ಬೆಂಗಳೂರು [ಅ.12]:  ಇತ್ತೀಚೆಗೆ ತಮಿಳುನಾಡಿನಲ್ಲಿ ಸಾಕು ಪ್ರಾಣಿಗಳ ಮುಖವಾಡ ಧರಿಸಿ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಮಳಿಗೆಯೊಂದರ ಖಜಾನೆಗೆ ಕನ್ನ ಹಾಕಿ 12.5 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿದ್ದ ಕುಖ್ಯಾತ ಖದೀಮ ಬೆಂಗಳೂರಿನ ನ್ಯಾಯಾಲಯಕ್ಕೆ ಶುಕ್ರವಾರ ಶರಣಾಗಿದ್ದಾನೆ.

ತಮಿಳುನಾಡು ಮೂಲದ ಮುರುಗನ್‌ (45) ಶರಣಾದವ. ಅ.2ರಂದು ತಿರುಚಿರಪಲ್ಲಿಯ ಲಿಲಿತಾ ಜ್ಯುವೆಲ​ರ್‍ಸ್ಗೆ ಮುರುಗನ ತಂಡ ಕನ್ನ ಹಾಕಿತ್ತು. ಅಂದು 30 ಕೆ.ಜಿ. ಚಿನ್ನ, ವಜ್ರ ಸೇರಿದಂತೆ ಒಟ್ಟು .12.55 ಕೋಟಿ ಮೌಲ್ಯದ ಬಂಗಾರ ಕದ್ದು ಆರೋಪಿಗಳು ಪರಾರಿಯಾಗಿದ್ದರು. ಆ ರಾಜ್ಯದ ಪೊಲೀಸರು ಮುರುಗನ ಭೇಟಿಗೆ ವಿಶೇಷ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು. ಇದರಿಂದ ಬೆದರಿದ ಆತ, ನಗರದ 11ನೇ ಎಸಿಎಂಎಂ ಕೋರ್ಟ್‌ಗೆ ತನ್ನ ವಕೀಲರ ಜೊತೆಯಲ್ಲಿ ಬಂದು ಶರಣಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಳಿಕ ನ್ಯಾಯಾಲಯವು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪಿಸಿತು. ಈಗ ಆತನನ್ನು ವಶಕ್ಕೆ ಪಡೆಯಲು ರಾಜ್ಯ ಹಾಗೂ ಹೊರ ರಾಜ್ಯಗಳ ಪೊಲೀಸರು ಪೈಪೋಟಿ ನಡೆಸುತ್ತಿದ್ದು, ಈಗಾಗಲೇ ಕಳ್ಳತನ ಪ್ರಕರಣದಲ್ಲಿ ಮುರುಗನ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಮನವಿ ಸಲ್ಲಿಸಿದ್ದಾರೆ.

ಕಳ್ಳತನಕ್ಕೆ ಮುರುಗನ್‌ ಕುಖ್ಯಾತಿ:

ಕಳ್ಳತನ ಕೃತ್ಯಗಳಿಂದ ಕುಖ್ಯಾತಿ ಪಡೆದಿರುವ ಮುರುಗನ್‌, ಅ.2ರಂದು ತಿರುಚಿರಪಲ್ಲಿಯ ಸುಪ್ರಸಿದ್ಧ ಲಲಿತಾ ಜ್ಯುವೆಲ​ರ್‍ಸ್ ಮಳಿಗೆಗೆ ಕನ್ನ ಹಾಕಿದ್ದ. ಅಲ್ಲದೆ ಪೊಲೀಸರಿಗೆ ಸಿಗದಂತೆ ಎಚ್ಚರಿಕೆ ವಹಿಸಿದ್ದ ಆತ, ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕಿನ ಮುಖವಾಡ ಮತ್ತು ಕೈಗವಚ ಧರಿಸಿಕೊಂಡು ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸ್ಥಳೀಯ ಪೊಲೀಸರು, ಸಾದಂರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಮುರುಗನ್‌ ತಂಡದ ಮೇಲೆ ಶಂಕೆಗೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಮುರುಗನ ಕೆಲ ಸಹಚರರನ್ನು ಸೆರೆ ಹಿಡಿದಿದ್ದರು. ಅವರು ನೀಡಿದ ಸುಳಿವಿನ ಮೇರೆಗೆ ಮುರುಗನ್‌ ಬೆನ್ನುಹತ್ತಿದ್ದರು. ಅಷ್ಟರಲ್ಲಿ ತಮ್ಮ ಮೇಲೆ ಗುಂಡಿನ ದಾಳಿ ನಡೆಯಬಹುದು ಎಂದು ಆತಂಕಗೊಂಡ ಮುರುಗನ್‌ ಹಾಗೂ ಆತನ ಸೋದರ ಸಂಬಂಧಿ ಸುರೇಶ್‌, ನ್ಯಾಯಾಲಯ ಮುಂದೆ ಶರಣಾಗಲು ನಿರ್ಧರಿಸಿದ್ದರು. ಅದರಂತೆ ಬೆಂಗಳೂರಿನಲ್ಲಿ ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಬಂದು ಮುರುಗನ್‌ ಶರಣಾದರೆ, ಮತ್ತೊಬ್ಬ ಆರೋಪಿ ಸುರೇಶ್‌ ತಿರುಚಿರಪಲ್ಲಿಯಲ್ಲೇ ಕೋರ್ಟ್‌ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 ಹಳೇ ಕೇಸ್‌ ನೆಪದಲ್ಲಿ ಶರಣು!

ಮುರುಗನ್‌ ಅಂತರ್‌ ರಾಜ್ಯ ಕಳ್ಳನಾಗಿದ್ದು, ಆತನ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿ ಸಹ ಪ್ರಕರಣಗಳು ದಾಖಲಾಗಿವೆ. ಈ ಹಳೇ ಪ್ರಕರಣಗಳಿಗೆ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಆತನ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದ್ದವು. ಇದೇ ಪ್ರಕರಣದ ನೆಪ ಮುಂದಿಟ್ಟುಕೊಂಡು ಮುರುಗನ್‌, ಈಗ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

100ಕ್ಕೂ ಹೆಚ್ಚು ಕೃತ್ಯ :  ತನ್ನ 15 ವರ್ಷಕ್ಕೆ ಅಪರಾಧ ಜಗತ್ತಿಗೆ ಕಾಲಿಟ್ಟಿಮುರುಗನ್‌, ಆರಂಭದಲ್ಲಿ ಕಾರುಗಳಲ್ಲಿ ಸ್ಟೀರಿಯೋ ಕಳ್ಳತನ ಮಾಡುತ್ತಿದ್ದ. ಕ್ರಮೇಣ ಚಿನ್ನಾಭರಣ ಅಂಗಡಿ ಹಾಗೂ ಮನೆಗಳಿಗೆ ಕನ್ನ ಹಾಕುತ್ತಿದ್ದ. 2009ರಲ್ಲಿ ಮೊದಲ ಬಾರಿಗೆ ಅಂದು ಮಡಿವಾಳ ಠಾಣೆ ಪಿಎಸ್‌ಐ ಆಗಿದ್ದ ಮಿರ್ಜಾ ಅಲಿ, ಕಳ್ಳತನ ಪ್ರಕರಣದಲ್ಲಿ ಮುರುಗನ್‌ನನ್ನು ಬಂಧಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2015ರಲ್ಲಿ ಬಾಣಸವಾಡಿ ಠಾಣೆ ಇನ್‌ಸ್ಪೆಕ್ಟರ್‌ ಕರ್ತವ್ಯ ನಿರ್ವಹಿಸುತ್ತಿದ್ದ ಮಿರ್ಜಾ ಅಲಿ, ಮತ್ತೆ ಮುರುಗನನ್ನು ಸೆರೆ ಹಿಡಿದಿದ್ದರು. ಆಗ ಆತನಿಂದ 4.5 ಕೆ.ಜಿ ಚಿನ್ನಾಭರಣ ಜಪ್ತಿಯಾಗಿತ್ತು. ಆತನ ಬೆರಳಚ್ಚು ಪಡೆದು ಹಳೇ ಪ್ರಕರಣಗಳಿಗೆ ತಾಳೆ ಹಾಕಿದಾಗ 100ಕ್ಕೂ ಕೃತ್ಯಗಳಲ್ಲಿ ಪಾತ್ರ ಪತ್ತೆಯಾಗಿತ್ತು. ಅಂದು ಏಡ್ಸ್‌ ಕಾಯಿಲೆಗೆ ಆತ ಚಿಕಿತ್ಸೆ ಸಹ ಪಡೆದಿದ್ದ. ತರುವಾಯ ಜಾಮೀನು ಪಡೆದು ನಗರ ತೊರೆದ ಮುರುಗನ್‌, ಈಗ ಚಿನ್ನಾಭರಣ ಮಾರಾಟ ಮಳಿಗೆಗೆ ಕನ್ನ ಹಾಕಿ ದಕ್ಷಿಣ ಭಾರತ ಪೊಲೀಸರಿಗೆ ಅಚ್ಚರಿ ಮೂಡಿಸಿದ್ದ.