ಬೆಂಗಳೂರಿನ ಉದ್ಯಮಿ ಅಖಿಲ ಹೇಮಾದ್ರಿ ತಮ್ಮ ಕೋಟಿ ಬೆಲೆಯ ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಕಲಸಿ ರಸ್ತೆ ಗುಂಡಿ ಮುಚ್ಚಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನಾಗರಿಕ ಜವಾಬ್ದಾರಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. 

ಬೆಂಗಳೂರು (ಏ.20): ಸಿಲಿಕಾನ್ ಸಿಟಿಯ ರಸ್ತೆ ಗುಂಡಿಗಳ ಸಮಸ್ಯೆ ವರ್ಲ್ಡ್‌ ಫೇಮಸ್‌. ಆದರೆ, ಬೆಂಗಳೂರಿನ ಉದ್ಯಮಿಯೊಬ್ಬರು ಈ ಗುಂಡಿ ಮುಚ್ಚಲು ಅನುಸರಿಸಿದ ವಿಲಕ್ಷಣ ಹಾದಿಯ ವಿಡಿಯೋ ಈಗ ವೈರಲ್ ಆಗಿದ್ದು, ವೀಕ್ಷಕರಲ್ಲಿ ದಿಗ್ಭ್ರಮೆ ಮತ್ತು ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ. ಬೆಂಗಳೂರು ಮೂಲದ ಉದ್ಯಮಿ ಅಖಿಲ ಹೇಮಾದ್ರಿ ಎಂಬುವವರು ಅಧಿಕಾರಿಗಳ ನೆರವಿಲ್ಲದೆ ತಾವೇ ಖುದ್ದಾಗಿ ರಸ್ತೆಯ ಗುಂಡಿಗಳನ್ನು ದುರಸ್ತಿ ಮಾಡಲು ಮುಂದಾಗಿದ್ದಾರೆ. ಆದರೆ, ಅವರು ಈ ಕಾರ್ಯಕ್ಕೆ ಬಳಸಿದ ವಿಧಾನ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Add Asianetnews Kannada as a Preferred SourcegooglePreferred

ವೈರಲ್ ಆಗಿರುವ ವಿಡಿಯೋದಲ್ಲಿ ಹೇಮಾದ್ರಿ ಅವರು ತಮ್ಮ ಕೋಟಿ ಬೆಲೆಯ ಐಷಾರಾಮಿ ಪೋರ್ಷೆ (Porsche) ಕಾರಿನಲ್ಲಿ ಸ್ಥಳಕ್ಕೆ ಆಗಮಿಸುತ್ತಾರೆ. ಬಳಿಕ ಕಾರಿನಿಂದ ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳನ್ನು ಇಳಿಸುತ್ತಾರೆ. ಆಶ್ಚರ್ಯದ ಸಂಗತಿಯೆಂದರೆ, ಅವರು ಸಿಮೆಂಟ್ ಮಿಶ್ರಣವನ್ನು (Concrete Mix) ತಯಾರಿಸಲು ತಮ್ಮ ಐಷಾರಾಮಿ ಕಾರಿನ ಮುಂಭಾಗದ ಬಾನೆಟ್ ಅನ್ನೇ ಸ್ಥಳವನ್ನಾಗಿ ಬಳಸಿಕೊಂಡಿದ್ದಾರೆ! ಬಾನೆಟ್ ಮೇಲೆಯೇ ಸಿಮೆಂಟ್ ಕಲಸಿ, ಬಳಿಕ ಅದನ್ನು ರಸ್ತೆಯ ಗುಂಡಿಗೆ ತುಂಬಿಸಿ ಸಮತಟ್ಟು ಮಾಡಿದ್ದಾರೆ.

ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಹೇಮಾದ್ರಿ ಅವರು ನಾಗರಿಕ ಜವಾಬ್ದಾರಿಯ ಬಗ್ಗೆ ಸಂದೇಶ ನೀಡಿದ್ದಾರೆ. "ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಸಾರ್ವಜನಿಕ ಸ್ಥಳಗಳ ನಿರ್ವಹಣೆಯಲ್ಲಿ ನಾಗರಿಕರು ಕೈಜೋಡಿಸಬೇಕು. ಸರ್ಕಾರವೊಂದೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಕೆಲವು ಯೂಸರ್‌ಗಳು ಕೆಟ್ಟ ರಸ್ತೆಗಳ ಬಗ್ಗೆ ಗಮನ ಸೆಳೆಯಲು ಮತ್ತು ವೈಯಕ್ತಿಕ ಜವಾಬ್ದಾರಿಯನ್ನು ಉತ್ತೇಜಿಸಲು ಉದ್ಯಮಿ ಮಾಡಿದ ಈ ಕ್ರಿಯೇಟಿವ್ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಇದು ಕೇವಲ ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಎಂದು ಟೀಕಿಸಿದ್ದಾರೆ. ಐಷಾರಾಮಿ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಕಲಸಿದ್ದನ್ನು ನೋಡಿ ವಾಹನ ಪ್ರಿಯರು ಶಾಕ್‌ಗೆ ಒಳಗಾಗಿದ್ದಾರೆ.

ಇದು ಪ್ಲಾನ್ಡ್ ವಿಡಿಯೋ ಇರಬಹುದೇ?

ವಿಡಿಯೋ ನೋಡಿದ ಹಲವರು ಇದು ಕಾರ್ ಡಿಟೇಲಿಂಗ್ ಅಥವಾ 'ಪ್ರೊಟೆಕ್ಟಿವ್ ಫಿಲ್ಮ್' (PPF) ಬ್ರ್ಯಾಂಡ್‌ನ ಮಾರ್ಕೆಟಿಂಗ್ ತಂತ್ರ ಇರಬಹುದು ಎಂದು ಶಂಕಿಸಿದ್ದಾರೆ. ಯಾಕೆಂದರೆ, ಸಿಮೆಂಟ್ ಕಲಸಿದ ಬಳಿಕ ಬಾನೆಟ್ ಮೇಲಿದ್ದ ರಕ್ಷಣಾತ್ಮಕ ಪದರವನ್ನು ಸುಲಭವಾಗಿ ಕಿತ್ತುಹಾಕಲಾಗಿದ್ದು, ಕಾರಿಗೆ ಯಾವುದೇ ಹಾನಿಯಾಗಿಲ್ಲ. ಒಟ್ಟಿನಲ್ಲಿ ನಾಗರಿಕ ಸಮಸ್ಯೆ ಮತ್ತು ಐಷಾರಾಮಿ ಕಾರಿನ ಈ ಅಪರೂಪದ ಸಂಯೋಜನೆ ಈಗ ಇಂಟರ್ನೆಟ್‌ನಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

View post on Instagram