Asianet Suvarna News Asianet Suvarna News

ಬಿಬಿಎಂಪಿ ವ್ಯಾಪ್ತಿಯಲ್ಲಿ 1.81 ಲಕ್ಷ ಅನಧಿಕೃತ ಕಟ್ಟಡಗಳು!

* ಸರ್ವೆ ಮುಗಿದ ಬಳಿಕ ಮುಂದಿನ ಕ್ರಮ: ವಿಶೇಷ ಆಯುಕ್ತ ರವೀಂದ್ರ

* ಪಾಲಿಕೆ ವ್ಯಾಪ್ತಿಯಲ್ಲಿ 1,81 ಲಕ್ಷ ಅನಧಿಕೃತ ಕಟ್ಟಡ

* 2016 ಜ.1ರಿಂದ ಈವರೆಗೆ ನಿರ್ಮಾಣಗೊಂಡಿರುವ ಕಟ್ಟಡಗಳು

1 lakh 81 thousand Illegal Buildings in  BBPM pod
Author
Bangalore, First Published Jun 8, 2022, 5:53 AM IST

ಬೆಂಗಳೂರು(ಜೂ.08): ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ 36,759 ಕಟ್ಟಡ ಮತ್ತು ಅನಧಿಕೃತ 1,81,236 ಕಟ್ಟಡಗಳನ್ನು ಗುರುತಿಸಿದ್ದು, ಇವುಗಳ ಸರ್ವೆ ಕಾರ್ಯ ಮುಂದುವರೆದಿದೆ. ಈ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ರವೀಂದ್ರ ಅವರು, 2016 ಜನವರಿ 1ರಿಂದ ಈವರೆಗೆ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ಯೋಜನೆ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳು ಮತ್ತು ಅನಧಿಕೃತ ಕಟ್ಟಡಗಳು ಎಂದು ಎರಡು ರೀತಿಯಲ್ಲಿ ವರ್ಗೀಕರಣ ಮಾಡಿದ್ದೇವೆ. ಈ ಪೈಕಿ ಪ್ಲಾನ್‌ ನಿಯಮ ಉಲ್ಲಂಘಿಸಿದ 36,759 ಕಟ್ಟಡಗಳನ್ನು ಈವರೆಗೆ ಗುರುತಿಸಿದ್ದೇವೆ. ಅದರಲ್ಲಿ ನಿಯಮ ಉಲ್ಲಂಘನೆಯಾಗಿರುವ 16086 (ಶೇ.50) ಕಟ್ಟಡಗಳನ್ನು ಸರ್ವೆ ಮಾಡಿದ್ದೇವೆ. ಉಳಿದ ಕಟ್ಟಡಗಳ ಸರ್ವೆ ಮುಗಿದ ನಂತರ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ 1,81,236 ಕಟ್ಟಡಗಳನ್ನು ಗುರುತಿಸಲಾಗಿದೆ. ಮುಖ್ಯ ಆಯುಕ್ತರು ಎಲ್ಲ ವಲಯಗಳ ಎಂಜಿನಿಯರ್‌ಗಳಿಗೆ ಮತ್ತು ಆಯುಕ್ತರಿಗೆ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಸರ್ವೆ ಕಾರ್ಯ ಮುಗಿದ ಕೂಡಲೇ ನ್ಯಾಯಾಲಯ ಮತ್ತು ಮುಖ್ಯ ಆಯುಕ್ತರಿಗೆ ವರದಿಯನ್ನು ಸಲ್ಲಿಸುತ್ತೇವೆ. ನಂತರ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಪ್ರಗತಿಯಲ್ಲಿ ರಸ್ತೆ ಗುಂಡಿ ಭರ್ತಿ ಕಾಮಗಾರಿ:

ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಗತಿಯಲ್ಲಿದೆ. ಈ ಕುರಿತು ಹೈಕೋರ್ಚ್‌ಗೆ ಈಗಾಗಲೇ ಮಾಹಿತಿಯನ್ನು ಒದಗಿಸಿದ್ದೇವೆ. ರಸ್ತೆ ಗುಂಡಿಗಳ ಬಗ್ಗೆ ಮೊದಲ ಹಂತದ ಸರ್ವೆಯಲ್ಲಿ ಗುರುತಿಸಲಾಗಿದ್ದ 9 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ. ಪ್ರತಿ ದಿನ ರಸ್ತೆ ಗುಂಡಿಗಳ ಬಗ್ಗೆ ಸರ್ವೆ ಮಾಡಿದಂತೆ ಗುಂಡಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಹೀಗಾಗಿ 11,542 ರಸ್ತೆ ಗುಂಡಿಗಳನ್ನು ಗುರುತಿಸಿದ್ದು 1640 ರಸ್ತೆ ಗುಂಡಿಗಳನ್ನು ಮುಚ್ಚಲು ಬಾಕಿ ಇವೆ ಎಂದರು.

ಶೇ.70 ನಾಯಿಗಳಿಗೆ ಶಸ್ತ್ರಚಿಕಿತ್ಸೆ:

ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯಲ್ಲಿ ಪ್ರಾಣಿಗಳ ಸಂತಾನೋತ್ಪತ್ತಿ ನಿಯಂತ್ರಣ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಈವರೆಗೆ 1.10 ಲಕ್ಷ ನಾಯಿಗಳಿಗೆ ರೇಬಿಸ್‌ ಚುಚ್ಚುಮದ್ದು ನೀಡಲಾಗಿದೆ. ಪ್ರತಿ ದಿನ 240 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೇವೆ. ಪ್ರಸ್ತುತ ನಗರದಲ್ಲಿ 2.5ರಿಂದ 3 ಲಕ್ಷ ನಾಯಿಗಳು ಇವೆ ಎಂದು ಸರ್ವೆಯಲ್ಲಿ ಗೊತ್ತಾಗಿದೆ. ಇದರಲ್ಲಿ ಶೇ.70ರಷ್ಟುನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದು, ಶೇ.30ರಷ್ಟುಮಾತ್ರ ಬಾಕಿ ಇದೆ. ನಾಯಿಗಳ ಹಾವಳಿ ಅಥವಾ ನಾಯಿಗಳು ಕಚ್ಚಿದ ಪ್ರಕರಣಗಳು ಕಂಡು ಬಂದಲ್ಲಿ ಬಿಬಿಎಂಪಿಯ ಸಹಾಯವಾಣಿ: 6364893322 ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಅವರು ತಿಳಿಸಿದರು.

Follow Us:
Download App:
  • android
  • ios