ಎಷ್ಟೇ ಕಷ್ಟಗಳು ಎದುರಾದರೂ ಧೈರ್ಯ ಕಳೆದುಕೊಳ್ಳದೆ ಮುನ್ನಡೆಯಬೇಕು ಎಂಬುದಕ್ಕೆ ಬೆಂಗಳೂರಿನ ಅಹಲ್ಯಾಬಾಯಿ ಅವರ ಬದುಕೇ ಸಾಕ್ಷಿ. ತಾಯಿಯ ಪ್ರೋತ್ಸಾಹ ಮತ್ತು ನಿರಂತರ ಪರಿಶ್ರಮದಿಂದ ತಮ್ಮದೇ ಆದ ಅಡುಗೆ ಉದ್ಯಮವನ್ನು ಬೆಳೆಸಿಕೊಂಡಿರುವ ಇವರು, ಇಂದು ಸುಮಾರು 50 ಮನೆಗಳಿಗೆ ಪ್ರತಿದಿನ ಊಟ ತಲುಪಿಸುತ್ತಿದ್ದಾರೆ.

ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಧೈರ್ಯ ಕಳೆದುಕೊಳ್ಳದೆ ಮುನ್ನಡೆಯಬೇಕು ಎಂಬುದಕ್ಕೆ ಬೆಂಗಳೂರಿನ ಅಹಲ್ಯಾಬಾಯಿ ಅವರ ಬದುಕೇ ಸಾಕ್ಷಿ. ಅಡುಗೆ ಮಾಡುವ ಆಸಕ್ತಿ, ತಾಯಿಯ ಪ್ರೋತ್ಸಾಹ ಮತ್ತು ನಿರಂತರ ಪರಿಶ್ರಮದಿಂದ ತಮ್ಮದೇ ಆದ ಅಡುಗೆ ಉದ್ಯಮವನ್ನು ಬೆಳೆಸಿಕೊಂಡಿರುವ ಇವರು, ಇಂದು ಸುಮಾರು 50 ಮನೆಗಳಿಗೆ ಪ್ರತಿದಿನ ಊಟ ತಲುಪಿಸುತ್ತಿದ್ದಾರೆ. ಕೆಲವು ಕಚೇರಿಗಳಿಗೂ ಅಡುಗೆ ಪೂರೈಸುತ್ತಿದ್ದಾರೆ. ವಿಶೇಷವೆಂದರೆ, ಇಂದಿಗೂ ಕೆಲಸದ ನಡುವೆ ಒಂದು ಕ್ಷಣವೂ ಸುಮ್ಮನೆ ಕೂರುವುದಿಲ್ಲ.

ತಾಯಿಯ ಮಾತೇ ಬದುಕಿಗೆ ಸ್ಫೂರ್ತಿ

ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಹುಟ್ಟಿ ಬೆಳೆದ ಅಹಲ್ಯಾಬಾಯಿ ಅವರಿಗೆ ಬಾಲ್ಯದಿಂದಲೂ ಅಡುಗೆಯಲ್ಲಿ ಆಸಕ್ತಿ. ತಾಯಿ ಕೂಡ ಅಡುಗೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಯಾವ ಪದಾರ್ಥವನ್ನು ಹೇಗೆ ಮಾಡಿದರೆ ರುಚಿಯಾಗುತ್ತದೆ ಎಂಬುದನ್ನು ಮಗಳಿಗೆ ಹೇಳಿಕೊಡುತ್ತಿದ್ದರು. ಅಡುಗೆ ಕೆಲಸದಲ್ಲಿ ಮುಂದೆ ಬರಲು ಪ್ರತಿ ಹಂತದಲ್ಲೂ ಪ್ರೋತ್ಸಾಹಿಸುತ್ತಿದ್ದರು. “ಸುಮ್ಮನೆ ಕೂತುಕೊಂಡು ಕಾಲ ಕಳೆಯುವ ಬದಲು ಏನಾದರೂ ಮಾಡು. ನಿನ್ನ ಮುಂದೆ ಹೆಜ್ಜೆ ಇಡು, ಆಗದಿದ್ದರೆ ನಿನ್ನನ್ನು ಎಳೆದುಕೊಂಡು ಮುಂದಕ್ಕೆ ಹೋಗುತ್ತದೆ” ಎಂದು ತಾಯಿ ಧೈರ್ಯ ತುಂಬುತ್ತಿದ್ದರಂತೆ.

ಆರಂಭದಲ್ಲಿ ಮನೆಯಲ್ಲೇ ಕುಡಬಳೆ, ಚಕ್ಕುಲಿ, ನಿಪ್ಪಟ್ಟು ಸೇರಿದಂತೆ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಲು ಶುರು ಮಾಡಿದರು. ತಾಯಿಯ ಜೊತೆಗೂಡಿ ಕೆಜಿಐಡಿ ಕಟ್ಟಡ, ಬಿಎಸ್‌ಎನ್‌ಎಲ್ ಕಚೇರಿ, ಜನರಲ್ ಪೋಸ್ಟ್ ಆಫೀಸ್ ಸೇರಿದಂತೆ ಹಲವು ಕಡೆಗಳಿಗೆ ತೆರಳಿ ತಿಂಡಿಗಳನ್ನು ಮಾರುತ್ತಿದ್ದರು. ನಂತರ ಚಪಾತಿ, ಪಲ್ಯ ತಯಾರಿಸುವ ಕೆಲಸ ಆರಂಭಿಸಿದರು.

ಒಂದು ಬಾಣಂತಿಯ ಮನೆಯಿಂದ ಶುರುವಾದ ಊಟದ ಸೇವೆ

ಅಹಲ್ಯಾಬಾಯಿ ಅವರ ಅಡುಗೆಗೆ ಬೇಡಿಕೆ ಹೆಚ್ಚಾಗಲು ಒಂದು ಬಾಣಂತಿಯ ಮನೆಯ ಆರ್ಡರ್ ಕಾರಣವಾಯಿತು. ವಿಜಯನಗರದ ಶಾಂತಲಾ ಎಂಬುವವರ ಮನೆಯಲ್ಲಿ ಮಗು ಜನಿಸಿದಾಗ ಅಡುಗೆ ಮಾಡಿಕೊಡುವವರು ಇರಲಿಲ್ಲ. ಆಗ ಅನ್ನ, ಹುಳಿ, ಸಾರು ಮತ್ತು ಪಲ್ಯ ತಯಾರಿಸಿ ಕಳುಹಿಸಿಕೊಡುವಂತೆ ಕೇಳಿಕೊಂಡರು. ಅಲ್ಲಿಂದ ಆರಂಭವಾದ ಊಟದ ಸೇವೆ ನಿಧಾನವಾಗಿ ಹಲವು ಮನೆಗಳಿಗೆ ವಿಸ್ತರಿಸಿತು. ಒಬ್ಬರಿಂದ ಮತ್ತೊಬ್ಬರಿಗೆ ಪರಿಚಯವಾಗಿ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ಇಂದು ಬೆಂಗಳೂರಿನ ಮಲ್ಲೇಶ್ವರ, ಸುಬ್ರಹ್ಮಣ್ಯನಗರ, ಶ್ರೀರಾಮಪುರ ಸೇರಿದಂತೆ ಹಲವು ಪ್ರದೇಶಗಳ ಸುಮಾರು 50 ಮನೆಗಳಿಗೆ ಊಟ ಪೂರೈಸುತ್ತಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಕಚೇರಿಗಳು, ವಿಮಾ ಕಚೇರಿಗಳಿಗೂ ಅಡುಗೆ ಕಳುಹಿಸುತ್ತಾರೆ.

ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಅಡುಗೆ ಇವರ ವಿಶೇಷತೆ

ಅಹಲ್ಯಾಬಾಯಿ ಅವರ ಅಡುಗೆಯ ಮತ್ತೊಂದು ವಿಶೇಷವೆಂದರೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಸಾಂಪ್ರದಾಯಿಕ ಆಹಾರ ಪದ್ಧತಿ ಅನುಸರಿಸುವ ಕುಟುಂಬಗಳಿಗೆ ಇದು ಅನುಕೂಲವಾಗಿದೆ. ಹೀಗಾಗಿ ಇಂತಹ ಆಹಾರ ಬಯಸುವ ಅನೇಕರು ಇವರ ಬಳಿ ಊಟಕ್ಕೆ ಆರ್ಡರ್ ನೀಡುತ್ತಾರೆ. ಮನೆಯಲ್ಲಿರುವ ವೃದ್ಧರು, ದಂಪತಿಗಳು ಅಥವಾ ಒಬ್ಬರೇ ವಾಸಿಸುವವರಿಗೆ ಪ್ರತಿದಿನ ಅಡುಗೆ ಮಾಡಿಕೊಳ್ಳುವುದು ಕಷ್ಟವಾಗಬಹುದು. ಅಂತಹವರಿಗೆ ಮನೆಯೂಟ ತಲುಪಿಸುವ ಕೆಲಸವನ್ನು ಅಹಲ್ಯಾಬಾಯಿ ಮಾಡುತ್ತಿದ್ದಾರೆ.

ಮಗಳ ಸಾವಿನ ನೋವು; ಮೂರನೇ ದಿನವೇ ಮತ್ತೆ ಅಡುಗೆ ಕೆಲಸ

ಅಹಲ್ಯಾಬಾಯಿ ಅವರ ಬದುಕಿನಲ್ಲಿ ಮರೆಯಲಾಗದ ನೋವಿನ ಘಟನೆಯೆಂದರೆ ಮಗಳ ಸಾವು. ಮಗಳು ಬಿಕಾಂ ಪದವಿ ಪಡೆದಿದ್ದ ಪ್ರತಿಭಾವಂತೆಯಾಗಿದ್ದಳು. ಸಂಗೀತ ಮತ್ತು ಅಡುಗೆಯಲ್ಲೂ ಆಸಕ್ತಿ ಹೊಂದಿದ್ದಳು ಎಂದು ಅವರು ನೆನಪಿಸಿಕೊಂಡಿದ್ದಾರೆ. ಮಗಳ ಪ್ರೇಮ ವೈಫಲ್ಯದ ಬಳಿಕ ಕೆಮ್ಮಿನ ಸಿರಪ್‌ಗೆ ವ್ಯಸನಿಯಾಗಿದ್ದಳು ಎಂಬುದನ್ನು ತಡವಾಗಿ ಗಮನಿಸಿದ್ದಾಗಿ ಅಹಲ್ಯಾಬಾಯಿ ಸಂದರ್ಶನದಲ್ಲಿ ನೋವು ಹಂಚಿಕೊಂಡಿದ್ದಾರೆ. ಒಂದು ದಿನ ಮಗಳ ಆರೋಗ್ಯ ಹದಗೆಟ್ಟು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ತಡವಾಗಿತ್ತು. ವೈದ್ಯರು ಪ್ರಯತ್ನಿಸಿದರೂ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿನೊಂದಿಗೆ ವಿವರಿಸಿದ್ದಾರೆ.

ಮಗಳ ಸಾವಿನ ಬಳಿಕ ಜೀವನವೇ ಬೇಡವೆನಿಸಿದ ದಿನಗಳೂ ಇದ್ದವು. ಆದರೆ ಮಗಳ ನೆನಪಿನಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡಬೇಕು, ಬದುಕಿನಲ್ಲಿ ಮುಂದೆ ಸಾಗಬೇಕು ಎಂಬ ಆಲೋಚನೆ ಅವರಲ್ಲಿ ಮೂಡಿತು. ಮಗಳ ಸಾವಿನ ಮೂರನೇ ದಿನವೇ ನಾಲ್ಕು ಕೆ.ಜಿ. ಚಟ್ನಿ ಪುಡಿಯ ಆರ್ಡರ್ ಪೂರ್ಣಗೊಳಿಸಲು ಅಡುಗೆ ಮನೆಗೆ ಮರಳಿದರು. ವಿದೇಶಕ್ಕೆ ತೆರಳಬೇಕಿದ್ದ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಚಟ್ನಿ ಪುಡಿ ತಲುಪಿಸಬೇಕಿತ್ತು. “ಅಳುತ್ತಾ ಕುಳಿತರೆ ಎಷ್ಟು ಹೊತ್ತು ಅಳಲು ಸಾಧ್ಯ? ಕೆಲಸವೂ ನಡೆಯಬೇಕು” ಎಂಬ ಮನಸ್ಥಿತಿಯಿಂದ ಮತ್ತೆ ಕೆಲಸ ಆರಂಭಿಸಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ಪತಿಯ ಬೆಂಬಲ, ತಾಯಿಯ ಪ್ರೋತ್ಸಾಹ

ಅಹಲ್ಯಾಬಾಯಿ ಅವರ ಉದ್ಯಮದ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ದೊಡ್ಡದು. ಪತಿಯೂ ಆರಂಭದಿಂದಲೂ ಬೆನ್ನೆಲುಬಾಗಿ ನಿಂತಿದ್ದರು. ಬೆಳಗ್ಗೆ ಅಡುಗೆ ಮನೆಗೆ ಬಂದು ತಿಂಡಿ ತಯಾರಿಸಲು ಸಹಾಯ ಮಾಡುತ್ತಿದ್ದರು. ನಂತರ ಕಾರ್ಪೊರೇಷನ್‌ನ ತೆರಿಗೆ ವಿಭಾಗದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು ಎಂದು ಅವರು ಹೇಳಿದ್ದಾರೆ. ಮಗಳು ಮತ್ತು ತಾಯಿಯನ್ನು ಕಳೆದುಕೊಂಡ ನೋವಿನ ಜೊತೆಗೆ ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಪತಿಯನ್ನೂ ಕಳೆದುಕೊಂಡರು. ಆದರೂ ಜೀವನದಲ್ಲಿ ಕುಗ್ಗದೆ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಕುಟುಂಬದ ಇತರ ಸದಸ್ಯರು ಕೂಡ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

“ವ್ಯಾಪಾರ ಆಗಲಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ”

ಅಡುಗೆ ಉದ್ಯಮ ಆರಂಭಿಸಲು ಬಯಸುವವರಿಗೆ ಅಹಲ್ಯಾಬಾಯಿ ಒಂದು ಸರಳ ಸಲಹೆ ನೀಡುತ್ತಾರೆ. ಮೊದಲ ದಿನವೇ ದೊಡ್ಡ ಪ್ರಮಾಣದಲ್ಲಿ ಆರಂಭಿಸಬೇಕೆಂದಿಲ್ಲ. ಚಟ್ನಿ, ಗೊಜ್ಜು, ದೋಸೆ ಅಥವಾ ಸಣ್ಣ ತಿಂಡಿಗಳಿಂದ ಶುರು ಮಾಡಬಹುದು. ಕೆಲವೊಮ್ಮೆ ಮಾಡಿದ ಪದಾರ್ಥ ಮಾರಾಟವಾಗದಿದ್ದರೆ ಅದನ್ನು ನಷ್ಟವೆಂದು ಭಾವಿಸದೆ ಪರಿಚಯದವರಿಗೆ ಹಂಚಬಹುದು. ಅವರ ಮೂಲಕ ಮತ್ತಷ್ಟು ಜನರಿಗೆ ಪರಿಚಯವಾಗುತ್ತದೆ ಎಂಬುದು ಅವರ ಅಭಿಪ್ರಾಯ. “ಹೆದರಿಕೊಳ್ಳದೆ ಶ್ರದ್ಧೆಯಿಂದ ಕೆಲಸ ಮಾಡಿದರೆ ಮುಂದೆ ಹೋಗಬಹುದು” ಎಂಬುದು ಅವರ ಬದುಕಿನ ಅನುಭವದಿಂದ ಬಂದ ಮಾತು.