ಬೌನ್ಸ್ ಸ್ಕೂಟರ್ ಬಳಸಿ ಬಳಿಕ ಬೆಂಕಿ ಹಚ್ಚಿದರು!
ಬಳಸಿದ ಬಳಿಕ ಬೌನ್ಸ್ ಸ್ಕೂಟರ್ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಂಗಳೂರು [ಅ.09]: ದುಷ್ಕರ್ಮಿಗಳು ಬೌನ್ಸ್ ಕಂಪನಿಯ ದ್ವಿಚಕ್ರ ವಾಹನ ಬಳಸಿ ಬಳಿಕ ವಾಹನಕ್ಕೆ ಬೆಂಕಿ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕಂಪನಿಯ ಮುಖ್ಯಸ್ಥ ಕಾರ್ತಿಕ್ ದೂರು ದಾಖಲಿಸಿದ್ದಾರೆ. ಸಾರ್ವಜನಿಕರ ಉಪಯೋಗಕ್ಕೆಂದು ಬೌನ್ಸ್ ಸಂಸ್ಥೆ ದ್ವಿಚಕ್ರ ವಾಹನದ ಸೇವೆ ಒದಗಿಸುತ್ತಿದೆ. ಅ.5ರಂದು ಬೆಳಗಿನ ಜಾವ ಬಂಡೆಪಾಳ್ಯದಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಬೌನ್ಸ್ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ.
ಬೆಂಕಿಯ ತೀವ್ರತೆಗೆ ಸ್ಕೂಟಿ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸ್ಥಳೀಯರು ಅಗ್ನಿಶಾಮಕ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ವಾಹನ ಸುಟ್ಟು ಕರಕಲಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿಷಯ ತಿಳಿದ ಕಂಪನಿಯ ಮುಖ್ಯಸ್ಥರು ದ್ವಿಚಕ್ರ ವಾಹನಕ್ಕೆ ಬೆಂಕಿ ಹಾಕಿದ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ. ದುಷ್ಕರ್ಮಿಗಳು ಬೌನ್ಸ್ ದ್ವಿಚಕ್ರ ವಾಹನ ಬಳಿ ಹೋಗುವ ದೃಶ್ಯಾವಳಿಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತರ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.