ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ ಖ್ಯಾತಿಯ ಏರ್‌ಬಸ್ ಎ-380 ಡಬ್ಬಲ್ ಡೆಕ್ಕರ್ ವಿಮಾನ ಶೀಘ್ರವೇ ಬೆಂಗಳೂರು ಮತ್ತು ದುಬೈ ನಡುವೆ ಸಂಚಾರ ಆರಂಭಿಸಲಿದೆ. ದಕ್ಷಿಣ ಭಾರತದ ಯಾವುದೇ ನಗರವೊಂದಕ್ಕೆ ಈ ವಿಮಾನ ಸೇವೇ ಆರಂಭವಾಗುತ್ತಿರುವುದು ಇದೇ ಮೊದಲು.
ಡಬ್ಬಲ್ ಡೆಕ್ಕರ್ ಬಸ್, ಡಬ್ಬಲ್ ಡೆಕ್ಕರ್ ರೈಲುಗಳನ್ನು ನೋಡಿದ್ದಾಯ್ತು. ಇದೀಗ ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ ಖ್ಯಾತಿಯ ಏರ್‌ಬಸ್ ಎ-380 ಡಬ್ಬಲ್ ಡೆಕ್ಕರ್ ವಿಮಾನ ಶೀಘ್ರವೇ ಬೆಂಗಳೂರು ಮತ್ತು ದುಬೈ ನಡುವೆ ಸಂಚಾರ ಆರಂಭಿಸಲಿದೆ. ಇತ್ತೀಚೆಗೆ ವಿಮಾನ ಪ್ರಾಯೋಗಿಕ ಪರೀಕ್ಷೆಗಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ದಕ್ಷಿಣ ಭಾರತದ ಯಾವುದೇ ನಗರವೊಂದಕ್ಕೆ ಈ ವಿಮಾನ ಸೇವೇ ಆರಂಭವಾಗುತ್ತಿರುವುದು ಇದೇ ಮೊದಲು. ಈ ಜಂಬೋದ ಕುರಿತಾದ ಒಂದಷ್ಟುವಿಶೇಷ ಅಂಶಗಳು ಇಲ್ಲಿವೆ.
ವಿಶೇಷತೆ:
ಉದ್ದ: 240 ಅಡಿ
ಅಗಲ: 261 ಅಡಿ
ಎತ್ತರ: 79 ಅಡಿ
ತೂಕ: 575 ಟನ್
ಆಸನ: ಗರಿಷ್ಠ 840
ಇದನ್ನು ಓದಿ: ಬೆಂಗ್ಳೂರಿಗೆ ಬಂತು ವಿಶ್ವದ ಅತಿದೊಡ್ಡ ವಿಮಾನ..!
ವಿಮಾನದ ಆರಂಭಿಕ ವೆಚ್ಚ 3100 ಕೋಟಿ ರು.
2019ರಲ್ಲಿ ವಿಮಾನದ ವೆಚ್ಚ 1950 ಕೋಟಿ ರು.
3 ಲಕ್ಷ ಲೀಟರ್ - ವಿಮಾನದಲ್ಲಿ ಇರುವ 10 ಟ್ಯಾಂಕ್‌ಗಳ ಇಂಧನ ಸಾಮರ್ಥ್ಯ
253 ಲೀಟರ್ ಪ್ರತಿ ನಿಮಿಷಕ್ಕೆ ವಿಮಾನ ಬಳಸುವ ವೈಮಾನಿಕ ಇಂಧನ
24 ಸಿಬ್ಬಂದಿ ವಿಮಾನವು 3 ಪೈಲಟ್‌ಗಳು ಮತ್ತು ಇತರೆ 21 ಸಿಬ್ಬಂದಿ ಒಳಗೊಂಡಿರುತ್ತದೆ
16 ಗಂಟೆ ವಿಮಾನ ಸತತವಾಗಿ ಪ್ರಯಾಣಿಬಲ್ಲ ಸಂಚಾರದ ಅವಧಿ
40 ಲಕ್ಷ ವಿಮಾನದಲ್ಲಿ ಬಳಸಿರುವ ಬಿಡಿಭಾಗಗಳ ಸಂಖ್ಯೆ
ಶೇ.40 - ಹಾಲಿ ಇರುವ ಯಾವುದೇ ವಿಮಾನಕ್ಕಿಂತ ಶೇ.40ರಷ್ಟು ಹೆಚ್ಚು ವಿಸ್ತಾರವಾಗಿದೆ.
3600 ಲೀಟರ್ - ಪೂರ್ಣ ವಿಮಾನಕ್ಕೆ ಬಣ್ಣ ಬಳಿಯಲು 3600 ಲೀಟರ್ ಬಣ್ಣ ಬೇಕು.
1500 - ವಿಮಾನಕ್ಕೆ ಬೇಕಾದ ವಸ್ತುಗಳನ್ನು ಪೂರೈಸಿದ ಕಂಪನಿಗಳು
140 - ವಿಶ್ವದ 140 ಏರ್‌ಪೋರ್ಟ್‌ಗಳಲ್ಲಿ ಮಾತ್ರ ಈ ವಿಮಾನ ಇಳಿಯಬಲ್ಲದು
1000 ಕಿ.ಮೀ - ವಿಮಾನ ಗಂಟೆಗೆ ಗರಿಷ್ಠ 1000 ಕಿ.ಮೀ ವೇಗದಲ್ಲಿ ಸಾಗಬಲ್ಲದು
20,000 ರೂ. ಬೆಂಗಳೂರು ಮತ್ತು ದುಬೈ ನಡುವೆ ವಿಮಾನದ ಟಿಕೆಟ್ ದರ
ದಕ್ಷಿಣ ಭಾರತದಲ್ಲಿ ಬೆಂಗಳೂರಿಗೆ ಮೊದಲು
ಭಾರತದಲ್ಲಿ ಮುಂಬೈ ಬಳಿಕ ವಿಮಾನ ಇಳಿದ ಮತ್ತೊಂದು ನಿಲ್ದಾಣವೆಂದರೆ ಬೆಂಗಳೂರು. ಇದಕ್ಕೆ ಕಾರಣ ವಿಮಾನ ಇಳಿಯಲು ಅಗತ್ಯವಾದ 98,000 ಅಡಿ ಉದ್ದದ ರನ್‌ವೇ ಬೆಂಗಳೂರಿನಲ್ಲಿ ಇದೆ. ದಕ್ಷಿಣ ಭಾರತದ ರಾಜ್ಯಗಳಿಂದ ದುಬೈ ಸೇರಿದಂತೆ ವಿದೇಶಗಳಿಗೆ ಹೆಚ್ಚಿನ ಪ್ರಮಾಣ ಜನರು ಸಂಚರಿಸುತ್ತಾರೆ. ಹೀಗಾಗಿ ಬೆಂಗಳೂರಿಗೆ ಕಂಪನಿ ತನ್ನ ಸೇವೆ ಆರಂಭಿಸಿದೆ.
ಇದನ್ನೂ ಓದಿ: Bengaluru: ಏರ್‌ಪೋರ್ಟ್ 2ನೇ ಟರ್ಮಿನಲ್ ಉದ್ಘಾಟನೆಗೆ ರೆಡಿ!
ಅಕ್ಟೋಬರ್ 30ರ ಬಳಿಕ ದುಬೈಗೆ ನಿತ್ಯ ಫ್ಲೈಟ್, 500+ ಸೀಟ್
ವಿಶ್ವದ ದೈತ್ಯ ವಿಮಾನ ಅಕ್ಟೋಬರ್ 30ರಿಂದ ಬೆಂಗಳೂರು ಮತ್ತು ದುಬೈ ನಡುವೆ ಪ್ರತಿ ನಿತ್ಯ ಸೇವೆ ಒದಗಿಸಲಿದೆ. ಇದಕ್ಕಾಗಿ 2 ವಿಮಾನಗಳನ್ನು ಎಮಿರೇಟ್ಸ್ ನಿಯೋಜನೆ ಮಾಡಿದೆ. ಬೆಂಗಳೂರಿಗೂ ಜಂಬೋ ವಿಮಾನ ಸೇವೆ ಆರಂಭಿಸಿರುವುದರಿಂದ ಬೆಂಗಳೂರು ದೇಶದ 2ನೇ ನಗರ ಎನಿಸಿಕೊಂಡಿದೆ. ಪ್ರತಿ ನಿತ್ಯ 2 ನಗರಗಳ ನಡುವೆ ಓಡಾಡುವ ವಿಮಾನ ದುಬೈನಿಂದ ರಾತ್ರಿ 9.35ಕ್ಕೆ ಹೊರಟು ಮಧ್ಯರಾತ್ರಿ 2.30ಕ್ಕೆ ವಿಮಾನ ತಲುಪಲಿದೆ. ಮತ್ತೆ ಮಧ್ಯಾಹ್ನ 4.30ಕ್ಕೆ ಬೆಂಗಳೂರಿನಿಂದ ಹೊರಟು ಸಾಯಂಕಾಲ 7.20ಕ್ಕೆ ದುಬೈ ತಲುಪಲಿದೆ.
ಕನ್ನಡದಲ್ಲೇ ಪ್ರಕಟಣೆ ಕೊಟ್ಟ ಕನ್ನಡಿಗ ಪೈಲಟ್
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿ ಬಂದಿಳಿದ ಏರ್‌ಬಸ್ ಎ380ಯ ಪೈಲಟ್ ಕರ್ನಾಟಕದವರಾಗಿದ್ದಾರೆ. ಇವರು ಉಡುಪಿ ಮೂಲದವರಾಗಿದ್ದು ಕಳೆದ 15 ವರ್ಷಗಳಿಂದ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಮಾನ ಬೆಂಗಳೂರು ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಪೈಲಟ್ ಸಂದೀಪ್ ಪ್ರಭು ಕನ್ನಡದಲ್ಲೇ ಪ್ರಕಟಣೆ ನೀಡಿದ್ದಾರೆ. ಈ ಕುರಿತಾಗಿ ಅವರ ಸೋದರ ಟ್ವೀಟ್ ಮಾಡಿದ್ದು, ಮೊದಲ ಬಾರಿ ಕನ್ನಡ ನೆಲಕ್ಕೆ ಆಗಮಿಸಿದ ವಿಮಾನದಲ್ಲಿ ಕನ್ನಡದಲ್ಲೇ ಪ್ರಕಟಣೆ ನೀಡಿದ್ದು ಸಂತೋಷವಾಗಿದೆ ಎಂದಿದ್ದಾರೆ.
ಭಾರಿ ಕನಸಿನೊಂದಿಗೆ ಸೃಷ್ಟಿಯಾಗಿತ್ತು ವಿಮಾನ
ವಿಮಾನ ಉದ್ಯಮದಲ್ಲಿ ಅಮೆರಿಕದ ಬೋಯಿಂಗ್ ಕಂಪನಿಯದ್ದೇ ಅಧಿಪತ್ಯ. ಅದರಲ್ಲೂ ದೂರ ಪ್ರಯಾಣದ ವಿಮಾನಗಳ ಪೈಕಿ ಅದಕ್ಕೆ ಸರಿಸಾಟಿಯೇ ಇಲ್ಲ. ಬೋಯಿಂಗ್ ಈ ಪಾರಮ್ಯಕ್ಕೆ ಸೆಡ್ಡು ಹೊಡೆಯಲು 380ಎ ವಿಮಾನ ನಿರ್ಮಾಣದ ಘೋಷಣೆಯನ್ನು ಫ್ರಾನ್ಸ್‌ನ ಏರ್‌ಬಸ್ ಸಂಸ್ಥೆ 1993ರಲ್ಲಿ ಮಾಡಿತು. ಐಷಾರಾಮಿ ಸೇವೆ, ಇಂಧನ ಬಳಕೆಯಲ್ಲಿ ಮಿತವ್ಯಯ ಉದ್ದೇಶ ಸಂಸ್ಥೆಯದ್ದಾಗಿತ್ತು. ಅಂತಿಮವಾಗಿ 2003ರಲ್ಲಿ ವಿಮಾನಗಳ ನಿರ್ಮಾಣ ಆರಂಭವಾಗಿ 2007ರ ಅ.15ರಂದು ಸಿಂಗಾಪುರ ಏರ್‌ಲೈನ್ಸ್‌ಗೆ ಮೊದಲ ವಿಮಾನ ಹಸ್ತಾಂತರ ಮಾಡಲಾಯಿತು. ಇದುವರೆಗೂ ಕಂಪನಿ ಇಂಥ 254 ವಿಮಾನ ತಯಾರಿಸಿದೆ.
ಇದನ್ನು ಓದಿ: ದೆಹಲಿ, ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ 'ಡಿಜಿಯಾತ್ರಾ' ಸೇವೆ,ಬಳಸುವುದು ಹೇಗೆ?
ಎರಡು ಮಹಡಿ, 840 ಸೀಟಿನ ಬೃಹತ್ ಗಾತ್ರ
ಏರ್‌ಬಸ್ ಎ-380 ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ವಿಮಾನ. ಜೊತೆಗೆ ಎರಡು ಮಹಡಿ ಹೊಂದಿದೆ. ವಿಮಾನ 240 ಅಡಿ ಉದ್ದ, 261 ಅಡಿ ಅಗಲ, 79 ಅಡಿ ಎತ್ತರ ಹೊಂದಿದೆ. ವಿಮಾನ 5.4 ಲಕ್ಷ ಕೆಜಿಯಷ್ಟು ತೂಕ ಎತ್ತಿಕೊಂಡು ಸರಾಗವಾಗಿ ಹಾರಬಲ್ಲದು. 3 ಕ್ಲಾಸ್‌ಗಳಲ್ಲಿ ಸರಾಸರಿ 555 ಸೀಟುಗಳನ್ನು ಹೊಂದಿದೆ. ಗರಿಷ್ಠ 840 ಸೀಟುಗಳನ್ನು ಅಳವಡಿಸುವ ಅವಕಾಶವಿದೆ. ಈ ವಿಮಾನವನ್ನು ಒಟ್ಟು 13 ವಿಮಾನಯಾನ ಸಂಸ್ಥೆಗಳು ಖರೀದಿ ಮಾಡಿವೆ. ಇಷ್ಟು ಬೃಹತ್ ಗಾತ್ರ ಹೊಂದಿದ್ದರೂ ಸುಧಾರಿತ ತಂತ್ರಜ್ಞಾನದೊಂದಿಗೆ ಒಮ್ಮೆ ಇಂಧನ ಭರ್ತಿ ಮಾಡಿಕೊಂಡು ತಡೆರಹಿತವಾಗಿ 14816 ಕಿ.ಮೀ. ದೂರ ಪ್ರಯಾಣಿಸಬಲ್ಲದು.
ಎ380 ಬೆನ್ನಲ್ಲೇ ಇತರೆ ವಿಮಾನ ಹಾರುವಂತಿಲ್ಲ
ಬೃಹತ್ ಗಾತ್ರದ ವಿಮಾನವಾಗಿರುವ ಏರ್‌ಬಸ್ ಎ 380 ಹಾರುವಾಗ ಅದನ್ನು ಅನುಸರಿಸುವ ಇತರ ವಿಮಾನಗಳಿಗೆ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದನ್ನು ವೇಕ್ ಟರ್ಬುಲೆನ್ಸ್ ಎನ್ನಲಾಗುತ್ತದೆ. 2017ರಲ್ಲಿ ಒಂದು ಲಘು ವಿಮಾನ ಎ 380 ಸಾಗಿದ ಹಾದಿಯನ್ನು ಕ್ರಾಸ್ ಮಾಡುವ ಸಮಯದಲ್ಲಿ ಗಾಳಿಯಲ್ಲಿ ಪಲ್ಟಿಯಾಗಿತ್ತು. ಹಾಗಾಗಿ ಈ ವಿಮಾನ ಬಳಸಿದ ರನ್‌ವೇಯನ್ನೇ ಬಳಸಿ ಇತರ ವಿಮಾನಗಳು ಟೇಕಾಫ್ ಆಗಬೇಕಾಗಿದ್ದರೆ 4 ನಿಮಿಷಗಳು ಕಾಯುವಂತೆ ಸೂಚನೆ ನೀಡಲಾಗುತ್ತದೆ.
ಕಿಕ್ ಏರಿಸಿಕೊಳ್ಳಲು ಬಾರ್, ಸ್ಪಾ, ಮಸಾಜ್ ಸೆಂಟರ್
ಏರ್‌ಬಸ್‌ನ ಮೇಲ್ಭಾಗದ ಡೆಕ್‌ನಲ್ಲಿ ಓನಿಕ್ಸ್ ಕೌಂಟರ್‌ಟಾಪ್‌ಗಳ ಬಾರ್ ಹೊಂದಿರುವುದು ಸಹ ಈ ವಿಮಾನದ ವಿಶೇಷತೆ. ಅಲ್ಲದೇ ಸಂಪೂರ್ಣವಾಗಿ ಕಾರ‍್ಯ ನಿರ್ವಹಿಸುವ ಶವರ್‌ಗಳನ್ನು ಎಮಿರೇಟ್ಸ್ ಮತ್ತು ಎತಿಹಾದ್ ಒಡೆತನದಲ್ಲಿರುವ ವಿಮಾನಗಳಲ್ಲಿ ಅಳವಡಿಸಲಾಗಿದೆ. ವಿಮಾನದ ಎಲ್ಲಾ ಸೀಟುಗಳಲ್ಲೂ ದೊಡ್ಡ ಪರದೆಯ ಟೀವಿ ಅಳವಡಿಸಲಾಗಿದೆ. ಪ್ರಯಾಣದ ವೇಳೆ ಅನುಕೂಲಕ್ಕಾಗಿ ವಿಶ್ರಾಂತಿ ಜಾಗ, ಸಂಪೂರ್ಣ ಚಪ್ಪಟೆಯಾದ ಆಸನಗಳು, ಸ್ಪಾ, ಮಸಾಜ್ ಸೆಂಟರ್, ಖಾಸಗಿ ಸ್ಯೂಟ್‌ಗಳು ಸೇರಿದಂತೆ ಹಲವು ಐಷಾರಾಮಿ ವ್ಯವಸ್ಥೆಗಳನ್ನು ಹೊಂದಿದೆ.
ಹಲವು ದೇಶಗಳಿಂದ ರನ್‌ವೇ ವಿಸ್ತರಣೆ
ಈ ಬೃಹತ್ ವಿಮಾನ ತಮ್ಮ ದೇಶಗಳಿಗೂ ತನ್ನ ಸೇವೆಯನ್ನು ವಿಸ್ತರಿಸಬೇಕು ಎಂಬ ಆಸೆಯಿಂದ ಬಹಳಷ್ಟು ದೇಶಗಳು ತಮ್ಮ ದೇಶದಲ್ಲಿರುವ ವಿಮಾನ ನಿಲ್ದಾಣಗಳ ರನ್‌ವೇಗಳನ್ನೇ ಬದಲು ಮಾಡಿವೆ. ಜಂಬೋ ವಿಮಾನ ಇಳಿಯಲು ಬೇಕಾದ ಉದ್ದದ ರನ್‌ವೇ ಮತ್ತು ರನ್‌ವೇಗಳ ಪಕ್ಕದಲ್ಲಿ ಅಷ್ಟೇ ಅಗಲವಾದ ಖಾಲಿ ಜಾಗಗಳನ್ನು ನಿರ್ಮಾಣ ಮಾಡಿವೆ. ಈಗಲೂ ವಿಶ್ವದ 140 ವಿಮಾನ ನಿಲ್ದಾಣಗಳಲ್ಲಿ ಮಾತ್ರವೇ ಈ ವಿಮಾನ ಇಳಿಸಬಹುದು.
ಅತಿಯಾದ ಬೇಡಿಕೆಯೇ ಮುಳ್ಳಾಯ್ತು ಕೊನೆಗೆ
ಈ ಬೃಹತ್ ವಿಮಾನ ನಿರ್ಮಾಣ ಆರಂಭವಾದಾಗ ಎಲ್ಲಾ ಕಂಪನಿಗಳು ಸಾಕಷ್ಟು ಬೇಡಿಕೆಯನ್ನು ವ್ಯಕ್ತಪಡಿಸಿದ್ದವು. ಆದರೆ ನಿರ್ಮಾಣ ಆರಂಭವಾದಾಗಿನಿಂದಲೂ ವಿಮಾನದ ವಿತರಣೆ ತಡವಾಗುತ್ತಲೇ ಇತ್ತು. ಹೀಗಾಗಿ ವರ್ಷದಿಂದ ವರ್ಷಕ್ಕೆ ವಿಮಾನಗಳಿಗೆ ಬೇಡಿಕೆ ಕುಸಿಯುತ್ತಾ ಹೋಯಿತು. ಬೇಡಿಕೆಯ ವಿಮಾನಗಳ ಪ್ರಮಾಣ ಕುಸಿತ ಕಂಡ ಬಳಿಕ ಏರ್‌ಬಸ್‌ಗೆ ಭಾರಿ ನಷ್ಟ ಸಂಭವಿಸಿತ್ತು. ಹೀಗಾಗಿ ಅದು ಮಾರಾಟ ಮಾಡಬೇಕಿರುವ ವಿಮಾನಗಳ ಮೊತ್ತವನ್ನು ಹೆಚ್ಚು ಮಾಡಿತು. ಇದರಿಂದಾಗಿ ಬೇಡಿಕೆ ಮತ್ತಷ್ಟು ಕುಸಿತ ಕಂಡಿತು. ಹೀಗಾಗಿ 2021ರಿಂದ ಏರ್‌ಬಸ್ ತಯಾರಿಕೆಯನ್ನು ನಿಲ್ಲಿಸುವುದಾಗಿ 2019ರ ಫೆಬ್ರವರಿಯಲ್ಲಿ ಕಂಪನಿ ಘೋಷಿಸಿತು.
