀಡಿದ (ಆರೋಪಿ)ವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ, ಚೆಕ್‌ ನೀಡಿದವರು ದಂಡನಾ ಕ್ರಮದಿಂದ ಮುಕ್ತರಾಗುವುದಿಲ್ಲ ಎಂದು ತಿಳಿಸಿದ ಕೋರ್ಟ್‌, 19ನೇ ಎಸಿಎಂಎಂ ನ್ಯಾಯಾಲಯದ ಆದೇಶವನ್ನು ತಿದ್ದುಪಡಿಮಾಡಿತು. ದೂರುದಾರರು ಹೊಸದಾಗಿ ಒಂದು ತಿಂಗಳಲ್ಲಿ ದೂರು ಸಲ್ಲಿಸಬಹುದು. ಹೊಸದಾಗಿ ದೂರು ದಾಖಲಿಸಿದರೆ ಆ ಕುರಿತು ಆರೋಪಿಯ ವಾದ ಆಲಿಸಿ ಆರು ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.