ಬೆಂಗಳೂರು[ಅ.30]: ನಿರಂತರವಾಗಿ ಸುರಿಯುತ್ತಿರುವ ಮಳೆ, ಆರ್ಥಿಕ ಬಿಕ್ಕಟ್ಟು ಹಾಗೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವ ಸುಪ್ರೀಂಕೋರ್ಟಿನ ಆದೇಶ, ಈ ಬಾರಿ ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಪೆಟ್ಟು ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಪಟಾಕಿ ಮಾರಾಟವು ಶೇ.20 ರಿಂದ 30 ರಷ್ಟು ಕುಸಿದಿದೆ.

ಈ ಹಿಂದಿನ ವರ್ಷಗಳಲ್ಲಿ ದೀಪಾವಳಿ ವೇಳೆ ರಾಜ್ಯದಲ್ಲಿ ಪಟಾಕಿ ಮಾರಾಟ 100 ರಿಂದ 150 ಕೋಟಿ ರು. ವಹಿವಾಟು ಮುಟ್ಟುತ್ತಿತ್ತು. ಆದರೆ, ಈ ಬಾರಿ ವಹಿವಾಟು 80 ರಿಂದ 90 ಕೋಟಿ ರು.ಗೆ ಇಳಿಕೆಯಾಗಿದೆ. ಆದರೆ, ಬೆಂಗಳೂರಿನಲ್ಲಿ ಪಟಾಕಿ ವ್ಯಾಪಾರ ಕಳೆದ ಸಾಲಿನಷ್ಟೇ ಇದೆ. ಕಳೆದ ವರ್ಷ 60 ಕೋಟಿ ರು. ವ್ಯಾಪಾರ ವಾಗಿದ್ದರೆ, ಈ ಬಾರಿಯು ಅದೇ ಮಟ್ಟದಲ್ಲಿ ಪಟಾಕಿ ಮಾರಾಟ ಕಂಡಿದೆ. ಒಟ್ಟಾರೆ, ರಾಜ್ಯದಲ್ಲಿ ಈ ವರ್ಷ ಸಾಂಪ್ರದಾಯಿಕ ಪಟಾಕಿಗಳ ಮಾರಾಟವು ಹಿಂದಿನ ವರ್ಷಕ್ಕಿಂತ ಅರ್ಧದಷ್ಟಾಗಿದೆ ಎಂದು ಬೆಂಗಳೂರು ಪಟಾಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪರಂಜ್ಯೋತಿ ಮಾಹಿತಿ ನೀಡಿದರು.

ಗಿಫ್ಟ್‌ ಬಾಕ್ಸ್‌ಗಳ ಕೇಳುವವರಿಲ್ಲ:

ಈ ವರ್ಷ ಉತ್ಪಾದನೆ ಕೊರತೆ, ಹಸಿರು ಪಟಾಕಿ ಖರೀದಿ ಗೊಂದಲ, ಪಟಾಕಿ ಸಿಡಿಸುವವರ ಸಂಖ್ಯೆಯಲ್ಲೂ ಇಳಿಮುಖವಾಗಿರುವುದು ವ್ಯವಹಾರಕ್ಕೆ ಅಡ್ಡಿಯುಂಟಾಗಿದೆ. ಆಟಂಬಾಂಬ್‌, ಲಕ್ಷ್ಮೇ ಪಟಾಕಿ, ರಾಕೆಟ್‌ ಸೇರಿದಂತೆ ಹೆಚ್ಚು ಶಬ್ದ ಹಾಗೂ ವಾಯು ಮಾಲಿನ್ಯವಿರುವ ಪಟಾಕಿ ಖರೀದಿ ಶೇ.90ರಷ್ಟುಕಡಿಮೆಯಾಗಿದೆ. ಸ್ಕೈಶಾಟ್‌, ಹಸಿರು ಪಟಾಕಿ, ವಿಷ್ಣು ಚಕ್ರ, ಹೂಕುಂಡ, ಮಕ್ಕಳು ಸಿಡಿಸುವ ಪಟಾಕಿಗಳು, ಕಡಿಮೆ ಶಬ್ದ ಹೊರಸೂಸುವ ಪಟಾಕಿಗಳನ್ನು ಜನರು ಹೆಚ್ಚು ಖರೀದಿಸಿದ್ದಾರೆ. ಪಟಾಕಿ ತಯಾರಿಕಾ ವೆಚ್ಚ, ಕೂಲಿ, ಸಾಗಣೆ, ಜಿಎಸ್‌ಟಿ ಹೆಚ್ಚಳದಿಂದ ಬೆಲೆ ಹೆಚ್ಚಾಗಿತ್ತು. ಈ ವರ್ಷ ಕನಿಷ್ಠ 1000ರಿಂದ 3000 ರು. ಬೆಲೆ ಹೊಂದಿರುವ ಗಿಫ್ಟ್‌ ಬಾಕ್ಸ್‌ಗಳ ಮಾರಾಟವಾಗಿಲ್ಲ. ದೀಪಾವಳಿ ಹಬ್ಬದ ಕೊನೆಯ ಎರಡು ದಿನಗಳಲ್ಲಿ ಉತ್ತಮ ವ್ಯಾಪಾರವಾಗಿದೆ. ರಾಜ್ಯದಲ್ಲಿ ಈಗಾಗಿರುವ ವ್ಯಾಪಾರಕ್ಕಿಂತ ಶೇ.25ರಿಂದ 30ರಷ್ಟುಅಧಿಕ ವ್ಯಾಪಾರ ಆಗಬಹುದೆಂದು ನಿರೀಕ್ಷಿಸಲಾಗಿತ್ತು ಎಂದು ಹೇಳಿದರು.

ಶೇ .40 ರಷ್ಟು ಬೇಡಿಕೆ ಕುಸಿತ:

ಕಳೆದ ಸಾಲಿಗೆ ಹೋಲಿಸಿದಾಗ ಪಟಾಕಿ ಪೂರೈಕೆಯೂ ಕುಂಠಿತಗೊಂಡಿದ್ದು, ವ್ಯಾಪಾರ ಕುಸಿದಿದೆ. ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಉತ್ಪಾದನೆ ಸಮರ್ಪಕವಾಗಿ ಆಗಿರಲಿಲ್ಲ. ಬೆಲೆಯಲ್ಲೂ ಹೆಚ್ಚಳವಾಗಿತ್ತು. ಇದರೊಂದಿಗೆ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣ ಪಟಾಕಿ ಉದ್ಯಮವನ್ನು ಕಂಗೆಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ. 40ರಷ್ಟುಬೇಡಿಕೆ ಕುಸಿದಿದೆ ಎಂದು ಪಟಾಕಿ ಮಾರಾಟಗಾರರು ಮಾಹಿತಿ ನೀಡಿದರು.

ಬೇಡಿಕೆ ತಕ್ಕಷ್ಟು  ಪೂರೈಕೆಯಿಲ್ಲ:

ಜನರು ಹಸಿರು ಪಟಾಕಿಗೆ ಹೆಚ್ಚು ಒಲವು ತೋರಿದ್ದರೂ ಬೇಡಿಕೆಗೆ ತಕ್ಕಷ್ಟುಪಟಾಕಿ ಪೂರೈಕೆ ಆಗಿರಲಿಲ್ಲ. ಕೇವಲ ಶೇ.60-70ರಷ್ಟುಮಾತ್ರ ಹಸಿರು ಪಟಾಕಿ ಮಾರುಕಟ್ಟೆಗೆ ಸರಬರಾಜಾಗಿತ್ತು. ನಾವು ಸುಪ್ರೀಂ ಕೋರ್ಟ್‌ ನಿರ್ದೇಶನಕ್ಕೆ ತಲೆಬಾಗಿ ಸಾಂಪ್ರದಾಯಿಕ ಪಟಾಕಿಗಳನ್ನು ತರಿಸಿರಲಿಲ್ಲ. ಹೊಸೂರು ರಸ್ತೆಯಲ್ಲಿ 40ರಿಂದ 50 ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತದೆ. ಹಸಿರು ಪಟಾಕಿ ಬಂದರೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಭಯವಿತ್ತು. ಆದರೆ, ನಿರೀಕ್ಷೆಗೆ ಮೀರಿ ಬೆಂಬಲ ದೊರಕಿದೆ. 2018ರಲ್ಲಿ 10 ಲಕ್ಷ ವ್ಯಾಪಾರ ನಡೆದಿತ್ತು. ಈ ಬಾರಿ ಅದಕ್ಕಿಂತ ಶೇ.10ರಷ್ಟುಕಡಿಮೆಯಾಗಿದೆ. ನಮ್ಮ ಸುತ್ತಮುತ್ತ ಅಂದಾಜು 3ರಿಂದ 4 ಕೋಟಿ ರು. ವ್ಯಾಪಾರವಾಗಿದೆ. ಜನರ ಸ್ಪಂದನೆ ನಮಗೂ ಖುಷಿ ನೀಡಿದೆ. ಹಸಿರು ಪಟಾಕಿ ಬಂದು ಪಟಾಕಿ ತಯಾರಕರ ಜೀವನವನ್ನೂ ಉಳಿಸಿದೆ ಎಂದು ಹೊಸೂರು ರಸ್ತೆಯ ಓಂ ಸಾಯಿ ಪಟಾಕಿ ಮಾರಾಟಗಾರ ಹರಿಕೃಷ್ಣ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಾಂಪ್ರದಾಯಿಕ ಪಟಾಕಿ ವ್ಯಾಪಾರ ವರ್ಷದಿಂದ ವರ್ಷಕ್ಕೆ ಶೇ.5ರಿಂದ 8ರಷ್ಟುಕಡಿಮೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಈ ಬಾರಿ ಶೇ.10ರಿಂದ 15ರಷ್ಟುವ್ಯಾಪಾರ ಇಳಿಕೆಯಾಗಿದೆ. ಈ ವರ್ಷ ಶಿವಕಾಶಿಯಿಂದ ಸರಬರಾಜಾದ ಪಟಾಕಿ ಪ್ರಮಾಣದಲ್ಲೂ ಶೇ.30ರಷ್ಟುಕಡಿಮೆ ಇತ್ತು. ಜನರು ಸಹ ಗ್ರೀನ್‌ ಪಟಾಕಿಗೆ ಹೆಚ್ಚು ಆಸಕ್ತಿ ತೋರಿದ್ದಾರೆ ಎಂದು ಸುಲ್ತಾನ್‌ಪೇಟೆಯ ಸಂತೋಷ್‌ ಟ್ರೇಡಿಂಗ್‌ ಸಂತೋಷ್‌ ಅವರು ಹೇಳಿದ್ದಾರೆ.  

ದೀಪಾವಳಿ: ಸಿಲಿಕಾನ್ ಸಿಟಿಯಲ್ಲಿ ಈ ಬಾರಿ ಶಬ್ದವೂ ಕಮ್ಮಿ, ಹೊಗೆಯೂ ಕಮ್ಮಿ

ಮುಂಬರುವ ವರ್ಷದಿಂದ ಪಟಾಕಿ ಮೇಲೆ ಹಸಿರು ಬಣ್ಣದ ಚಿಹ್ನೆಯ ಗುರುತು ಇರುತ್ತದೆ. ಲೈಸೆನ್ಸ್‌ ಪಡೆದವರಿಗೆ ಮಾತ್ರ ಹಸಿರು ಪಟಾಕಿ ಉತ್ಪಾದನೆ ಮಾಡುವಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಕಳೆದ ವರ್ಷ ಮಳೆಯಿಂದ ಶೇ.30 ರಷ್ಟು ವ್ಯಾಪಾರ ಕುಂಠಿತವಾಗಿತ್ತು. ಈ ಬಾರಿ ಮೈಸೂರು, ತುಮಕೂರು ಸೇರಿದಂತೆ ವಿವಿಧ ಮಹಾನಗರಗಳಲ್ಲಿ 10 ರಿಂದ 12 ಕೋಟಿ ವಹಿವಾಟು ನಡೆದಿದೆ ಎಂದು ಬೆಂಗಳೂರು ಪಟಾಕಿ ವ್ಯಾಪಾರಸ್ಥರ ಸಂಘ ಅಧ್ಯಕ್ಷ  ಅವರು ಪರಂಜ್ಯೋತಿ ಅವರು ತಿಳಿಸಿದ್ದಾರೆ.