ಬೆಂಗಳೂರು [ನ.04]:  ರಾಜಧಾನಿ ಬೆಂಗಳೂರಿನಲ್ಲಿ 1.5 ಲಕ್ಷ ರುಗೆ ಮಗುವೊಂದನ್ನು ಮಾರಾಟ ಮಾಡಿರುವ ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಡ ಕೂಲಿ ಕಾರ್ಮಿಕರ ಅಪಹರಣ ಮಾಡಿದರೆ ಸೂಕ್ತ ತನಿಖೆ ನಡೆಯವುದಿಲ್ಲ. ಅಲ್ಲದೆ, ಯಾರೂ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ತಿಳಿದಿದ್ದ ಆರೋಪಿಗಳು, ಕೂಲಿ ಕಾರ್ಮಿಕರ ಮಕ್ಕಳನ್ನೇ ಗುರಿಯಾಗಿರಿಸಿಕೊಂಡಿದ್ದರು. ಮಕ್ಕಳನ್ನು ಅಪಹರಿಸಿ ಮಕ್ಕಳಿಲ್ಲದವರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬ್ಯಾಟರಾಯನಪುರದ ಲೋಕೇಶ್‌ ಅಲಿಯಾಸ್‌ ಲೋಕಿ (40) ಪ್ರಮುಖ ಆರೋಪಿಯಾಗಿದ್ದು, ಈತನ ಸಹೋದರಿ ಅನಿತಾ ಹಾಗೂ ಭಾವ ಸಂದೀಪ್‌ನನ್ನು ಬೆಂಗಳೂರಿನ ಗಿರಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಲೋಕೇಶ್‌ ಮೂರು ಬಾರಿ ಜೈಲಿಗೆ ಹೋಗಿ ಬಂದಿದ್ದು, ಈತನ ಮೇಲೆ ಮಂಡ್ಯದಲ್ಲಿ ಕೊಲೆ ಯತ್ನ, ಬೆಂಗಳೂರಿನ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸರ ಕಳ್ಳತನ, ದ್ವಿಚಕ್ರ ಕಳವು ಪ್ರಕರಣಗಳಿವೆ. ಜೈಲಿನಿಂದ ಹೊರ ಬಂದ ಬಳಿಕ ಆಟೋ ಓಡಿಸುವ ಕೆಲಸ ಮಾಡುತ್ತಿದ್ದ ಲೋಕೇಶ್‌, ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಕ್ಕಳನ್ನು ಅಪಹರಿಸಿ ಮಾರಾಟ ಮಾಡುವ ದಂಧೆಗೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2 ದಿನದಲ್ಲಿ ಮಗು ಪತ್ತೆ:

ಯಾದಗಿರಿ ಜಿಲ್ಲೆ ಸುರಪುರ ಮೂಲದ ದಂಪತಿ ಹೊಸಕೆರೆಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದರು. ಆರೋಪಿ ಲೋಕೇಶ್‌, ಆಟವಾಡುತ್ತಿದ್ದ ಕೂಲಿ ದಂಪತಿಯ ಮೂರು ವರ್ಷದ ಮಗು ಭಾವೇಶ್‌ನನ್ನು ತಿಂಡಿ ಕೊಡಿಸುವ ನೆಪದಲ್ಲಿ ತನ್ನ ಆಟೋದಲ್ಲಿ ಮಾರ್ಚ್ ತಿಂಗಳಲ್ಲಿ ಅಪಹರಿಸಿದ್ದ. ಕೃತ್ಯಕ್ಕೆ ತನ್ನ ಸಹೋದರಿ ಅನಿತಾ, ಆಕೆಯ ಪತಿಯನ್ನು ಬಳಸಿಕೊಂಡಿದ್ದ. ಅಪಹರಣ ಮಾಡಿದ್ದ ಮಗುವನ್ನು ಆರೋಪಿಗಳು ಮಕ್ಕಳಿಲ್ಲದ ದಂಪತಿಯೊಬ್ಬರಿಗೆ 1.5 ಲಕ್ಷ ರು.ಗೆ ಮಾರಾಟ ಮಾಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಗು ನಾಪತ್ತೆಯಾಗಿರುವ ಸಂಬಂಧ ಮಗುವಿನ ತಂದೆ ಗಿರಿನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಸುಳಿವು ಆಧರಿಸಿ, ಅಪಹರಣವಾದ ಎರಡೇ ದಿನದಲ್ಲಿ ಮಗುವನ್ನು ರಕ್ಷಣೆ ಮಾಡಿದ್ದರು. ಆದರೆ ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳ ಬಂಧನಕ್ಕೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಶನಿವಾರ (ನ.2)ದಂದು ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಮತ್ತೊಂದು ಮಗು ಅಪಹರಣಕ್ಕೆ ಸ್ಕೆಚ್‌

ಆರೋಪಿ ಲೋಕೇಶ್‌ ಮೊಬೈಲ್‌ನಲ್ಲಿ ಮೂರು ಮಕ್ಕಳ ಫೋಟೋಗಳು ಪತ್ತೆಯಾಗಿವೆ. ಈ ಪೈಕಿ ಒಂದು ಮಗುವಿನ ಪತ್ತೆಗೆ ಆರೋಪಿ ಸಂಚು ರೂಪಿಸಿದ್ದ. ಒಂದೆರಡು ಬಾರಿ ಮಗುವಿಗೆ ತಿಂಡಿ ಕೊಡಿಸಿ ಪರಿಚಯ ಮಾಡಿಕೊಂಡಿದ್ದ. ಈ ಮಕ್ಕಳ ಫೋಟೋಗಳನ್ನು ತೆಗೆದು ಆರೋಪಿ ಮಕ್ಕಳಿಲ್ಲದವರಿಗೆ ತೋರಿಸಿ ಮಾರಾಟ ಮಾಡಲು ಮುಂದಾಗಿದ್ದ. ಅಪಹರಣ ಮಾಡಿದ್ದ ಮಗು ಪಡೆದಿದ್ದ ದಂಪತಿಯನ್ನು ಪ್ರಕರಣದ ಪ್ರಮುಖ ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಳೋರಿಲ್ಲವೆಂದು ಕೂಲಿಕಾರರ ಮಕ್ಕಳ ಕಳವು

ಮೊದಲು ದಂಪತಿಯೊಬ್ಬರು ಆರೋಪಿ ಲೋಕೇಶ್‌ ಬಳಿ ದತ್ತುಗೆ ಮಕ್ಕಳನ್ನು ಕೊಡಿಸುವಂತೆ ಹೇಳಿದ್ದರು. ಈ ವೇಳೆ ಆರೋಪಿ ಕಾನೂನಿನ ಪ್ರಕಾರ ಮಕ್ಕಳನ್ನು ಕೊಡಿಸುವುದು ವರ್ಷ ಹಿಡಿಯುತ್ತದೆ. ನನಗೆ ಪರಿಚಯ ಇರುವ ಮಕ್ಕಳನ್ನು ಕೊಡಿಸುತ್ತೇನೆ ಎಂದು ಹೇಳಿದ್ದ. ಇದನ್ನೇ ಅಸ್ತ್ರ ಮಾಡಿಕೊಂಡ ಆರೋಪಿ ಬಡ ಕೂಲಿ ಕಾರ್ಮಿಕರ ಮಕ್ಕಳ ಅಪಹರಣಕ್ಕೆ ಸಂಚು ರೂಪಿಸಿದ್ದ. ಮಕ್ಕಳನ್ನು ಅಪಹರಿಸಿ, ಮಕ್ಕಳಿಲ್ಲದವರಿಗೆ ಮಾರಾಟ ಮಾಡುತ್ತಿದ್ದ. ಬಡ ಕೂಲಿ ಕಾರ್ಮಿಕರ ಅಪಹರಣ ಮಾಡಿದರೆ ಸೂಕ್ತ ತನಿಖೆ ನಡೆಯುವುದಿಲ್ಲ. ಅಲ್ಲದೆ, ಯಾರೂ ಕೂಡ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ತಿಳಿದಿದ್ದ. ಒಂದು ಮಗು ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.