ಬೆಂಗಳೂರಿನಲ್ಲಿ ₹2,700 ಸಂಬಳದ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ಯುವಕ ಬಾರ್, ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್ ಆಗಿ ತಮ್ಮ ಬದುಕನ್ನೇ ಬದಲಿಸಿಕೊಂಡರು. ಹತ್ತು ವರ್ಷಗಳ ಕಠಿಣ ಪರಿಶ್ರಮದಿಂದ ಸ್ವಂತ ಮನೆ, ಬೈಕ್ ಖರೀದಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ, ಇವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

ಯಶಸ್ಸು ಎನ್ನುವುದು ಕೇವಲ ದೊಡ್ಡ ಕಂಪನಿಗಳ ಎಸಿ ರೂಮುಗಳಲ್ಲಿ ಕುಳಿತು ಕೆಲಸ ಮಾಡುವವರಿಗೆ ಮಾತ್ರ ಮೀಸಲಲ್ಲ. ಬೆವರಿನ ಹನಿಗಳನ್ನು ಸುರಿಸಿ, ಪ್ರಾಮಾಣಿಕವಾಗಿ ದುಡಿಯುವ ಶ್ರಮಜೀವಿಗಳಿಗೂ ಯಶಸ್ಸು ಒಲಿಯುತ್ತದೆ ಎಂಬುದಕ್ಕೆ ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್ ರೂಪ್‌ಚಂದ್ ಬಾರ್ (Roopchand Bar) ಅವರೇ ಸಾಕ್ಷಿ. 2,700 ರೂಪಾಯಿ ಸಂಬಳಕ್ಕೆ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ಯುವಕ ಇಂದು ಸ್ವಂತ ಮನೆ, ಬೈಕ್ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಭಗ್ನಗೊಂಡ 'ಸೇನೆ'ಯ ಕನಸು, ಅರಸಿ ಬಂದ ಬೆಂಗಳೂರು:

ಮೂಲತಃ ಕೋಲ್ಕತ್ತಾದ ಹಳ್ಳಿಯೊಂದರ ರೈತ ಕುಟುಂಬದವರಾದ ರೂಪ್‌ಚಂದ್, ಶಾಲಾ ದಿನಗಳಲ್ಲಿ ಓಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಪಟುವಾಗಿದ್ದರು. ಭಾರತೀಯ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬುದು ಅವರ ದೊಡ್ಡ ಕನಸಾಗಿತ್ತು. ಆದರೆ, ಅದೃಷ್ಟ ಕೈಕೊಟ್ಟಿತು. ಸೇನೆಗೆ ಬೇಕಾದ ದೈಹಿಕ ಎತ್ತರ (Height) ಅವರಿಗಿಲ್ಲದ ಕಾರಣ ಆ ಕನಸು ಭಗ್ನವಾಯಿತು. ಬದುಕಿನ ದಾರಿ ಹುಡುಕುತ್ತಾ ಅವರು ಬೆಂಗಳೂರಿನ ರೈಲೇರಿದರು. ಅಂದು ಅವರ ಬಳಿ ಬದುಕು ಕಟ್ಟಿಕೊಳ್ಳುವ ಛಲವಿತ್ತೇ ಹೊರತು ಹಣವಿರಲಿಲ್ಲ.

₹2,700 ಸಂಬಳದ ಕೆಲಸದಿಂದ ಮೊದಲ ತಿರುವು:

ಬೆಂಗಳೂರಿಗೆ ಬಂದ ಹೊಸದರಲ್ಲಿ ರೂಪ್‌ಚಂದ್ ಹೌಸ್‌ಕೀಪಿಂಗ್ (ಸ್ವಚ್ಛತಾ) ಕೆಲಸಕ್ಕೆ ಸೇರಿದರು. ಆಗ ಅವರಿಗೆ ಸಿಗುತ್ತಿದ್ದ ತಿಂಗಳ ಸಂಬಳ ಕೇವಲ 2,700 ರೂಪಾಯಿ. ಈ ಸಾಲದ ಮೊತ್ತದಲ್ಲಿ ಜೀವನ ನಡೆಸುವುದು ಅವರಿಗೆ ಸವಾಲಾಗಿತ್ತು. 2016ರಲ್ಲಿ ಸ್ನೇಹಿತನೊಬ್ಬನ ಸಲಹೆಯಂತೆ 'ಸ್ವಿಗ್ಗಿ' ಸಂಸ್ಥೆಗೆ ಡೆಲಿವರಿ ಪಾರ್ಟ್‌ನರ್ ಆಗಿ ಸೇರಿಕೊಂಡರು. ಅಂದು ಆರಂಭವಾದ ಪಯಣ ಅವರ ಬದುಕನ್ನೇ ಬದಲಿಸಿತು. ಸ್ವಿಗ್ಗಿಗೆ ಸೇರಿದ ಕೇವಲ ಮೊದಲ ವಾರದಲ್ಲೇ ಅವರು ಹಿಂದೆ ಮಾಡುತ್ತಿದ್ದ ಹೌಸ್‌ಕೀಪಿಂಗ್ ಕೆಲಸದ ಇಡೀ ತಿಂಗಳ ಸಂಬಳಕ್ಕಿಂತ ಹೆಚ್ಚು ಹಣವನ್ನು ಸಂಪಾದಿಸಿದರು!

10 ವರ್ಷಗಳ ಪ್ರಾಮಾಣಿಕ ದುಡಿಮೆ ಮತ್ತು ಸಾಧನೆ:

ಇಂದು ರೂಪ್‌ಚಂದ್ ಸ್ವಿಗ್ಗಿ ಸಂಸ್ಥೆಯಲ್ಲಿ 10 ವರ್ಷಗಳನ್ನು ಪೂರೈಸಿದ್ದಾರೆ. ಈ ಒಂದು ದಶಕದಲ್ಲಿ ಅವರು ಗಳಿಸಿದ್ದು ಸಾಮಾನ್ಯ ಸಾಧನೆಯಲ್ಲ. ಅವರು ತಮ್ಮ ಗ್ರಾಮದಲ್ಲಿ ಒಂದು ಸುಂದರವಾದ ಮನೆಯನ್ನು ನಿರ್ಮಿಸಿದ್ದಾರೆ. ಓಡಾಟಕ್ಕೆ ಸ್ವಂತ ಬೈಕ್ ಖರೀದಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ, ತಮ್ಮ ಮಕ್ಕಳಿಗೆ ನಗರದ ಖಾಸಗಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಸಂಸ್ಥೆಯಲ್ಲಿ 'ಸ್ಟಾರ್ ಪರ್ಫಾರ್ಮರ್' ಆಗಿ ಗುರುತಿಸಿಕೊಂಡಿರುವ ಇವರು, ಡೆಲಿವರಿ ಉದ್ಯೋಗದ ಬಗ್ಗೆ ಕೀಳರಿಮೆ ಹೊಂದಿರುವ ಯುವಕರಿಗೆ ಕಪಾಳಮೋಕ್ಷ ಮಾಡಿದಂತೆ ಸಾಧನೆ ಮಾಡಿ ತೋರಿಸಿದ್ದಾರೆ.

ಕನ್ನಡ ಪ್ರೇಮಕ್ಕೆ ಗ್ರಾಹಕರು ಫಿದಾ:

ರೂಪ್‌ಚಂದ್ ಅವರ ಸಾಧನೆಯಲ್ಲಿ ಮತ್ತೊಂದು ವಿಶೇಷತೆಯಿದೆ. ಮೂಲತಃ ಬಂಗಾಳಿ ಭಾಷಿಕರಾದ ಇವರು, ಇಂದು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಹೊರ ರಾಜ್ಯದಿಂದ ಬಂದು ವರ್ಷಗಳೇ ಕಳೆದರೂ ಇಲ್ಲಿನ ಭಾಷೆ ಕಲಿಯದವರ ನಡುವೆ, ರೂಪ್‌ಚಂದ್ ಕನ್ನಡದಲ್ಲಿ ಮಾತನಾಡುತ್ತಾ ಗ್ರಾಹಕರಿಗೆ ಆಹಾರ ತಲುಪಿಸುತ್ತಾರೆ. 'ನಮ್ಮ ಕುಟುಂಬದಲ್ಲಿ ಮೂರ್ನಾಲ್ಕು ಭಾಷೆ ಕಲಿತ ಮೊದಲ ವ್ಯಕ್ತಿ ನಾನೇ' ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಬದುಕಿನಲ್ಲಿ ಏನೂ ಇಲ್ಲದ ಸ್ಥಿತಿಯಿಂದ ಬಂದು, ಹತ್ತು ವರ್ಷಗಳ ಸತತ ಪರಿಶ್ರಮದಿಂದ ಆರ್ಥಿಕ ಸಬಲತೆ ಕಂಡುಕೊಂಡ ರೂಪ್‌ಚಂದ್ ಬಾರ್ ಅವರ ಕಥೆ, ಇಂದಿನ ಹತಾಶೆಗೊಂಡ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ. ಕೆಲಸ ಯಾವುದೇ ಇರಲಿ, ನಿಷ್ಠೆ ಮತ್ತು ಶ್ರಮವಿದ್ದರೆ ಯಶಸ್ಸು ಖಚಿತ ಎಂಬುದಕ್ಕೆ ಇವರೇ ಮಾದರಿ.