ಬೆಂಗಳೂರು(ಅ.26): ದೇಶದ ಲಾಭದಾಯಕ ಕಂಪನಿಗಳಲ್ಲಿ ಒಂದಾಗಿರುವ ಬೆಮೆಲ್‌ನ್ನು ಖಾಸಗೀಕರಣ ಗೊಳಿಸಲು ಹೊರಟಿರುವ ಕೇಂದ್ರ ಸರಕಾರದ ವಿರುದ್ದ, ಬೆಮೆಲ್‌ ಎಂಪ್ಲಾಯಿಸ್‌ ಅಸೋಸಿಯೇಷನ್‌ ಪ್ರತಿಭಟನೆ ತೀವ್ರಗೊಳಿಸಿದೆ. 

ಇಂದು ಬೆಂಗಳೂರು ನಗರದ ಟೌನ್‌ ಹಾಲ್‌ ಎದುರು ಬೆಮೆಲ್ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ, ಖಾಸಗೀಕರಣ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕೇಂದ್ರ ಸರಕಾರದ ಖಾಸಗೀಕರಣ ನೀತಿಯ ವಿರುದ್ದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಲಾಭದಾಯಕ ಸರ್ಕಾರಿ  ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಕಳೆದ ಒಂದು ವಾರದಿಂದ ಕಾರ್ಖಾನೆಯ ಕೆಲಸಕ್ಕೆ ಧಕ್ಕೆಯಾಗದಂತೆ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು, ತಮ್ಮ ಕೂಗು ಕೇಂದ್ರಕ್ಕೆ ಮುಟ್ಟುವ ತನಕ ವಿವಿಧ ರೀತಿಯ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
 
ಕೇಂದ್ರ ಸರ್ಕಾರದ ರಕ್ಷಣಾ ಮಂತ್ರಾಲಯದ ಅಧೀನದಲ್ಲಿರುವ ಮತ್ತು ಸುಮಾರು 53 ವರ್ಷಗಳಿಂದ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿರುವ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂಥೆ ವಿವಿಧ ಉತ್ಪನ್ನ ತಯಾರಿಸುತ್ತಿರುವ ಬಿಇಎಂಎಲ್‌ ಸಂಸ್ಥೆಯನ್ನು ಖಾಸಗೀಕರಣ ಗೊಳಿಸುತ್ತಿರುವುದು ಸರಿಯಲ್ಲ. ಇದನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಮಾರಾಟಮಾಡಬಾರದು ಎಂಬುದಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.

ಬೆಂಗಳೂರು ಕೇಂದ್ರ ವಿಭಾಗದ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಜಂಟಿ ಸಮಿತಿ ಸಂಚಾಲಕರಾದ ದೊಮ್ಮಲೂರು ಶ್ರೀನಿವಾಸ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಆರ್‌ ನಾರಾಯಣ್‌, ಕೆಜಿಎಫ್‌ ಯೂನಿಯನ್‌ ಅಧ್ಯಕ್ಷರಾದ ಆಂಜನೇಯ ರೆಡ್ಡಿ, ಮುಖ್ಯ ಕಚೇರಿಯ ಸಂಘದ ಅಧ್ಯಕ್ಷರಾದ ಜೆ ಮುನಗಪ್ಪಾ, ಮೈಸೂರು ಯೂನಿಯನ್‌ ಅಧ್ಯಕ್ಷರಾದ ಮುನಿರೆಡ್ಡಿ, ಪಾಲಕ್ಕಾಡ್‌ ಯೂನಿಯನ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದರು.