ಬೆಂಗಳೂರು [ನ.14]:  ಕನ್ನಡ ಕಲಿಸದ ನಗರದ  44 ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳಲ್ಲಿ ಹಾಲಿ ಸ್ಥಿತಿಯೇನಿದೆ ಎಂಬ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನೂ ಈ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿಲ್ಲ ಎಂದು ಸಾಬೀತಾದರೆ ಮಾನ್ಯತೆ ರದ್ದುಪಡಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ಬೆಂಗಳೂರು ನಗರದಲ್ಲಿರುವ ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳ ಪೈಕಿ 44 ಶಾಲೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವರದಿ ನೀಡಿದೆ. ‘ಕನ್ನಡ ಕಲಿಕೆ’ ಕಾಯ್ದೆ- 2015 ರ ಪ್ರಕಾರ ರಾಜ್ಯದ ಪ್ರತಿ ಶಾಲೆಗಳು ಕನ್ನಡ ಕಲಿಸಬೇಕಾಗಿದೆ. ಆದರೆ ಕೆಲವು ಶಾಲೆಗಳು ಸಡ್ಡು ಹೊಡೆದು ನಿಯಮ ಉಲ್ಲಂಘಿಸಿವೆ ಎಂದು ಪ್ರಾಧಿಕಾರ ತನ್ನ ವರದಿಯಲ್ಲಿ ತಿಳಿಸಿದೆ. 

ಈ ಬಗ್ಗೆ ಮತ್ತೊಮ್ಮೆ ಸದರಿ ಶಾಲೆಗಳಲ್ಲಿ ಪರಿಶೀಲನೆ ನಡೆಸಿ ನ. 20 ರೊಳಗೆ ವರದಿ ನೀಡುವಂತೆ ಇಲಾಖೆಯ ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ ಎಂದರು.  

ಅಂತಾರಾಷ್ಟ್ರೀಯ ಹಾಗೂ ಕೇಂದ್ರೀಯ ಪಠ್ಯಕ್ರಮ ಬೋಧಿಸುವ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸಲಾಗುತ್ತಿದೆಯೇ ಎಂಬ ಬಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿಯು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕನ್ನಡ ಭಾಷಾ ತರಬೇತಿ ಪಡೆದಿರುವ ಶಿಕ್ಷಕರಿಂದ ಕನ್ನಡ ಕಲಿಸುತ್ತಿದ್ದಾರೆಯೇ ಅಥವಾ ಬೇರೆ ವಿಷಯ ಬೋಧಿಸುವ ಶಿಕ್ಷಕರು ಕಾಟಾಚಾರಕ್ಕಾಗಿ ಕನ್ನಡ ಕಲಿಸುತ್ತಾರೆಯೇ ಎಂಬುದನ್ನು ತಿಳಿಯಲಾಗುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನ.20ರಿಂದ ಶಾಲೆಗಳ ಗಣತಿ: ಸರ್ಕಾರಿ ಹಾಗೂ ಅನು ದಾನಿತ ಶಾಲೆಗಳಲ್ಲಿರುವ ಮೂಲಸೌಕರ್ಯ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗುಣಮಟ್ಟ ಪರಿಶೀಲನೆಗಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ನ. 20 ರಿಂದ ಡಿ. 20ರ ವರೆಗೆ ದೇಶಾದ್ಯಂತ 11.71 ಲಕ್ಷ ಶಾಲೆಗಳ ಗಣತಿ  ಮಾಡು ತ್ತಿದೆ. ಅದೇ ರೀತಿ ರಾಜ್ಯದಲ್ಲಿಯೂ ‘ಸುಮೀಕ್ಷಾ’ ಹೆಸರಿನಲ್ಲಿ 55, 965 ಶಾಲೆಗಳ ಗಣತಿ ಮಾಡಲಾ ಗುತ್ತದೆ ಎಂದರು. ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿಲ್ಲ.

ಬದಲಾಗಿ ತರಬೇತಿ ಹಂತದಲ್ಲಿರುವ ಹಾಗೂ ಡಯಟ್ ನಲ್ಲಿ ತರಬೇತಿ ಪಡೆಯು ತ್ತಿರುವ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. 3,731 ತಂಡಗಳು ಎಂಎಚ್ ಆರ್‌ಡಿ ಮೊಬೈಲ್ ಆ್ಯಪ್ ಮೂಲಕ ಗಣತಿ ಮಾಡಲಿವೆ. ಪ್ರತಿ ತಂಡವು 15 ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಲಿದೆ ಎಂದು ಹೇಳಿದರು