ಬಿಬಿಎಂಪಿಯು ನೀಡಲಾದ ವಿನಾಯಿತಿಯನ್ನು ದುರುಪಯೋಗಪಡಿಸಿಕೊಂಡು ಘನತ್ಯಾಜ್ಯ ಶುಲ್ಕ ಪಾವತಿಸದೇ ವಂಚಿಸುತ್ತಿರುವುದು ಕಂಡು ಬರುತ್ತಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ತಮ್ಮಲ್ಲಿ ಉತ್ಪಾದನೆಯಾಗುವ ಕಸವನ್ನು ತಾವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಾಗಿ ಘೋಷಿಸಿಕೊಂಡಿರುವ ಹಲವು ಅಪಾರ್ಟ್‌ಮೆಂಟ್‌, ವಾಣಿಜ್ಯ ಕಟ್ಟಡ ಸೇರಿದಂತೆ ಅನೇಕ ಕಟ್ಟಡಗಳ ಮಾಲೀಕರು ಬಿಬಿಎಂಪಿಯು ನೀಡಲಾದ ವಿನಾಯಿತಿಯನ್ನು ದುರುಪಯೋಗಪಡಿಸಿಕೊಂಡು ಘನತ್ಯಾಜ್ಯ ಶುಲ್ಕ ಪಾವತಿಸದೇ ವಂಚಿಸುತ್ತಿರುವುದು ಕಂಡು ಬರುತ್ತಿದೆ.

ಪ್ರಸಕ್ತ 2025-26ನೇ ಸಾಲಿನಿಂದ ಬಿಬಿಎಂಪಿಯು ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ವಿಲೇವಾರಿ ಶುಲ್ಕ ವಸೂಲಿ ಮಾಡುವುದಕ್ಕೆ ತೀರ್ಮಾನಿಸಲಾಗಿದ್ದು, ಏಪ್ರಿಲ್‌ನಿಂದ ಸಂಗ್ರಹಿಸುವ ಕಾರ್ಯ ಸಹ ಆರಂಭಗೊಂಡಿದೆ. ಕಟ್ಟಡ ವಿಸ್ತೀರ್ಣ ಹಾಗೂ ಚಟುವಟಿಕೆ ಆಧಾರದಲ್ಲಿ ಘನತ್ಯಾಜ್ಯ ಶುಲ್ಕದ ಮೊತ್ತ ನಿಗದಿ ಪಡಿಸಲಾಗಿದೆ.

ಬಿಬಿಎಂಪಿಯ ಆಸ್ತಿ ತೆರಿಗೆ ವೆಬ್‌ಸೈಟ್‌ನಲ್ಲಿ ಸಣ್ಣ ಸಣ್ಣ ವಸತಿ ಕಟ್ಟಡಗಳಿಂದ ಕಡ್ಡಾಯವಾಗಿ ಘನತ್ಯಾಜ್ಯ ಶುಲ್ಕ ವಿಧಿಸಿ ವಸೂಲಿ ಮಾಡಲಾಗಿದೆ. ಆದರೆ, 100ಕ್ಕಿಂತ ಹೆಚ್ಚಿನ ಪ್ಲಾಟ್‌ ಹೊಂದಿರುವ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ, 50 ಸಾವಿರ ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ಹಾಗೂ ಪ್ರತಿದಿನ 100 ಕೆ.ಜಿ.ಗಿಂತ ಅಧಿಕ ತ್ಯಾಜ್ಯ ಉತ್ಪಾದನೆ ಮಾಡುವ ಕಟ್ಟಡಗಳಿಗೆ ವಿನಾಯಿತಿ ನೀಡಲಾಗಿದೆ.

ಈ ಅವಕಾಶ ದುರ್ಬಳಕೆ ಮಾಡಿಕೊಳ್ಳುತ್ತಿರುವ ನಗರದ ಹಲವು ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್‌ಗಳು, ಸ್ಟಾರ್‌ ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರು ತಮ್ಮ ಕಟ್ಟಡಗಳ ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲಿ ತಮ್ಮಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ತಾವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿಕೊಂಡು ಘನತ್ಯಾಜ್ಯ ವಿಲೇವಾರಿ ಶುಲ್ಕದಿಂದ ವಿನಾಯಿತಿ ಪಡೆಯುತ್ತಿದ್ದಾರೆ. ಆದರೆ, ವಾಸ್ತವಾಗಿ ಘೋಷಣೆ ಮಾಡಿಕೊಂಡ ಕಟ್ಟಡಗಳಿಂದ ಬಿಬಿಎಂಪಿಯ ಕಸ ಆಟೋ ಮತ್ತು ಲಾರಿಗಳಿಗೆ ಬರುತ್ತಿರುವ ಕಸ ನಿಂತಿಲ್ಲ. ಎಂದಿನಂತೆ ಕಸ ಬರುತ್ತಿದ್ದು, ಇದನ್ನು ಪತ್ತೆ ಮಾಡುವುದು ಇದೀಗ ಬಿಬಿಎಂಪಿಯ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

₹400 ಕೋಟಿ ವಸೂಲಿ

ಏಪ್ರಿಲ್‌ನಿಂದ ಜೂನ್‌ 10 ವರೆಗೆ ಬಿಬಿಎಂಪಿಯ ಆಸ್ತಿ ತೆರಿಗೆ ಹಾಗೂ ಘನತ್ಯಾಜ್ಯ ಶುಲ್ಕ ಸೇರಿದಂತೆ ಒಟ್ಟು ₹2,740 ಕೋಟಿ ಸಂಗ್ರಹವಾಗಿದೆ. ಈ ಪೈಕಿ ಘನತ್ಯಾಜ್ಯ ಶುಲ್ಕ ಸುಮಾರು ₹400 ಕೋಟಿ ಮಾತ್ರ ಸಂಗ್ರಹವಾಗಿದೆ. ವಸತಿ ಕಟ್ಟಡಗಳ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿ ವೇಳೆ ಕಟ್ಟಡದ ವಿಸ್ತೀರ್ಣದ ಮೇಲೆ ವಿನಾಯಿತಿ ಪಡೆಯುವ ಅವಕಾಶ ನೀಡಿಲ್ಲ. ಹೀಗಾಗಿ, ಸಂಗ್ರಹವಾಗಿರುವ ಘನತ್ಯಾಜ್ಯ ಶುಲ್ಕ ಬಹುತೇಕರು ವಸತಿ ಕಟ್ಟಡಗಳಿಂದಾಗಿದೆ. ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್‌ ನಿವಾಸಿಗಳು ಈ ಶುಲ್ಕದಿಂದ ವಿನಾಯಿತಿ ಪಡೆದುಕೊಂಡಿರುವುದಾಗಿ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸುಳ್ಳು ಘೋಷಿಸಿದವರಿಗೆ ದುಪ್ಪಟ್ಟು ದಂಡ: ಲೋಕೇಶ್‌

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಹಾಗೂ ಬೃಹತ್ ಕಟ್ಟಡ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿ ವೇಳೆ ತಾವೇ ತಮ್ಮ ಕಸ ವಿಲೇವಾರಿ ಬಗ್ಗೆ ಘೋಷಣೆಗೆ ಅವಕಾಶ ನೀಡಲಾಗಿತ್ತು. ಅದನ್ನು ದುರ್ಬಳಕೆ ಮಾಡಿಕೊಂಡವರಿಗೆ ದುಪಟ್ಟು ದಂಡ ವಿಧಿಸಲಾಗುವುದು. ತಾವೇ ಕಸ ವಿಲೇವಾರಿ ಘೋಷಣೆ ಮಾಡಿಕೊಂಡ ಕಟ್ಟಡ ಮಾಲೀಕರ ಪಟ್ಟಿ ಇಟ್ಟುಕೊಂಡು ಪರಿಶೀಲನೆ ನಡೆಸಲಾಗುವುದು. ಅದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗುವುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್‌ ತಿಳಿಸಿದ್ದಾರೆ.